ಮಾಜಿ ಐಎಎಸ್‌ ಅಧಿಕಾರಿ ಕೆ.ಶಿವರಾಂ ಪತ್ನಿ ಕಾಂಗ್ರೆಸ್‌ಗೆ

KannadaprabhaNewsNetwork | Updated : Apr 09 2024, 04:37 AM IST

ಸಾರಾಂಶ

ದಿವಂಗತ ಐಎಎಸ್‌ ಅಧಿಕಾರಿ ಕೆ. ಶಿವರಾಂ ಪತ್ನಿ ವಾಣಿ ಶಿವರಾಂ, ಬಿಬಿಎಂಪಿ ಮಾಜಿ ಸದಸ್ಯೆ ರೂಪಾ ಲಿಂಗೇಶ್ವರ್‌, ಛಲವಾದಿ ಮಹಾಸಭಾದ ಪದಾಧಿಕಾರಿಗಳು ಸೇರಿದಂತೆ ಹಲವು ಮಂದಿ ಸೋಮವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡರು.

ಬೆಂಗಳೂರು: ದಿವಂಗತ ಐಎಎಸ್‌ ಅಧಿಕಾರಿ ಕೆ. ಶಿವರಾಂ ಪತ್ನಿ ವಾಣಿ ಶಿವರಾಂ, ಬಿಬಿಎಂಪಿ ಮಾಜಿ ಸದಸ್ಯೆ ರೂಪಾ ಲಿಂಗೇಶ್ವರ್‌, ಛಲವಾದಿ ಮಹಾಸಭಾದ ಪದಾಧಿಕಾರಿಗಳು ಸೇರಿದಂತೆ ಹಲವು ಮಂದಿ ಸೋಮವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದ ಡಿ.ಕೆ. ಶಿವಕುಮಾರ್‌, ಕೆ.ಶಿವರಾಂ ಅವರ ಧರ್ಮಪತ್ನಿ ವಾಣಿ ಶಿವರಾಂ ಅವರು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಜತೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಬಿಜೆಪಿ ಹಾಗೂ ಬೇರೆ ಪಕ್ಷಕ್ಕೆ ಸೇರುವುದಕ್ಕಿಂತ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಕೈಗೆ ಶಕ್ತಿ ತುಂಬಲು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಎಂದು ಹೇಳಿದರು. 

ಶಿವರಾಂ ಬಿಜೆಪಿ ಸೇರಿ ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿದ್ದರು. ಅವರು ವಿಧಿವಶರಾಗುವ ಮುನ್ನ ಚಾಮರಾಜನಗರದಿಂದ ನನಗೆ ಕರೆ ಮಾಡಿದ್ದರು. ಈ ಮಧ್ಯೆ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಜತೆಗೂ ಚರ್ಚೆ ಮಾಡಿದ್ದರು. ಆದರೆ ಭಗವಂತನ ಆಟ ಅವರು ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರ ಕುಟುಂಬಸ್ಥರು ಹಾಗೂ ಅನುಯಾಯಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಛಲವಾದಿ ಮಹಾಸಭಾ ಕೂಡ ಬಹಳ ದೊಡ್ಡ ಸಂಘಟನೆ. ಈ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದೆ ಎಂದರು.

ವಾಣಿ ಶಿವರಾಂ ಅವರ ಜತೆಗೆ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಬಿಎಂಪಿ ಮಾಜಿ ಸದಸ್ಯೆ ರೂಪಾ ಲಿಂಗೇಶ್, ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಕೆ ರವಿಚಂದ್ರ, ಮಡಿವಾಳ ಸಮಾಜದ ಮುಖಂಡರಾದ ಗೋಪಿಕೃಷ್ಣ, ಸರ್ವಜ್ಞನಗರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮೊಹಮದ್ ಮುಸ್ತಾಫ, ಆನೇಕಲ್ ಬಿಜೆಪಿ ನಾಯಕರಾದ ಮಂಜು, ವಿಜಯ್ ಕುಮಾರ್, ಚಾಮರಾಜನಗರದ ಛಲವಾದಿ ಮಹಾಸಭಾದ ಉಪಾಧ್ಯಕ್ಷರಾದ ಬಸವರಾಜ್, ಬಿಡದಿಯಲ್ಲಿ ಜೆಡಿಎಸ್ ಪಕ್ಷದಿಂದ ಕೃಷ್ಣಪ್ಪ, ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಸಿ.ಎಸ್ ಪ್ರಕಾಶ್ ಸೇರಿ ಹಲವರು ಕಾಂಗ್ರೆಸ್‌ ಸೇರ್ಪಡೆಯಾದರು.

Share this article