ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಣನೀಯ ಸಂಖ್ಯೆಯಲ್ಲಿ ಪಾಲ್ಗೊಂಡ ಹೆಗ್ಗಳಿಕೆ ವಕೀಲರಿಗೆ ಸಲ್ಲುತ್ತದೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು.ನಗರದಲ್ಲಿ ದಿ.ಅಡ್ವೋಕೇಟ್ಸ್ ಅಸೋಸಿಯೇಷನ್‌ಗೆ ಭೇಟಿ ನೀಡಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ದೇಶದಲ್ಲಿ ದುಬಾರಿ ದಿನಗಳ ಪರಿಣಾಮ ಜನಸಾಮಾನ್ಯರ ಬದುಕು ಅತಿ ಸಂಕಷ್ಟದಿಂದ ಕೂಡಿದೆ. ಈ ಸಂಗತಿ ವಕೀಲರಿಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ತಮ್ಮ ಕಕ್ಷಿದಾರರಿಗೆ, ಬಂಧು ಬಾಂಧವರಿಗೆ ತಿಳಿಸಿ ಆನಂದಸ್ವಾಮಿ ಗಡ್ಡದೇವರಮಠ ಅವರ ಗೆಲುವಿಗೆ ಸಹಕರಿಸಬೇಕು ಎಂದು ಹೇಳಿದರು.ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ನನ್ನ ತಂದೆ ಜಿ.ಎಸ್. ಗಡ್ಡದೇವರಮಠ ವಕೀಲರಾಗಿ ಸೇವೆ ಆರಂಭಿಸಿದ್ದರು. ವಕೀಲಿ ವೃತ್ತಿ ಬಗ್ಗೆ ಇರುವ ಅಭಿಮಾನ ವರ್ಣಿಸಲು ಅಸಾಧ್ಯ. ಜನಸೇವೆ ಅಪೇಕ್ಷಿಸಿ ರಾಜಕೀಯ ಪ್ರವೇಶಿಸಿರುವೆ. ತಮ್ಮೆಲ್ಲರ ಆಶೀರ್ವಾದದಿಂದ ಗೆಲುವು ಸಾಧಿಸಿದರೆ ತಮ್ಮ ಸಂಘದ ಬೇಡಿಕೆಗಳಿಗೆ ಸ್ಪಂದಿಸುವೆ ಎಂದರು.
ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ವಕೀಲರಿಗೆ ರಾಜಕೀಯದಲ್ಲಿ ಪ್ರಜ್ಞೆ ಮತ್ತು ಅನುಭವ ಹೆಚ್ಚು. ಆಡಳಿತ ಪಕ್ಷದ ಶಾಸಕನಾಗಿ ವಿಧಾನಸೌಧದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯ ಪ್ರಶ್ನಿಸಿರುವೆ. ಅದೇ ರೀತಿ ಕೇಂದ್ರದ ತಾರತಮ್ಯ ಪ್ರಶ್ನಿಸಲು ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಸಾಧ್ಯ. ನಮ್ಮ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಕನಸು ಕಂಡಿರುವ ಅವರನ್ನು ಚುನಾಯಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.ಬಿ.ಎಚ್. ಬುರಡಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮತ್ತು ಶಾಸಕ ಪ್ರಕಾಶ ಕೋಳಿವಾಡ ಅವರನ್ನು ಸನ್ಮಾನಿಸಿಸಲಾಯಿತು. ವಕೀಲರಾದ ಎಲ್.ಎಫ್.ಕೆ. ಕೆಂಗೊಂಡ, ಎಸ್.ಎಂ. ಜವಳಿ, ಎನ್.ಎಂ.ಡಂಬರ, ಎನ್.ಎಫ್. ಕೆಂಪೇಗೌಡ್ರ, ಪಿ.ಯು. ಸೂರಣಗಿ, ಆರ್.ಜೆ. ಪಾಟೀಲ, ಎಸ್.ಎ. ಕುಲಕರ್ಣಿ, ಆರ್.ಎಸ್. ಪಾಟೀಲ, ಸಿ.ಎನ್. ಶಿವಪೂಜೆ, ಎಲ್.ಎಂ.ಕಂಬಳಿ ಇದ್ದರು.