ಮಾಜಿ ಸಭಾಪತಿ ಎನ್. ತಿಪ್ಪಣ್ಣ ನಿಧನ

KannadaprabhaNewsNetwork |  
Published : Jul 11, 2025, 11:48 PM ISTUpdated : Jul 12, 2025, 12:23 PM IST
ಎನ್.ತಿಪ್ಪಣ್ಣ.  | Kannada Prabha

ಸಾರಾಂಶ

ಹಿರಿಯ ರಾಜಕೀಯ ಮುತ್ಸದ್ಧಿ, ವಿಧಾನಪರಿಷತ್ತಿನ ಮಾಜಿ ಸಭಾಪತಿ, ಅಖಿಲ ಭಾರತ ವೀರಶೈವ ಮಹಾಸಭಾದ ಮಾಜಿ ರಾಜ್ಯಾಧ್ಯಕ್ಷ ಹಾಗೂ ಹಿರಿಯ ವಕೀಲರಾಗಿದ್ದ ಎನ್. ತಿಪ್ಪಣ್ಣ (97) ಅವರು ನಗರದಲ್ಲಿ ಶುಕ್ರವಾರ ನಿಧನರಾದರು.

ಬಳ್ಳಾರಿ: ಹಿರಿಯ ರಾಜಕೀಯ ಮುತ್ಸದ್ಧಿ, ವಿಧಾನಪರಿಷತ್ತಿನ ಮಾಜಿ ಸಭಾಪತಿ, ಅಖಿಲ ಭಾರತ ವೀರಶೈವ ಮಹಾಸಭಾದ ಮಾಜಿ ರಾಜ್ಯಾಧ್ಯಕ್ಷ ಹಾಗೂ ಹಿರಿಯ ವಕೀಲರಾಗಿದ್ದ ಎನ್. ತಿಪ್ಪಣ್ಣ (97) ಅವರು ನಗರದಲ್ಲಿ ಶುಕ್ರವಾರ ನಿಧನರಾದರು.

ಮೃತರಿಗೆ ಓರ್ವ ಪುತ್ರ ಇದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬಳ್ಳಾರಿ ನಿವಾಸದಲ್ಲಿ ನೆಲೆಸಿದ್ದರು. ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ತುರವನೂರು ಗ್ರಾಮದಲ್ಲಿ ಶನಿವಾರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿಎ ಪದವಿ, ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು 1954ರಲ್ಲಿ ಬಳ್ಳಾರಿಗೆ ಬಂದ ಎನ್. ತಿಪ್ಪಣ್ಣ ಅವರು ಇಲ್ಲಿನ ಹಿರಿಯ ವಕೀಲ ದೊಡ್ಡಿ ಗುಂಡೂರಾವ್ ಅವರ ಬಳಿ ವಕೀಲ ವೃತ್ತಿ ಆರಂಭಿಸಿದರು.

ಬಳ್ಳಾರಿ ವಕೀಲರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ವಕೀಲರ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸಿದರಲ್ಲದೆ, ಬದುಕಿನ 58 ವರ್ಷಗಳನ್ನು ವಕೀಲ ವೃತ್ತಿಗೆ ಮುಡುಪಾಗಿಟ್ಟಿದ್ದರು.

ಸಮಾಜವಾದಿ ಚಳವಳಿ ಹಿನ್ನೆಲೆಯ ಎನ್. ತಿಪ್ಪಣ್ಣ ಅವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರೊಂದಿಗೆ ಗುರುತಿಸಿಕೊಂಡಿದ್ದರು. ಜನತಾದಳದ ರಾಜ್ಯಾಧ್ಯಕ್ಷರಾಗಿ, ನಾಲ್ಕು ಬಾರಿ ವಿಧಾನಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಒಂದು ಬಾರಿ ವಿಧಾನಪರಿಷತ್‌ನ ಸಭಾಪತಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಂಯುಕ್ತ ಜನತಾದಳ, ಜೆಡಿಎಸ್‌, ಆನಂತರದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಕರ್ನಾಟಕ ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ವಿಜಯಪುರ ಮಹಿಳಾ ವಿವಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ರಾಜ್ಯ ಚಲನಚಿತ್ರ ಸೆನ್ಸಾರ್ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷರಾಗಿ ಇಡೀ ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಸಂಘಟನೆಯನ್ನು ಬಲಗೊಳಿಸುವಲ್ಲಿ ಅಪಾರವಾಗಿ ಶ್ರಮ ವಹಿಸಿದ್ದಾರೆ.

