ಮಾಜಿ ಶಾಸಕ ನರೇಂದ್ರರಿಗೆ ಉನ್ನತ ಸ್ಥಾನ ನೀಡಬೇಕು

KannadaprabhaNewsNetwork | Published : Dec 24, 2024 12:49 AM

ಸಾರಾಂಶ

ಕೊಳ್ಳೇಗಾಲದಲ್ಲಿ ಮಾಜಿ ಶಾಸಕ ನರೇಂದ್ರ ಬೆಂಬಲಿಗರ ಸಭೆಯಲ್ಲಿ ಶಿವಕುಮಾರ್ ಮಾತನಾಡಿದರು.

ಕನ್ನಡಪ್ರಭವಾರ್ತೆ ಕೊಳ್ಳೇಗಾಲ

ಮಾಜಿ ಶಾಸಕ ಆರ್.ನರೇಂದ್ರ ಅವರಿಗೆ ಕಾಂಗ್ರೆಸ್ ಸರ್ಕಾರ ರಾಜ್ಯಮಟ್ಟದಲ್ಲಿ ಉನ್ನತ ಸ್ಥಾನ ನೀಡಬೇಕು ಎಂದು ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್ ಹೇಳಿದರು. ಪಟ್ಟಣದ ವೆಂಕಟೇಶ್ವರ ಮಹಲ್‌ನಲ್ಲಿ ಸೋಮವಾರ ವಿಧಾನಸಭಾ ಕಾಂಗ್ರೆಸ್ ಕಾರ್ಯಕರ್ತರು /ಮುಖಂಡರು ಸಭೆಯಲ್ಲಿ ಮಾತನಾಡಿ, ನರೇಂದ್ರ ಅವರು ಕಳೆದ ಚುನಾವಣೆಯಲ್ಲಿ ಸೋತರು. ಅಧಿಕಾರವಿಲ್ಲದಿದ್ದರೂ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಸಿಎಂ ಇದನ್ನು ಮನ ಗಾಣಬೇಕು. ಮಹದೇಶ್ವರ ಬೆಟ್ಟ ಪ್ರಾಧಿಕಾರಕ್ಕೆ ನೇಮಕ ವಿಚಾರದಲ್ಲೂ ಇಲ್ಲಿನ ಮುಖಂಡರು, ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗಿದೆ. ಇದು ನಮ್ಮೆಲ್ಲರಿಗೂ ನೋವುಂಟು ಮಾಡಿದೆ, ನರೇಂದ್ರ ಅವರು 3 ಬಾರಿ ಗೆದ್ದಿದ್ದಾರೆ. ಪಕ್ಷದ ಹಿರಿಯ ನಾಯಕರು, ಅಂತಹವರಿಗೆ ಸೂಕ್ತ ಸ್ಥಾನ ಸಿಗಬೇಕು ಎಂದರು.

ಹನೂರು ಪಪಂ ಸದಸ್ಯ ಗಿರೀಶ್ ಮಾತನಾಡಿ, ಹನೂರು ಕ್ಷೇತ್ರದ ಮಾಜಿ ಶಾಸಕ ಆರ್.ನರೇಂದ್ರ ಅವರ ಕುಟುಂಬದವರು ಕಳೆದ 60 ವರ್ಷಗಳಿಂದ ಹನೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿ ಸೋಲಾಗಿದೆ. ಆದರೆ, ಕ್ಷೇತ್ರದಲ್ಲಿ ಪಕ್ಷ ಸದೃಢವಾಗಿದೆ ಎಂದರು. ಉನ್ನತ ಸ್ಥಾನ ನೀಡಿದಾಗ ಮಾತ್ರ ಜಿಪಂ, ತಾಪಂ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಲು ಸಹಕಾರಿಯಾಗಲಿದೆ. ಕ್ಷೇತ್ರದಲ್ಲಿ ಅವರು ಜನಾನುರಾಗಿ ನಾಯಕರು, ಅಂತಹ ನಾಯಕರ ಬಲ ಕುಗ್ಗಿಸುವ ತಂತ್ರಗಾರಿಕೆ ನಡೆಯುತ್ತಿದೆ. ಅವರನ್ನು ಕಡೆಗಣಿಸುತ್ತಿರುವುದರಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಅವರು ಹನೂರು ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಒಮ್ಮೆಯೂ ಕಾರ್ಯಕರ್ತರ ಕಷ್ಟ ಸುಖಗಳನ್ನು ಕೇಳಿಯೇ ಇಲ್ಲ. ಕ್ಷೇತ್ರಕ್ಕೆ ಭೇಟಿ ನೀಡಿದಾಗ ಮಾಜಿ ಶಾಸಕರಿಗೂ ಯಾವುದೇ ಮಾಹಿತಿ ನೀಡದೆ ಕಡೆಗಣಿಸಿದ್ದಾರೆ ಎಂದು ಸಚಿವ ವೆಂಕಟೇಶ್ ನಡೆಗೆ ಆಕ್ರೋಶ ಹೊರ ಹಾಕಿದರು. ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಕುಂದವರ್ಮ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ನಮ್ಮ ಕ್ಷೇತ್ರದಲ್ಲಿ ಸೋಲಾದರೂ ರಾಜ್ಯದಲ್ಲಿ ನಮ್ಮ ಪಕ್ಷವೇ ಅಧಿಕಾರವಿರುವುದರಿಂದ ಕಾರ್ಯಕರ್ತರಿಗೆ ಅಧಿಕಾರ ಸಿಗಲಿದೆ ಎಂದು ಖುಷಿಪಟ್ಟಿದ್ದರು.

