ಕೊಡಗು ವಿವಿ ಮುಚ್ಚದಂತೆ ಮಾಜಿ ಸಚಿವ ಎ.ಮಂಜು ಒತ್ತಾಯ

KannadaprabhaNewsNetwork | Published : Feb 18, 2025 12:30 AM

ಸಾರಾಂಶ

ಈಗಾಗಲೇ ಸ್ಥಾಪನೆಗೊಂಡಿರುವ ವಿಶ್ವ ವಿದ್ಯಾನಿಲಯಗಳನ್ನು ಮುಂದುವರಿಸಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಿತ ಕಾಯಲು ಸರ್ಕಾರ ಮುಚ್ಚುವ ನಿರ್ಧಾರವನ್ನು ಕೈಬಿಡಬೇಕು ಎಂದು ಮಾಜಿ ಸಚಿವ ಮತ್ತು ಶಾಸಕ ಎ.ಮಂಜು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹಾಸನ, ಕೊಡಗು ಸೇರಿದಂತೆ ರಾಜ್ಯದ ವಿಶ್ವ ವಿದ್ಯಾನಿಲಯಗಳನ್ನು ಬಂದ್ ಮಾಡಬಾರದು ಎಂದು ಅರಕಲಗೂಡು ಶಾಸಕ ಎ. ಮಂಜು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೂಡಿಗೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಲಪತಿಗಳಿಗೆ ಕಾರು ಖರೀದಿಸಲು ಹಣವಿಲ್ಲ ಎಂದು ಸರ್ಕಾರ ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಕೈಗೊಂಡಿರುವ ನಿರ್ಧಾರ ಒಳ್ಳೆಯದಲ್ಲ. ನೂರಾರು ಎಕರೆ ಪ್ರದೇಶದಲ್ಲಿ ವಿವಿಗಳು ಸ್ಥಾಪನೆಗೊಂಡಿವೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಸರ್ಕಾರದ ಈ ನಿರ್ಧಾರ ಕುರಿತು ಸದನದಲ್ಲಿ ಪ್ರಸ್ತಾಪಿಸಿ ವಿಶ್ವವಿದ್ಯಾನಿಲಯ ಉಳಿವಿಗಾಗಿ ಹೋರಾಡುತ್ತೇನೆ ಎಂದರು.

ಈಗಾಗಲೇ ಸ್ಥಾಪನೆಗೊಂಡಿರುವ ವಿಶ್ವ ವಿದ್ಯಾನಿಲಯಗಳನ್ನು ಮುಂದುವರಿಸಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಿತ ಕಾಯಲು ಸರ್ಕಾರ ಮುಚ್ಚುವ ನಿರ್ಧಾರವನ್ನು ಕೈಬಿಡಬೇಕು ಎಂದು ಮಾಜಿ ಸಚಿವ ಮತ್ತು ಶಾಸಕ ಎ.ಮಂಜು ರ್ಕಾರವನ್ನು ಒತ್ತಾಯಿಸಿದ್ದಾರೆ.

------------------------

ಕೊಡಗು ವಿವಿ ಮುಚ್ಚದಂತೆ ಜಿಲ್ಲಾ ಯುವ ಒಕ್ಕೂಟ ಒತ್ತಾಯ

ಮಡಿಕೇರಿ: ಕೊಡಗು ಜಿಲ್ಲೆಗೆ ಕಳಸಪ್ರಾಯದಂತೆ ಇರುವ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶಕ್ತಿ ತುಂಬಬಲ್ಲ ಕೊಡಗು ವಿಶ್ವ ವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಹಾಗೂ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತ ಪಿ.ಪಿ.ಸುಕುಮಾರ್ ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗು ಜಿಲ್ಲೆಗೆ ಪ್ರತ್ಯೇಕವಾದ ವಿಶ್ವವಿದ್ಯಾಲಯ ಬೇಕು ಎನ್ನುವ ಚಿಂತಕರ, ಜ್ಞಾನದಾಹಿಗಳ ಹಾಗೂ ವಿದ್ಯಾರ್ಥಿಗಳ ಕನಸು ಸುಮಾರು ಎರಡು ವರ್ಷಗಳ ಹಿಂದೆ ನನಸಾಯಿತು. ಆದರೆ ಪ್ರಸ್ತುತ ರಾಜ್ಯದಲ್ಲಿರುವ ಸರ್ಕಾರ ವಿವಿಯನ್ನು ಮುಚ್ಚುವ ನಿರ್ಧಾರಕ್ಕೆ ಬಂದಿದ್ದು, ಇದು ಕೊಡಗಿನ ಜನರ ಭಾವನೆಗೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.----------------

