ರಾಮನಗರ: ಜಿಲ್ಲೆಯಲ್ಲಿ ದಾಖಲೆಗಳಿಲ್ಲದ ಜನವಸತಿ ಪ್ರದೇಶಗಳನ್ನು ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿಸಿ ಒಟ್ಟು 995 ಹೊಸ ಉಪಗ್ರಾಮಗಳನ್ನು ರಚಿಸುವ ಕಾರ್ಯ ಭರದಿಂದ ಸಾಗಿದೆ
ರಾಮನಗರ: ಜಿಲ್ಲೆಯಲ್ಲಿ ದಾಖಲೆಗಳಿಲ್ಲದ ಜನವಸತಿ ಪ್ರದೇಶಗಳನ್ನು ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿಸಿ ಒಟ್ಟು 995 ಹೊಸ ಉಪಗ್ರಾಮಗಳನ್ನು ರಚಿಸುವ ಕಾರ್ಯ ಭರದಿಂದ ಸಾಗಿದೆ.
ಈ ಮೊದಲು 2026ರ ಮಾರ್ಚ್ 16ರವರೆಗೆ 420 ಉಪ ಗ್ರಾಮಗಳನ್ನು ಗುರುತಿಸಲಾಗಿತ್ತು. ಆನಂತರ ಕೇವಲ ಒಂದು ತಿಂಗಳಲ್ಲಿ ಇನ್ನೂ 575 ಉಪ ಗ್ರಾಮಗಳನ್ನು ಗುರುತಿಸಲಾಗಿದ್ದು, ಒಟ್ಟಾರೆ 995 ಹೊಸ ಉಪ ಗ್ರಾಮಗಳನ್ನು ರಚಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.
ಅತಿ ಹೆಚ್ಚು ಮಾಗಡಿ ತಾಲೂಕಿನಲ್ಲಿ 354 ಹಾಗೂ ಅತಿ ಕಡಿಮೆ ಹಾರೋಹಳ್ಳಿ ತಾಲೂಕಿನಲ್ಲಿ 67 ಉಪ ಗ್ರಾಮಗಳು ರಚನೆಯಾಗುತ್ತಿವೆ. ಉಳಿದಂತೆ ರಾಮನಗರ ತಾಲೂಕಿನಲ್ಲಿ 241, ಕನಕಪುರ ತಾಲೂಕಿನಲ್ಲಿ 260 ಹಾಗೂ ಚನ್ನಪಟ್ಟಣ ತಾಲೂಕಿನಲ್ಲಿ 73 ಉಪ ಗ್ರಾಮಗಳ ರಚಿಸಲು ಉದ್ದೇಶಿಸಲಾಗಿದೆ.
116 ಉಪ ಗ್ರಾಮಗಳ ಅಧಿಸೂಚನೆ:
ಮೊದಲ ಹಂತದಲ್ಲಿ ಗುರುತಿಸಿದ್ದ 420 ಉಪ ಗ್ರಾಮಗಳ ಪೈಕಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ 372 ಜನವಸತಿ ಪ್ರದೇಶಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದರಲ್ಲಿ 138 ಉಪ ಗ್ರಾಮಗಳು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, 234 ಬಾಕಿ ಇವೆ. ಅಂತಿಮ ಅಧಿಸೂಚನೆ ಹೊರಡಿಸಲು 13 ಜನವಸತಿಪ್ರದೇಶಗಳ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೆ 116 ಉಪ ಗ್ರಾಮಗಳು ಅಂತಿಮ ಅಧಿಸೂಚನೆ ಹೊರ ಬಿದ್ದಿದೆ.
