ಕನ್ನಡಪ್ರಭ ವಾರ್ತೆ ನಾಗಮಂಗಲ
ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಭೇಟಿ ನೀಡಿ ಕ್ಷೇತ್ರಾಧಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳೊಂದಿಗೆ ಕೆಲ ಕಾಲ ಚರ್ಚಿಸಿ ಆಶೀರ್ವಾದ ಪಡೆದುಕೊಂಡರು.ಕ್ಷೇತ್ರಕ್ಕೆ ಆಗಮಿಸಿದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಠದಿಂದ ಮಂಗಳವಾದ್ಯ ಮತ್ತು ಪೂರ್ಣಕುಂಭ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು. ಈ ವೇಳೆ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ಕ್ಷೇತ್ರಪಾಲಕ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು.
ದೇವರ ದರ್ಶನದ ಬಳಿಕ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಮಹಾಗದ್ದುಗೆ ನಮಸ್ಕರಿಸಿ ಆಶೀರ್ವಾದ ಪಡೆದರು.ನಂತರ ಮಠದ ಪೀಠಾಧ್ಯಕ್ಷರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದ ಎಚ್ಡಿಕೆ ಶ್ರೀಮಠದಲ್ಲಿಯೇ ಬೆಳಗಿನ ಉಪಹಾರ ಸೇವಿಸಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು.
ಈ ವೇಳೆ ಶ್ರೀಮಠದ ಸಂಪ್ರದಾಯದಂತೆ ಎಚ್ಡಿಕೆ ಅವರಿಗೆ ಶಾಲುಹೊದಿಸಿ, ಏಲಕ್ಕಿ ಹಾರ ಹಾಕಿ ಹಣ್ಣಿನ ಬುಟ್ಟಿ ಮತ್ತು ನೆನಪಿನ ಕಾಣಿಕೆ ನೀಡಿ ಶ್ರೀಗಳು ಗೌರವಿಸಿದರು.ಈ ವೇಳೆ ಆದಿಚುಂಚನಗಿರಿ ಮಠದ ಚೈತನ್ಯನಾಥಸ್ವಾಮೀಜಿ, ಮಾಜಿ ಶಾಸಕ ಸುರೇಶ್ ಗೌಡ, ಮನ್ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು ಸೇರಿದಂತೆ ಹಲವು ಮುಖಂಡರು ಇದ್ದರು.ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಎಸ್.ಪಿ.ಸ್ವಾಮಿ ಮುಖಾಮುಖಿಮದ್ದೂರು:ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಬದ್ಧ ವೈರಿಗಳಾಗಿದ್ದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಭಾನುವಾರ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮುಖಾಮುಖಿಯಾದ ಪ್ರಸಂಗ ಜರುಗಿತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದ ಜೆಡಿಎಸ್‌ನಿಂದ ಡಿ.ಸಿ.ತಮ್ಮಣ್ಣ ಮತ್ತು ಬಿಜೆಪಿಯಿಂದ ಎಸ್.ಪಿ. ಸ್ವಾಮಿ ಅಭ್ಯರ್ಥಿಗಳಾಗಿದ್ದರು. ಚುನಾವಣೆಯಲ್ಲಿ ಈ ಇಬ್ಬರ ನಡುವೆ ಗೆಲುವಿಗಾಗಿ ಹಣಾಹಣಿ ನಡೆದಿತ್ತು. ಇಬ್ಬರ ಜಗಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರು.ಅಂದಿನಿಂದಲೂ ಇಬ್ಬರ ನಡುವೆ ವೈಮನಸ್ಸು ಮುಂದುವರೆದಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪ್ರಸ್ತಾಪ ನಡೆಯುತ್ತಿದ್ದರೂ ಸಹ ಈ ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ, ಮದ್ದೂರು ಹೊರ ವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ವಕೀಲ ಬಿ. ಅಪ್ಪಾಜಿಗೌಡರ ಪುತ್ರಿ ವಿವಾಹದ ಆರತಕ್ಷತೆ ಕಾರ್ಯಕ್ರಮದಲ್ಲಿ ಡಿ.ಸಿ.ತಮ್ಮಣ್ಣ ಮತ್ತು ಎಸ್.ಪಿ.ಸ್ವಾಮಿ ಮುಖಾಮುಖಿಯಾಗಿ ಹಸ್ತ ಲಾಘವ ಮಾಡಿಕೊಂಡು ಉಭಯ ಕುಶಲೊಪರಿ ವಿಚಾರಿಸಿದರು.ಲೋಕಸಭಾ ಚುನಾವಣೆ ಮಂಡ್ಯ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವುದರಿಂದ ಏಪ್ರಿಲ್ 2ರಂದು ಬಾಲಾಜಿ ಕಲ್ಯಾಣ ಮಂಟಪದಲ್ಲಿ ಸಮನ್ವಯ ಸಮಿತಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಉಭಯ ನಾಯಕರು ವೇದಿಕೆ ಹಂಚಿಕೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ. ಈ ವೇಳೆ ಜೆಡಿಎಸ್ ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ, ರಾಜಣ್ಣ ಇದ್ದರು.