ಕನ್ನಡಪ್ರಭ ವಾರ್ತೆ, ಯಳಂದೂರು
ತಳ ಸಮುದಾಯಗಳ ಅಭಿವೃದ್ಧಿಗೆ ನಾನು ಎಂದೆಂದಿಗೂ ಬದ್ಧನಾಗಿದ್ದು, ಇವರಿಗೆ ಬೇಕಾದ ನೆರವು ನೀಡುವಲ್ಲಿ ನಾನು ನನ್ನ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಭರವಸೆ ನೀಡಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಅಪ್ಪಣ್ಣ ೧೨ ನೇ ಶತಮಾನದ ಮಹಾನ್ ಶರಣರಾಗಿದ್ದರು. ೨೫೦ಕ್ಕೂ ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳಲ್ಲಿ ಸಮಾಜವನ್ನು ತಿದ್ದು ಅನೇಕ ಅಂಶಗಳಿದ್ದು ಇವರ ಪತ್ನಿ ಲಿಂಗಮ್ಮ ಕೂಡ ವಚನಕಾರ್ತಿಯಾಗಿದ್ದರು ಎನ್ನುವುದು ವಿಶೇಷವಾಗಿದ್ದು ಇವರ ತತ್ವಾದರ್ಶಗಳು ನಮಗೆ ಆದರ್ಶವಾಗಬೇಕು ಎಂದರು.
ಪಟ್ಟಣದಲ್ಲಿ ಸವಿತಾ ಸಮಾಜದ ಸಮುದಾಯ ಭವನ ಅಪೂರ್ಣವಾಗಿದೆ. ಇದಕ್ಕೆ ಇನ್ನೂ ೨೭ ಲಕ್ಷ ರೂ. ಹಣದ ನೆರವು ಬೇಕೆಂದು ಬೇಡಿಕೆ ಇಟ್ಟಿದ್ದರು. ಈಗ ೧೦ ಲಕ್ಷ ರು. ನೀಡಿದ್ದು ಮುಂದಿನ ದಿನಗಳಲ್ಲಿ ನನ್ನ ಅನುದಾನದಲ್ಲಿ ಹಣ ನೀಡಿ ಇದನ್ನು ಪೂರ್ಣಗೊಳಿಸಿ ಮುಂದಿನ ವರ್ಷ ಇದನ್ನು ಉದ್ಘಾಟಿಸಲು ನೆರವಾಗುವುದಾಗಿ ತಿಳಿಸಿದರು.ಮುಖ್ಯ ಭಾಷಣಕಾರ ಗುಂಬಳ್ಳಿ ಬಸವರಾಜು ಮಾತನಾಡಿ, ಹಡಪದ ಅಪ್ಪಣ್ಣ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದರು. ಮಿತ ಭಾಷಿಯಾಗಿದ್ದ ಇವರು ಅತ್ಯಂತ ಪ್ರಾಮಾಣಿಕ ಕಾಯಕನಿಷ್ಠೆಯುಳ್ಳ ವಸನಕಾರರಾಗಿದ್ದರು. ಬಂಡಾಯದ ನೆಲೆಯಲ್ಲಿ ಗುರುತಿಸಿಕೊಂಡ ಇವರು ಸಾಮಾಜಿಕ ಸಮಾನತೆ ಸಾರಿದ ಮಹಾನ್ ಸಾಧಕರಾಗಿದ್ದರು. ಅನುಭವ ಮಂಟಪದ ಮುಖ್ಯ ಸಚೇತಕಾಗಿ ಇವರ ಸೇವೆ ಗಣನೀಯವಾಗಿದ್ದು ಇವರ ತತ್ವಾದರ್ಶಗಳು ನಮಗೆ ಮಾದರಿಯಾಗಿವೆ ಎಂದರು.ಸವಿತಾ ಸಮಾಜದ ಅಧ್ಯಕ್ಷ ಪಿ.ಸಿ. ಶ್ರೀಕಂಠಸ್ವಾಮಿ ಮಾತನಾಡಿ, ನಮ್ಮ ಸಮುದಾಯ ಭವನಕ್ಕೆ ಶಾಸಕರು ಅನುದಾನ ನೀಡಿದ್ದು ಇದು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಇದರೊಂದಿಗೆ ನಮಗೆ ಸಂಗೀತ ಶಾಲೆ, ಬ್ಯೂಟಿಷಿಯನ್ ತರಬೇತಿ ನೀಡಲು ಸ್ಥಳಾವಕಾಶ ನೀಡಬೇಕು, ಬಿಳಿಗಿರಿರಂಗನಬೆಟ್ಟದ ಮುಡಿಕಟ್ಟೆಯಲ್ಲಿ ನಮ್ಮ ತಾಲೂಕಿನ ಸವಿತ ಬಂಧುಗಳಿಗೆ ಅವಕಾಶ ನೀಡಬೇಕು, ನಮ್ಮನ್ನು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿಸಬೇಕು, ಶವಸಂಸ್ಕಾರಕ್ಕಾಗಿ ಪ್ರತ್ಯೇಕ ಜಾಗವನ್ನು ನೀಡಬೇಕು. ಪ್ರತ್ಯೇಕ ವಿದ್ಯಾರ್ಥಿ ವೇತನ ನೀಡಬೇಕು, ಸವಿತಾ ಅಭಿವೃದ್ಧಿ ನಿಗಮದ ವತಿಯಿಂದ ಕ್ಷೌರಿಕ ಕಿಟ್‌ಗಳನ್ನು ವಿತರಣೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಪತ್ರ ಸಲ್ಲಿಸುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿದರು. ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು, ನಾಮನಿರ್ದೇಶಿತ ಸದಸ್ಯರಾದ ಮುನವ್ವರ್ ಬೇಗ್, ಲಿಂಗರಾಜಮೂರ್ತಿ ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ತಹಸೀಲ್ದಾರ್ ಎಸ್.ಎಲ್. ನಯನ, ಬಿಇಒ ಎಂ. ಮಾರಯ್ಯ, ಸಿಪಿಐ ಕೆ. ಶ್ರೀಕಾಂತ್, ದುಗ್ಗಹಟ್ಟಿ ಪಿ. ವೀರಭದ್ರಪ್ಪ, ಯದುಗಿರಿ ಸೇರಿದಂತೆ ಅನೇಕರು ಹಾಜರಿದ್ದರು.