2026ರ ಮಾರ್ಚ್ 16ರ ನಂತರ ಗುರುತಿಸಿರುವ 575 ಉಪ ಗ್ರಾಮಗಳನ್ನು ಗುರುತಿಸಲಾಗಿದ್ದು, ಈಗಷ್ಟೇ ಪ್ರಕ್ರಿಯೆಗಳು ಪ್ರಾರಂಭಗೊಳ್ಳಬೇಕಿದೆ. 2 ಇ ಅಧಿಸೂಚನೆ, ಪ್ರಾಥಮಿಕ ಅಧಿಸೂಚನೆ ಮುಗಿದು ಅಂತಿಮ ಅಧಿಸೂಚನೆ ಹೊರ ಬೀಳಲು ಕನಿಷ್ಠ 6 ತಿಂಗಳು ಬೇಕಾಗಿದೆ.
ಈಗ ಏನಾಗಿದೆ ?:
ಗ್ರಾಮಗಳಲ್ಲಿ ವಾಸ ಮಾಡುತ್ತಿದ್ದರೂ ಗ್ರಾಮಠಾಣಾ ವ್ಯಾಪ್ತಿಗೆ ಸೇರದ ಕಾರಣ ಸೂಕ್ತ ದಾಖಲೆಗಳು ಇಲ್ಲದೆ ಬಹುತೇಕ ಜನರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ 2019ರ ಅಕ್ಟೋಬರ್ 15ರಂದು ಉಪಗ್ರಾಮಗಳ ರಚನೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ ಜಿಲ್ಲೆಯ 420 ಗ್ರಾಮಗಳು ಉಪಗ್ರಾಮಗಳಾಗಿ ಗ್ರಾಮಠಾಣಾ ವ್ಯಾಪ್ತಿಗೆ ಸೇರ್ಪಡೆ ಮಾಡಲಾಯಿತು. ಇವುಗಳ ಜೊತೆಗೆ ಹೊಸದಾಗಿ 575 ಹೊಸ ಉಪಗ್ರಾಮಗಳನ್ನು ಗುರುತಿಸಲಾಗಿದೆ.
ಹಲವಾರು ವರ್ಷಗಳಿಂದಲೂ ಜನರು ಗ್ರಾಮ ಠಾಣೆಗೆ ಹೊಂದಿರುವ ಸರ್ವೆ ನಂಬರ್, ಖಾಸಗಿ ಜಮೀನುಗಳು ಸೇರಿ ಇತರ ಕಡೆಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ, ಈ ಮನೆಗಳು ಗ್ರಾಮಠಾಣಾ ವ್ಯಾಪ್ತಿಗೆ ಸೇರದ ಕಾರಣ ಗ್ರಾಮ ಪಂಚಾಯಿತಿಗಳು ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಜೊತೆಗೆ ತಮ್ಮದೇ ಮನೆ ಹಾಗೂ ನಿವೇಶನಗಳಿಗೆ ನಮೂನೆ 11, ಇ-ಖಾತೆ ಪಡೆಯಲು ಆಗುತ್ತಿರಲಿಲ್ಲ. ಇದರಿಂದ ಜನರಿಗೆ ಮೂಲಸೌಲಭ್ಯ ದೊರೆಯುತ್ತಿರಲಿಲ್ಲ. ಇದನ್ನು ಮನಗಂಡು ಇಂತಹ ನಿವಾಸಿಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಉಪಗ್ರಾಮಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಉಪಗ್ರಾಮಗಳ ಘೋಷಣೆ ಹೇಗೆ? :
ಯಾವುದೇ ಒಂದು ದಾಖಲೆರಹಿತ ಜನವಸತಿ ಪ್ರದೇಶ ಮೂಲ ಗ್ರಾಮಠಾಣಾದಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಇದ್ದರೆ ಇದನ್ನು ಮೂಲ ಗ್ರಾಮದ ಭಾಗವೆಂದು ಪರಿಗಣಿಸಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 5ರಂತೆ ಉಪಗ್ರಾಮ ಎಂದು ಘೋಷಣೆ ಮಾಡಲಾಗುತ್ತದೆ. ಇದಕ್ಕೆ ಅಗತ್ಯವಾಗಿ ಬೇಕಾದ ನಕ್ಷೆ ಸಿದ್ಧಪಡಿಸಲಾಗುತ್ತದೆ. ಈ ವೇಳೆ ಜನವಸತಿ ಪ್ರದೇಶ, ರಸ್ತೆ, ಸರ್ಕಾರಿ ಶಾಲೆಗಳು, ಖಾಸಗಿ ಸ್ವತ್ತು ಇದ್ದರೂ ಇದನ್ನು ಗ್ರಾಮಠಾಣಾ ಎಂದು ಪರಿಗಣಿಸಿ, ಉಪಗ್ರಾಮವೆಂದು ಘೋಷಣೆ ಮಾಡಲಾಗುತ್ತದೆ.
