ಸಕಾಲದಲ್ಲಿ ಅರ್ಜಿ ಇತ್ಯರ್ಥಕ್ಕೆ ಹೆಚ್ಚುವರಿ ಬಗರ್‌ಹುಕುಂ ಸಮಿತಿ ರಚನೆ: ಗೋಪಾಲ ಪೂಜಾರಿ

KannadaprabhaNewsNetwork | Published : Dec 12, 2023 12:45 AM

ಸಾರಾಂಶ

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಈಗಾಗಲೇ ಅಂದಾಜು 32,000 ಬಗರ್ ಹುಕುಂ‌ ಅರ್ಜಿಗಳು ಬಾಕಿ ಇದ್ದು ಕ್ಷೇತ್ರದ ಜನರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ‌ ಸರ್ಕಾರ ಕಾನೂನು ಚೌಕಟ್ಟಿನ‌ ಅಡಿಯಲ್ಲಿ ಹೆಚ್ಚುವರಿಯಾಗಿ ನನ್ನ ಅಧ್ಯಕ್ಷತೆಯಲ್ಲಿ ಇನ್ನೊಂದು ಬಗರ್ ಹುಕುಂ ಸಮಿತಿಯನ್ನು ರಚಿಸಲಾಗಿದೆ. ಈಗಾಗಲೇ ರಚನೆಯಾಗಿರುವ ಶಾಸಕರ ನೇತೃತ್ವದ ಸಮಿತಿಯ ಯಾವುದೇ ಕಾರ್ಯಕಲಾಪಕ್ಕೂ ಇದು ತೊಡಕಾಗುವುದಿಲ್ಲ‌