ಆದರೆ ಕ್ಷೇತ್ರದ ಹಲವಾರು ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ಪಕ್ಷಕ್ಕಾಗಿ ದುಡಿದವರಿಗೆ ಅಧಿಕಾರ ನೀಡಬೇಕು. ವಿವಿಧ ಕಮಿಟಿಗಳಿಗೆ ಸದಸ್ಯರನ್ನು ನೇಮಕ ಮಾಡುವಂತೆ ಪಟ್ಟಿಮಾಡಿ ಕೆಪಿಸಿಸಿಗೆ ಕಳುಹಿಸಲಾಗಿದೆ ಆದರೆ ಇದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಾಗಿದೆ ಎಂದು ಅಳಲು ತೋಡಿಕೊಂಡರು.

ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ ಮಾತನಾಡಿ, ಮುಂದಿನ ತಿಂಗಳಿನಲ್ಲಿ ಜಿಪಂ, ತಾಪಂ ಚುನಾವಣೆ ಬರಲಿದೆ. ಆದರೆ ನಮ್ಮ ನಾಯಕ ಆರ್.ನರೇಂದ್ರ ಅವರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಎಲ್ಲ ನಿರ್ಣಯ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರು ಒಗ್ಗಟ್ಟಾಗಿ ಕ್ಷೇತ್ರದ ಮೀಸಲಾತಿ ಬಗ್ಗೆ ಚರ್ಚೆ ನಡೆಸಬೇಕು. ಜಿಪಂ ಹಾಗೂ ತಾಪಂಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮೀಸಲಾತಿ ತರಬೇಕೆ ವಿನಃ ತಮ್ಮ ವೈಯಕ್ತಿಕ ಪ್ರತಿಷ್ಠೆಗೆ ಸೀಮಿತವಾಗಬಾರದು ಎಂದರು.

ಕುರುಬರ ದೊಡ್ಡಿ ಮಹದೇವ ಪ್ರಸಾದ್ ಮಾತನಾಡಿದರು. ಈಶ್ವರ್ ಮಂಗಲ ಪುಟ್ಟರಾಜು ಜವಾದ್ ಅಹ್ಮದ್, ಪಾಳ್ಯ ಕೃಷ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಗೋವಿಂದರಾಜು, ಪಪಂ ಸದಸ್ಯರಾದ ಹರೀಶ್, ಸುದೇಶ್ ಬಸವರಾಜು, ನವೀನ್, ಮಾಜಿ ಉಪಾಧ್ಯಕ್ಷ ಮಾದೇಶ್, ಜಿಪಂ ಮಾಜಿ ಸದಸ್ಯ ಕೊಪ್ಪಳಿ ಮಹದೇವ ನಾಯಕ್, ಮುಖಂಡರಾದ ವೆಂಕಟರಮಣ ನಾಯ್ಡು ರಮೇಶ್ ನಾಯ್ಡು ರವೀಂದ್ರ ರವಿ, ಮುರುಡೇಶ್ವರ ಸ್ವಾಮಿ, ನಾಗೇಂದ್ರ, ಪರಿಶಿಷ್ಟ ಪಂಗಡದ ಜಿಲ್ಲಾಧ್ಯಕ್ಷ ನಾಗರಾಜು, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೇತನ್, ಗ್ರಾಪಂ ಅಧ್ಯಕ್ಷ ಸಂತೋಷ್ , ಪಪಂ ನಾಮ ನಿರ್ದೇಶನ ಸದಸ್ಯ ಮಹದೇಶ್ ಗೌಡ, ನಿಂಗಯ್ಯ ಇದ್ದರು.

Share this article