ಅಧಿಕೃತ ದಾಖಲೆಗಳು ಲಭ್ಯ:
ದಾಖಲೆರಹಿತ ಜನವಸತಿ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದರೂ ಸೂಕ್ತ ರಸ್ತೆ ಇಲ್ಲದೆ, ಮನೆಗಳಿಗೆ ಇ-ಖಾತೆ, ನಮೂನೆ 11 ಸೇರಿ ಯಾವುದೇ ದಾಖಲೆಗಳು ಇಲ್ಲದೆ ಕಷ್ಟದಲ್ಲಿಯೇ ಜೀವನ ನಡೆಸುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಒಂದು ವೇಳೆ ಮನೆ /ಆಸ್ತಿ ಮಾರಾಟ ಮಾಡಬೇಕಾದರೂ ಸರ್ವೆ ನಂಬರ್ ಲೆಕ್ಕದಲ್ಲಿಯೇ ಮಾರಾಟ ಮಾಡಬೇಕಾದ ಪರಿಸ್ಥಿತಿ ಇತ್ತು. ಸರ್ಕಾರ ಸಹ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮುಂದೆ ಬರುತ್ತಿರಲಿಲ್ಲ. ಆದರೀಗ ಉಪಗ್ರಾಮಗಳೆಂದು ಘೋಷಣೆ ಮಾಡುವುದರಿಂದ ಇದು ಗ್ರಾಮಠಾಣಾ ವ್ಯಾಪ್ತಿಗೆ ಒಳಪಡಲಿದ್ದು, ಅಧಿಕೃತ ದಾಖಲೆಗಳು ದೊರೆಯುವ ಜತೆಗೆ, ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ದೊರೆಯಲಿದೆ.
ಕೋಟ್ ..............
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 2026ರ ಮಾರ್ಚ್ 16ರವರೆಗೆ 420 ಉಪ ಗ್ರಾಮಗಳನ್ನು ಗುರುತಿಸಲಾಗಿತ್ತು. ಇದಾದ ಬಳಿಕ ಮತ್ತೆ ಹೊಸದಾಗಿ 575 ಉಪ ಗ್ರಾಮಗಳನ್ನು ಗುರುತು ಮಾಡಿದ್ದೇವೆ. ಈಗ ಒಟ್ಟು 995 ಉಪ ಗ್ರಾಮಗಳ ಪೈಕಿ 116 ಉಪ ಗ್ರಾಮಗಳ ಅಂತಿಮ ಅಧಿಸೂಚನೆ ಹೊರ ಬಿದ್ದಿದೆ. ಉಳಿದ ಉಪ ಗ್ರಾಮಗಳನ್ನು ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿಸುವ ಪ್ರಕ್ರಿಯೆ ಕಾರ್ಯ ವೇಗವಾಗಿ ನಡೆದಿದೆ.
-ಬಿ.ಆರ್.ಹನುಮೇಗೌಡ, ಉಪನಿರ್ದೇಶಕರು, ಜಿಲ್ಲಾ ಭೂ ದಾಖಲೆಗಳ ಇಲಾಖೆ,
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.