ಕನ್ನಡಪ್ರಭ ವಾರ್ತೆ ವಿಜಯಪುರ
ಖೋಟಾನೋಟು ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆಗೆ ಒಳಗಾಗಿ ಕಳೆದ 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮಂಟೂರ ಗ್ರಾಮದ ಆರೋಪಿ ರಾಜು ಅಲಿಯಾಸ್ ಬಸವರಾಜು ನಾಯ್ಕನನ್ನು ಗಾಂಧಿಚೌಕ್ ಠಾಣೆ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಏನಿದು ಘಟನೆ?:2001 ಮೇ 14ರಂದು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಖೋಟಾನೋಟು ಪ್ರಕರಣ (ನಂ.54-2001 ಕಲಂ.489(b), 489(c) ಐಪಿಸಿ ಅಡಿಯಲ್ಲಿ ) ದಾಖಲಾಗಿತ್ತು. ನ್ಯಾಯಾಲಯ ಇದರ ವಿಚಾರಣೆ ನಡೆಸಿ, ಪ್ರಕರಣದ 3ನೇ ಆರೋಪಿ ರಾಜು ಅಲಿಯಾಸ್ ಬಸವರಾಜು ನಾಯ್ಕಗೆ 2011 ಅಕ್ಟೋಬರ್ 21 ರಂದು ವಿಜಯಪುರದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿತ್ತು.ಆದರೆ, ಆರೋಪಿ ಬಸವರಾಜ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬೆಂಗಳೂರಿನ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿ ಮೇಲ್ಮನವಿ ಸಲ್ಲಿಸಿದ್ದ. ಆದರೆ, ಎರಡೂ ನ್ಯಾಯಾಲಯಗಳು ಕೆಳ ನ್ಯಾಯಾಲಯದ ಆದೇಶವನ್ನೇ ಎತ್ತಿ ಹಿಡಿದವು. ನ್ಯಾಯಾಲಯದ ಆದೇಶದಂತೆ ಶಿಕ್ಷಿತ ಆರೋಪಿಯನ್ನು ಬಂಧಿಸಲು ವಾರಂಟ್ ಜಾರಿ ಮಾಡಲಾಗಿತ್ತು. ಆದರೆ, 21 ವರ್ಷಗಳ ಹಳೆಯ ಪ್ರಕರಣದಲ್ಲಿ ಶಿಕ್ಷಿತ ಆರೋಪಿ ರಾಜು ನಾಯ್ಕ ಯಾರಿಗೂ ಗೊತ್ತಾಗದಂತೆ ತಲೆಮರೆಸಿಕೊಂಡಿದ್ದ.ಕುಟುಂಬದೊಂದಿಗೆ, ಸಂಬಂಧಿಕರೊಂದಿಗೆ ಎಲ್ಲರಿಂದ ಸಂಪರ್ಕವನ್ನು ಕಡಿದುಕೊಂಡು ತಲೆ ಮರೆಸಿಕೊಂಡಿದ್ದ. ಈ ಆರೋಪಿಯನ್ನು ಹುಡುಕಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಹಾಗೂ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಡಿವೈಎಸ್ಪಿ ಬಸವರಾಜ ಯಲಿಗಾರ ನೇತೃತ್ವದಲ್ಲಿ ಗಾಂಧಿಚೌಕ್ ಪೊಲೀಸ್ ಠಾಣೆಯ ಅಧಿಕಾರಿ ಪ್ರದೀಪ ತಳಕೇರಿ ಹಾಗೂ ಸಿಬ್ಬಂದಿ ತಂಡವನ್ನು ರಚಿಸಲಾಗಿತ್ತು. ಬಳಿಕ, ಪೊಲೀಸರ ತಂಡ ಈತನನ್ನು ಧಾರವಾಡ ಜಿಲ್ಲೆಯ ಕಲಘಟಗಿ ಸಮೀಪ ರಾಮನಾಳ ಎಂಬ ಗ್ರಾಮದ ಜಮೀನೊಂದರಲ್ಲಿ ಹೆಸರು ಬದಲಾಯಿಸಿಕೊಂಡು ಕೆಲಸ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಕಲೆ ಹಾಕಿತ್ತು. ನಂತರ ಅಲ್ಲಿಗೆ ತೆರಳಿದ ಪೊಲೀಸರ ತಂಡ 2024 ಜುಲೈ 29ರಂದು ಶಿಕ್ಷಿತ ಆರೋಪಿಯನ್ನು ಬಂಧಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಗಾಂಧಿಚೌಕ್ ಠಾಣೆಯ ಸಿಪಿಐ ಪ್ರದೀಪ ತಳಕೇರಿ, ಪಿಎಸೈಗಳಾದ ರಾಜು ಮಮದಾಪುರ, ಕೆ.ಆರ್.ಗವಾರ, ಸಿಬ್ಬಂದಿಯರಾದ ಬಿ.ಎಸ್.ಬಿರಾದಾರ, ರಾಮನಗೌಡ ಬಿರಾದಾರ, ಶಂಕರ ಕಮ್ಮಾರ, ಮಹೇಶ ಐನಾಪುರಗೆ ಎಸ್ಪಿ ಋಷಿಕೇಶ ಸೋನಾವಣೆ ಅಭಿನಂದಿಸಿ ಬಹುಮಾನ ಘೋಷಿಸಿದ್ದಾರೆ.ಜೈಲು ಶಿಕ್ಷೆಗೆ ಗುರಿಯಾಗಿ ಕಳೆದ 21ವರ್ಷಗಳಿಂದ ನಾಪತ್ತೆಯಾಗಿದ್ದ ಆರೋಪಿಯನ್ನು ಪತ್ತೆ ಹಚ್ಚಲು ತಂಡ ರಚನೆ ಮಾಡಲಾಗಿತ್ತು. ಯಾರ ಕೈಗೂ ಸಿಗದೆ ಹೆಸರು ಬದಲಾಯಿಸಿಕೊಂಡು ಮರೆಮಾಚಿಕೊಂಡಿದ್ದ ಆರೋಪಿ ರಾಜುನನ್ನು ನಮ್ಮ ತಂಡದ ಪೊಲೀಸರು ಪತ್ತೆಹಚ್ಚಿ ಆತನನ್ನು ಬಂಧಿಸಿದ್ದಾರೆ. -ಋಷಿಕೇಶ ಸೋನಾವಣೆ, ವಿಜಯಪುರ ಎಸ್ಪಿ.