ಕನ್ನಡಪ್ರಭ ವಾರ್ತೆ ನಾಗಮಂಗಲ
ಪುರಸಭೆ ವ್ಯಾಪ್ತಿಯ ಉಪ್ಪಾರಹಳ್ಳಿಯಲ್ಲಿ 20 ಲಕ್ಷ ರು. ವೆಚ್ಚದ ಶ್ರೀಆಂಜನೇಯಸ್ವಾಮಿ ದೇವಸ್ಥಾನದ ನೆಲಹಾಸು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 15 ವರ್ಷಗಳ ಹಿಂದೆ ತಾಲೂಕಿನಲ್ಲಿ ಸರ್ಕಾರಿ ಜಮೀನು ಮಂಜೂರಾತಿ ಕೋರಿ ಬಗರ್ ಹುಕುಂ ಸಾಗುವಳಿ ಸಮಿತಿಗೆ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಿತ್ತು. ಅದರಂತೆ ಅಂದಿನ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ನೇತೃತ್ವದಲ್ಲಿ ತಂಡ ರಚಿಸಿ ಸಮಗ್ರ ತನಿಖೆ ನಡೆಸಲಾಗಿತ್ತು ಎಂದರು.
ಜಮೀನು ಮಂಜೂರು ಮಾಡುವ ವೇಳೆ ಅರ್ಜಿ ಸಲ್ಲಿಸಿದ ಕೆಲ ರೈತರ ಹೆಸರನ್ನು ಬದಲಿಸಿರುವುದು, ಐದು ಎಕರೆಗೂ ಹೆಚ್ಚು ಜಮೀನು ಹೊಂದಿರುವ ವ್ಯಕ್ತಿಗಳಿಗೂ ಜಮೀನು ಮಂಜೂರು ಮಾಡಿರುವುದು, ಅರ್ಜಿಯನ್ನೇ ಸಲ್ಲಿಸದ ಕೆಲ ವ್ಯಕ್ತಿಗಳಿಗೂ ಭೂಮಿ ಮಂಜೂರು ಮಾಡಿರುವುದು ಕಂಡುಬಂದಿದೆ ಎಂದರು.ಕಾನೂನಿನಲ್ಲಿ ಒಂದು ಬಾರಿ ಸರ್ಕಾರಿ ಜಮೀನು ಮಂಜೂರಾದ ಬಳಿಕ ನಿಯಮಾವಳಿ ಉಲ್ಲಂಘನೆಯಾಗಿರುವುದು ಕಂಡು ಬಂದಲ್ಲಿ ಅಂತಹ ಪ್ರಕರಣಗಳನ್ನು ಉಪವಿಭಾಗಾಧಿಕಾರಿಗಳು ವಿಚಾರಣೆ ನಡೆಸಿ ವಜಾಗೊಳಿಸಬಹುದು. ಆದರೆ, ಕೆಲಸದ ಒತ್ತಡದಲ್ಲಿ ವಿಚಾರಣೆ ನಡೆಸಿ ನಿಯಮಾವಳಿ ಉಲ್ಲಂಘಿಸಿರುವ ಅರ್ಜಿ ವಜಾಗೊಳಿಸಲು ಎಸಿ ವಿಳಂಬ ಮಾಡಿದ್ದರು ಎಂದರು.
ಮಾತು ಕಲಿತಿರುವ ಒಬ್ಬ ಸ್ವಯಂ ಘೋಷಿತ ಮಾಜಿ ಶಾಸಕ ನಾನು ಬಹಳ ಓದಿದ್ದೇನೆ. ಬುದ್ಧಿವಂತ ಎಂದು ಹೇಳಿಕೊಳ್ಳುತ್ತಾನೆ. ವಿದ್ಯೆ ಇದ್ದಾಕ್ಷಣ ಏನು ಬೇಕಾದರೂ ಮಾಡೋಕೆ ಆಗಲ್ಲ. ನಾನು ಆ ರೀತಿ ಮಾತಾಡಲ್ಲ. ಅದರ ಅಗತ್ಯವೂ ನನಗಿಲ್ಲ. ಅಭಿವೃದ್ಧಿಪಡಿಬೇಕಾದ ಬಹಳಷ್ಟು ಕೆಲಸಗಳು ನನ್ನ ಮುಂದಿವೆ ಎಂದು ಹೇಸರೇಳದೆ ಸುರೇಶ್‌ಗೌಡರನ್ನು ಏಕ ವಚನದಲ್ಲಿಯೇ ಜರಿದರು.
ನಂತರ ಮುದ್ದೇಗೌಡನಕೊಪ್ಪಲು ಗ್ರಾಮದಲ್ಲಿ ಅಲ್ಪಸಂಖ್ಯಾತರ ಇಲಾಖೆಯ 1 ಕೋಟಿ ರು. ವೆಚ್ಚದ ಬಹುಪಯೋಗಿ ಭವನದ ಕಟ್ಟಡ ನಿರ್ಮಾಣ ಹಾಗೂ ಪಡುವಲಪಟ್ಟಣ ಗ್ರಾಮದಲ್ಲಿ 8 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.