ನಾಡಿನ ವಿವಿಧ ಮಠಾಧೀಶರು, ಹಿರಿಯ ವಕೀಲರು, ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಸದಸ್ಯರು, ನಗರದ ಗಣ್ಯರು ಹಾಗೂ ಸಾರ್ವಜನಿಕರು ಎನ್. ತಿಪ್ಪಣ್ಣನವರ ಅಂತಿಮ ದರ್ಶನ ಪಡೆದರು.

ವೀರಶೈವ ಸಂಘದಿಂದ ಎನ್. ತಿಪ್ಪಣ್ಣಗೆ ಶ್ರದ್ಧಾಂಜಲಿ

ಕಂಪ್ಲಿ ಪಟ್ಟಣದ ವೀರಶೈವ ಸಂಘದ ಕಚೇರಿ ಆವರಣದಲ್ಲಿ ವಿಧಾನಪರಿಷತ್ತಿನ ಮಾಜಿ ಸಭಾಪತಿ, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕ ಮಾಜಿ ಅಧ್ಯಕ್ಷ ಎನ್. ತಿಪ್ಪಣ್ಣ ಅವರ ಆತ್ಮಕ್ಕೆ ಶಾಂತಿಕೋರಿ ವೀರಶೈವ ಸಮಾಜದವರು ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿದರು.ವೀರಶೈವ ಸಂಘದ ತಾಲೂಕು ಅಧ್ಯಕ್ಷ ಪಿ. ಮೂಕಯ್ಯಸ್ವಾಮಿ ಮಾತನಾಡಿ, ವೀರಶೈವ ಸಮಾಜಕ್ಕೆ ಎನ್. ತಿಪ್ಪಣ್ಣ ಅವರ ಕೊಡುಗೆ ಅಪಾರವಾಗಿದೆ. ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸೇರಿದಂತೆ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಗುಣಗಾನ ಮಾಡಿದರಲ್ಲದೆ, ಅವರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದಷ್ಟು ನಷ್ಟವಾಗಿದೆ ಎಂದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಹಾಗೂ ಯುವ ಘಟಕಗಳಿಂದಲೂ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರಮುಖರಾದ ಎಲಿಗಾರ ವೆಂಕಟರೆಡ್ಡಿ, ಬಿ.ಎಂ. ಪುಷ್ಪಾ, ಡಿ. ವೀರಪ್ಪ, ವಾಲಿ ಕೊಟ್ರಪ್ಪ, ಎಸ್.ಎಸ್.ಎಂ. ಚನ್ನಯ್ಯಸ್ವಾಮಿ, ಅಮರನಾಥ ಶಾಸ್ತ್ರಿ, ಇಟಗಿ ಬಸವರಾಜಗೌಡ, ಕೆ. ವಿರೂಪಾಕ್ಷಪ್ಪ, ವಾಗೀಶ್‌ ಪಂಡಿತಾರಾಧ್ಯ, ಎಸ್.ಡಿ. ಬಸವರಾಜ, ವೈ. ರಮಣಯ್ಯ, ವೆಂಕಟರಾಮರಾಜು ಹಾಗೂ ವೀರಶೈವ ಸಂಘದ ಶಿಕ್ಷಣ ಸಂಸ್ಥೆಗಳ ಮುಖ್ಯಶಿಕ್ಷಕರು, ಶಿಕ್ಷಕರು, ಇತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