ಕನ್ನಡಪ್ರಭ ವಾರ್ತೆ ಯಾದಗಿರಿ
‘ಕರ್ನಾಟಕ ರಕ್ಷಣಾ ವೇದಿಕೆ ನಡೆ ಹಳ್ಳಿ ಕಡೆ..’ ವಿಶೇಷ ಕಾರ್ಯಕ್ರಮ ನಡೆಸಲು, ಆ ಮೂಲಕ ಗ್ರಾಮೀಣ ಭಾಗದ ಸಮಸ್ಯೆಗಳು ವಿಶೇಷವಾಗಿ ಶಿಕ್ಷಣ, ಮೂಲಸೌಕರ್ಯ ಸಮಸ್ಯೆ ಪರಿಹರಿಸಲು ತಾಲೂಕು ಹಾಗೂ ಗ್ರಾಮೀಣ ಕರವೇ ಕಾರ್ಯಕರ್ತರು ಶ್ರಮಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕ್ಷ ಟಿ.ಎನ್.ಭೀಮುನಾಯಕ್ ಸಲಹೆ ನೀಡಿದರು.ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜರುಗಿದ ಕರವೇ ಜಿಲ್ಲಾ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳು ಬಹಳಷ್ಟಿವೆ, ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಗಳು ಇನ್ನು ಹೆಚ್ಚಾಗಿದ್ದು, ಇವುಗಳ ಪರಿಹಾರಕ್ಕೆ ಕರವೇ ಕಾರ್ಯಕರ್ತರು ಹೋರಾಟ ರೂಪಿಸಬೇಕು ಎಂದು ತಿಳಿಸಿದರು.
ವಿಶೇಷವಾಗಿ, ಗುರುಮಠಕಲ್ ತಾಲೂಕಿನಾದ್ಯಂತ ಅನೇಕ ಸಮಸ್ಯೆಗಳಿವೆ. ಅನೇಕ ಹಳ್ಳಿಗಳು ಇನ್ನು ‘ಪಲ್ಲಿ’ ಎಂದು ತೆಲುಗಿನಲ್ಲಿಯೇ ಇದ್ದು, ಇವುಗಳ ಬದಲಿಸಲು ಜಿಲ್ಲಾಡಳಿತ, ಸಚಿವ, ಶಾಸಕರು ಶ್ರಮಿಸಬೇಕು. ಈಗಾಗಲೇ ಕೋಲಾರದ ಬಾಗೇಪಲ್ಲಿಯನ್ನು ಸರ್ಕಾರ ಭಾಗ್ಯನಗರ ಎಂದು ಬದಲಿಸಿದೆ. ಇದೇ ಮಾದರಿಯಲ್ಲಿ ಗುರುಮಠಕಲ್ ತಾಲೂಕಿನಲ್ಲಿ ಹತ್ತಾರು ಹಳ್ಳಿಗಳು ‘ಪಲ್ಲಿ’ಗಳಾಗಿಯೇ ಉಳಿದಿವೆ. ಇವನ್ನು ಬದಲಿಸಲು ಹೋರಾಟ ಮಾಡಬೇಕೆಂದು ತಿಳಿಸಿದರು.ಮೋಟ್ನಳ್ಳಿ ಮೊರಾರ್ಜಿ ವಸತಿ ಶಾಲೆ ಶಿಥಿಲಗೊಂಡಿದ್ದು, ಅದನ್ನು ಬಂದಳ್ಳಿಗೆ ಸ್ಥಳಾಂತರಿಸಲಾಗಿದೆ. 5 ವರ್ಷಗಳಾದರೂ ಕಟ್ಟಡ ದುರಸ್ತಿ ಮಾಡಿಸಲು ಆಗಿಲ್ಲ. ಆ ಶಾಲೆಯ ಮಕ್ಕಳ ಸಮಸ್ಯೆ ಕಾಣುವುದಿಲ್ಲವೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸೌಲಭ್ಯ ಇರುವ ಶಾಲೆಗಳಿಗೆ ಭೇಟಿ ನೀಡುವ ಶಾಸಕ, ಸಚಿವ ಹಾಗೂ ಇನ್ನಿತರ ಜನಪ್ರತಿನಿಧಿಗಳಿಗೆ ಮೋಟ್ನಳ್ಳಿ ಶಾಲೆ ಸಮಸ್ಯೆ ಕಾಣುತ್ತಿಲ್ಲವೇ? ಎಂದು ಕೆಂಡಕಾರಿದರು.
ಬಂದಳ್ಳಿ ಏಕಲವ್ಯ ವಸತಿ ಶಾಲೆಗೂ ಮೂಲಭೂತ ಸೌಕರ್ಯಗಳಿಲ್ಲ, ಆರಂಭವಾದಾಗಿನಿಂದ ಸಮಸ್ಯೆಯ ಗೂಡಾಗಿದೆ ತಕ್ಷಣ ಜಿಲ್ಲಾಧಿಕಾರಿಗಳು ಈ ಎರಡು ಶಾಲೆಗಳ ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ಅದ್ಯಕ್ಷ ಮಲ್ಲು ಮಾಳಿಕೇರಿ, ಸಂತೋಷ ನಿರ್ಮಲಕರ್, ಚೌಡಯ್ಯ ಬಾವೂರ, ಹಣಮಂತ ಖಾನಳ್ಳಿ, ಶರಣಪ್ಪ ದಳಪತಿ, ಪಪ್ಪುಗೌಡ ಚಿನ್ನಾಕಾರ, ಪ್ರಕಾಶ ಪಾಟೀಲ್ ಜೈಗ್ರಾಮ್, ಸಾಹೇಬಗೌಡ ನಾಯಕ, ಅರ್ಜುನ ಪವಾರ್, ಯಮುನಯ್ಯ ಗುತ್ತೇದಾರ, ವಿಶ್ವರಾಜ ಪಾಟೀಲ್, ವೆಂಕಟೇಶ ಬೈರಿಮಡ್ಡಿ, ಶರಣಬಸಪ್ಪ ಯಲ್ಹೇರಿ, ಅಬ್ದುಲ್ ಚಿಗಾನೂರ, ಬಸವರಾಜ ಚೆನ್ನೂರ ಮುಂತಾದವರು ಪಾಲ್ಗೊಂಡಿದ್ದರು.