ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ಹೊರವಲಯದ ಕುಡುಪುವಿನಲ್ಲಿ ಗುಂಪಿನಿಂದ ಹಲ್ಲೆಗೊಳಗಾಗಿ ಯುವಕ ಮೃತಪಟ್ಟಿರುವ ಪ್ರಕರಣದ ತನಿಖೆಗೆ ವಿಶೇಷ ತನಿಖಾ ಸಂಸ್ಥೆ (ಎಸ್‌ಐಟಿ) ರಚಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಗುರುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹತ್ಯೆಯ ಹಿಂದೆ ಯಾರಿದ್ದಾರೆ ಎಂದು ಪತ್ತೆ ಹಚ್ಚಿ ಕ್ರಮಕೊಂಡರೆ ಅದು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಶಾಶ್ವತ ಶಾಂತಿ ನೆಲೆಸಲು ನೆರವಾಗಲಿದೆ ಎಂದರು.ದ.ಕ. ಜಿಲ್ಲೆಯಲ್ಲಿ ಪಬ್ ದಾಳಿ, ಚಚ್ ದಾಳಿಗಳ ಫಲಿತಾಂಶ, ಪರಿಣಾಮ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಧರ್ಮಾಧಾರಿತ ರಾಜಕೀಯ ಹತ್ಯೆಗಳಿಗೆ ಎರಡೂ ಧರ್ಮಗಳ ಮತೀಯವಾದಿ ಶಕ್ತಿಗಳು ಕಾರಣ. ಕುಡುಪುವಿನಲ್ಲಿ ನಡೆದಿರುವ ಕೋಮು ಘರ್ಷಣೆ ಅಲ್ಲ. ‘ಟಾರ್ಗೆಟೆಡ್ ಕಿಲ್ಲಿಂಗ್’. ಇದು ಅತ್ಯಂತ ಅಪಾಯಕಾರಿಯಾಗಿದ್ದು, ಗುಂಪು ಹಲ್ಲೆ ಪ್ರಕರಣದ ಮೂಲಕ ಅದರ ಆರಂಭವಾಗಿದೆ. ಇದನ್ನು ಮೊಳಕೆಯಲ್ಲೇ ಚಿವುಟಬೇಕಾದ ಅನಿವಾರ್ಯತೆ ಇದೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಎಸ್‌ಐಟಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಿಲ್ಲೆಯ ಮುಖಂಡರ ನಿಯೋಗದ ಜತೆಗೆ ಭೇಟಿಯಾಗಿ ಘಟನೆಯ ಸಂಪೂರ್ಣ ಚಿತ್ರಣವನ್ನು ಅವರಿಗೆ ವಿವರಿಸಲಾಗುವುದು ಎಂದರು.‘ಪಾಕಿಸ್ಥಾನ ಜಿಂದಾಬಾದ್’ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಅಲ್ಲಿ ಏನು ನಡೆದಿದೆ ಎಂದು ಅಲ್ಲಿದ್ದವರಿಗೆ ಮಾತ್ರ ಗೊತ್ತಿದೆ. ಹಲ್ಲೆ ಮಾಡಿದವರು, ಸಾಕ್ಷಿದಾರರು ಮತ್ತು ಹಲ್ಲೆಗೊಳದಾದವರಿಗೆ ಮಾತ್ರ. ಸದ್ಯ ಹಲ್ಲೆಗೊಳಗಾದ ವ್ಯಕ್ತಿ ಈಗ ಜೀವಂತವಿಲ್ಲ. ಹಲ್ಲೆ ಮಾಡಿದವರು ಮತ್ತು ಸಾಕ್ಷಿದಾರರನ್ನು ಹಿಡಿದು ಬಾಯಿ ಬಿಡಿಸಿದರೆ ಗೊತ್ತಾಗುತ್ತದೆ ಎಂದರು. ಗೃಹ ಸಚಿವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಸ್ಥಳೀಯ ಅಧಿಕಾರಿಗಳು ಏನು ಮಾಹಿತಿ ನೀಡುತ್ತಾರೋ ಅದನ್ನೇ ಆಧಾರವಾಗಿಟ್ಟುಕೊಂಡು ಗೃಹ ಸಚಿವರು ಹೇಳಿಕೆ ನೀಡುತ್ತಾರೆ ಎಂದರು.ಮುಖಂಡರಾದ ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಅಶ್ರಫ್ ಕೆ. ಬೇಬಿ ಕುಂದರ್, ಇಬ್ರಾಹಿಂ ನವಾಜ್, ನಝೀರ್ ಬಜಾಲ್ ಮತ್ತಿತರರಿದ್ದರು.