ಜೆಡಿಎಸ್ ಅಲ್ಪಸಂಖ್ಯಾತರ ಘಟಕ ತೀವ್ರ ವಿರೋಧಮಡಿಕೇರಿ: ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವರದಾನವಾಗಿರುವ ಕೊಡಗು ವಿಶ್ವ ವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಸರ್ಕಾರ ಮುಚ್ಚಬಾರದು ಎಂದು ಜಾತ್ಯತೀತ ಜನತಾದಳದ ಅಲ್ಪಸಂಖ್ಯಾತರ ಘಟಕದ ಕೊಡಗು ಜಿಲ್ಲಾಧ್ಯಕ್ಷ ಕೆ.ಜಿ.ಜಾಶಿರ್ ಮೂರ್ನಾಡು ಒತ್ತಾಯಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗು ಅತ್ಯಂತ ಪುಟ್ಟ ಜಿಲ್ಲೆಯಾಗಿದ್ದು, ಎಲ್ಲ ಕ್ಷೇತ್ರಗಳಲ್ಲೂ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗುತ್ತಿದೆ. ಇದೀಗ ಯುವ ಸಮೂಹದ ಶೈಕ್ಷಣಿಕ ಭವಿಷ್ಯವನ್ನು ರೂಪಿಸುವ ವಿಶ್ವ ವಿದ್ಯಾಲಯವನ್ನೇ ಮುಚ್ಚಲು ಮುಂದಾಗಿರುವುದು ಕೊಡಗಿನ ಕಡೆಗಣನೆಗೆ ಮತ್ತೊಂದು ನಿದರ್ಶನವಾಗಿದೆ ಎಂದು ಟೀಕಿಸಿದ್ದಾರೆ.ವಿಶ್ವ ವಿದ್ಯಾಲಯಕ್ಕೆ ಸಂಪನ್ಮೂಲ ಒದಗಿಸಲು ಸರ್ಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲ. ಆರ್ಥಿಕ ಹೊರೆಯ ನೆಪವೊಡ್ಡಿ ವಿವಿಯನ್ನು ಮುಚ್ಚಿದರೆ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಪ್ರತಿ ಜಿಲ್ಲೆಗೆ ವಿಶ್ವ ವಿದ್ಯಾಲಯ ಬೇಕೆಂಬ ಉದ್ದೇಶದಿಂದ 10 ನೂತನ ವಿವಿ ಗಳನ್ನು ಸ್ಥಾಪಿಸಿತು. ನಂತರ ಬಂದ ಸರ್ಕಾರ ಇದನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿತ್ತು. ಆದರೆ ಮುಚ್ಚುವ ನಿರ್ಧಾರಕ್ಕೆ ಬಂದಿರುವುದು ರಾಜಕೀಯ ಪ್ರೇರಿತದಂತೆ ಕಂಡು ಬರುತ್ತಿದೆ ಎಂದು ಆರೋಪಿಸಿದ್ದಾರೆ.

-----------

ಇಂದು ಎಬಿವಿಪಿ ಪ್ರತಿಭಟನೆ

ಮಡಿಕೇರಿ: ಕೊಡಗು ವಿಶ್ವ ವಿದ್ಯಾಲಯ ಬಂದ್ ಮಾಡುವ ಸಂಪುಟ ಉಪ ಸಮಿತಿ ತೀರ್ಮಾನವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೊಡಗು ಘಟಕದಿಂದ ಮಡಿಕೇರಿಯ ಟೋಲ್ ಗೇಟ್ ಸರ್ಕಲ್ ಬಳಿ ಮಂಗಳವಾರ ಬೆಳಗ್ಗೆ 10.30ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

Share this article