ಕನ್ನಡಪ್ರಭ ವಾರ್ತೆ ಕುಂದಾಪುರ

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಈಗಾಗಲೇ ಅಂದಾಜು 32,000 ಬಗರ್ ಹುಕುಂ‌ ಅರ್ಜಿಗಳು ಬಾಕಿ ಇದ್ದು ಕ್ಷೇತ್ರದ ಜನರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ‌ ಸರ್ಕಾರ ಕಾನೂನು ಚೌಕಟ್ಟಿನ‌ ಅಡಿಯಲ್ಲಿ ಹೆಚ್ಚುವರಿಯಾಗಿ ನನ್ನ ಅಧ್ಯಕ್ಷತೆಯಲ್ಲಿ ಇನ್ನೊಂದು ಬಗರ್ ಹುಕುಂ ಸಮಿತಿಯನ್ನು ರಚಿಸಲಾಗಿದೆ. ಈಗಾಗಲೇ ರಚನೆಯಾಗಿರುವ ಶಾಸಕರ ನೇತೃತ್ವದ ಸಮಿತಿಯ ಯಾವುದೇ ಕಾರ್ಯಕಲಾಪಕ್ಕೂ ಇದು ತೊಡಕಾಗುವುದಿಲ್ಲ‌ ಎಂದು ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮ-ಸಕ್ರಮ ಅರ್ಜಿಗಳ ಸಂಖ್ಯೆ ಜಾಸ್ತಿ‌ ಇರುವುದರಿಂದ‌ ನಾನು ಶಾಸಕನಾಗಿದ್ದಾಗಲೇ ಹೆಚ್ಚುವರಿಯಾಗಿ ಸಮಿತಿಯೊಂದನ್ನು ರಚಿಸಲಾಗಿತ್ತು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೇ ತೀರ್ಥಹಳ್ಳಿಯಲ್ಲಿ ಶಿವಮೂರ್ತಿ ಎನ್ನುವವರನ್ನು ಅಕ್ರಮ-ಸಕ್ರಮ ಹೆಚ್ಚುವರಿ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಬಿಜೆಪಿ‌ ಸರ್ಕಾರದಲ್ಲಿ‌ ಮಾಡಿದರೆ ಸರಿ, ಕಾಂಗ್ರೆಸ್ ಸರ್ಕಾರದಲ್ಲಿ ಮಾಡಿದರೆ ತಪ್ಪು ಎನ್ನುವ ಬಿಜೆಪಿಯ ಮಂಡಲ ಅಧ್ಯಕ್ಷರು ಈ‌ ಹಿಂದೆ ಕಾಂಗ್ರೆಸ್ ನಲ್ಲಿದ್ದಾಗ ಹೆಚ್ಚುವರಿ ಸಮಿತಿಗೆ ಒಪ್ಪಿಗೆ ಸೂಚಿಸಿದ್ದರು. ಆದರೆ ಇದೀಗ ರಾಜಕೀಯ ಕಾರಣಕ್ಕಾಗಿ ಅನಗತ್ಯವಾಗಿ ಹೊಯಿಲೆಬ್ಬಿಸುತ್ತಿದ್ದಾರೆ ಎಂದು ದೂರಿದರು. ಅರಣ್ಯ ಇಲಾಖೆಯ ಡೀಮ್ಡ್ ಸಮಸ್ಯೆಯ ಕುರಿತು ಈಗಾಗಲೇ ಕಂದಾಯ ಸಚಿವ ಕೃಷ್ಣಬೈರೇ ಗೌಡ ಅವರಲ್ಲಿ‌ ಪ್ರಸ್ತಾಪಿಸಲಾಗಿದ್ದು, ಜಿಲ್ಲೆಯಲ್ಲಿನ ಡೀಮ್ಡ್‌ ಸಮಸ್ಯೆಯ ಕುರಿತು ಸಮಗ್ರ ಮಾಹಿತಿ ಕೊಡಲು ಕೋರಲಾಗಿದೆ. ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ‌ ನಡೆಸಲಾಗಿದ್ದು, ಸಮಸ್ಯೆ ಶೀಘ್ರದಲ್ಲೇ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದರು.ಮಲ್ಪೆಯ ಪಡುಕೆರೆಯಲ್ಲಿ‌ ನಿರ್ಮಾಣ ಮಾಡಲು ಉದ್ದೇಶಿಸಿರುವ ಮರೀನಾ ಬೀಚ್‌ ಮಾದರಿಯ‌ ಯೋಜನೆಯನ್ನು ಅಂದಿನ‌ ಶಾಸಕ ರಘುಪತಿ ಭಟ್ ಅವರ ನೇತೃತ್ವದಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರಿಂದ ಅದೇ ಯೋಜನೆಯನ್ನು ಬೇರೆ ಹೆರಸರಿನಿಂದ‌ ಬೈಂದೂರಿನ ಸೋಮೇಶ್ವರ ಕಡಲು ಕಿನಾರೆಯಲ್ಲಿ ಪ್ರತಿಷ್ಠಾಪಿಸುವ ಪ್ರಯತ್ನಗಳು‌ ನಡೆಯುತ್ತಿವೆ. ಈ ಯೋಜನೆ ಸ್ಥಳೀಯರಿಗಾಗಿಯೋ ಅಥವಾ ಇನ್ನಾವುದಕ್ಕೋ ಎಂದು ಸಂಸದರು ಸ್ಪಷ್ಟಪಡಿಸಬೇಕು. ಒಂದು ವೇಳೆ ಮೀನುಗಾರರು ಹಾಗೂ ಸ್ಥಳೀಯರು ಈ ಯೋಜನೆಗೆ ವಿರೋಧ ವ್ಯಪ್ತಪಡಿಸಿದರೆ ತಾನು ಅವರೊಂದಿಗೆ ನಿಲ್ಲುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಗುಡಿಬೆಟ್ಟು ಪ್ರದೀಪ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅರವಿಂದ‌ ಪೂಜಾರಿ‌ ಪಡುಕೋಣೆ, ಪ್ರಮುಖರಾದ ಹರೀಶ್ ತೋಳಾರ್ ಕೊಲ್ಲೂರು, ಪ್ರಸನ್ನ ಕುಮಾರ್ ಶೆಟ್ಟಿ‌ ಕೆರಾಡಿ, ಮಂಜುನಾಥ ಪೂಜಾರಿ ಕಟ್ ಬೇಲ್ತೂರು, ಸುರೇಶ್ ಜೋಗಿ ನಾಗೂರು, ಭರತ್ ದೇವಾಡಿಗ ಬಿಜೂರು, ಮಂಜುನಾಥ್ ಪೂಜಾರಿ ಬಿಜೂರು ಇದ್ದರು.

Share this article