ಕನ್ನಡಪ್ರಭ ವಾರ್ತೆ ಮಾಗಡಿ
ಮಾಜಿ ಶಾಸಕ ಎ. ಮಂಜುನಾಥ್ ರವರು ಶಾಸಕರ ವಿರುದ್ಧ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದು, ಅವರು ಮಾಡುತ್ತಿರುವ ಆರೋಪಗಳು ಆಧಾರ ಸಹಿತವಾಗಿದ್ದರೆ ಸ್ವಾಗತಿಸುತ್ತೇವೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಣಿಗನಹಳ್ಳಿ ಸುರೇಶ್ ಹೇಳಿದರು.ಪಟ್ಟಣದ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕರು ನಮ್ಮ ನಾಯಕರ ವಿರುದ್ಧ ಆರೋಪ ಮಾಡಿದರೆ ಅದಕ್ಕೆ ಸರಿಯಾದ ದಾಖಲೆಗಳನ್ನು ಪ್ರದರ್ಶನ ಮಾಡಲಿ. ನಮ್ಮ ಪಕ್ಷ ತಪ್ಪು ಮಾಡಿದ್ದರೆ ಪ್ರತಿಭಟನೆ ಮಾಡಲಿ, ನಾವು ಸ್ವಾಗತಿಸುತ್ತೇವೆ. ಆದರೆ ಆಧಾರ ರಹಿತವಾಗಿ ಏಕವಚನದಲ್ಲಿ ಮಾತನಾಡಿ ಶಾಸಕ ಬಾಲಕೃಷ್ಣ, ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್. ಅಶೋಕ್ ವಿರುದ್ಧ ಆರೋಪ ಮಾಡುತ್ತಿದ್ದು, ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದೇ ರೀತಿ ಮಾಜಿ ಶಾಸಕರು ಆರೋಪ ಮಾಡಿದರೆ ಮುಂದೆ ಜನರೇ ಅವರಿಗೆ ತಕ್ಕ ಉತ್ತರ ಕೊಡುತ್ತಾರೆ. 52 ಸಾವಿರ ಮತಗಳಿಂದ ಗೆದ್ದಿದ್ದ ಮಾಜಿ ಶಾಸಕರು, ಕಳೆದ ಚುನಾವಣೆಯಲ್ಲಿ 12 ಸಾವಿರ ಮತಗಳಿಂದ ಸೋತಿರುವುದು ಕ್ಷೇತ್ರದ ಜನತೆಗೆ ಗೊತ್ತಿದೆ, ಶಾಸಕ ಬಾಲಕೃಷ್ಣರವರು 40 ವರ್ಷಗಳಿಂದ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಅವರ ವಿರುದ್ಧ ಆಧಾರ ರಹಿತ ಆರೋಪ ಮಾಡುವುದನ್ನು ಮಾಜಿ ಶಾಸಕರು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.
ಹೇಮಾವತಿ ಕಿಕ್ ಬ್ಯಾಕ್ ಎಲ್ಲಿ ಹೋಯಿತು:ಮಾಜಿ ಶಾಸಕ ಎ.ಮಂಜುನಾಥ್ ರವರು ಈ ಹಿಂದೆ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ವಿಚಾರವಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು 370 ಕೋಟಿ ರು. ಕಿಕ್ ಬ್ಯಾಕ್ ಪಡೆಯಲು ಕಾಮಗಾರಿ ಆರಂಭಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಬಗ್ಗೆ ನಾನು ಠಾಣೆಯಲ್ಲಿ ದೂರು ನೀಡಿದ್ದೆ, ಇಲ್ಲಿಯವರೆಗೂ ದಾಖಲೆಯನ್ನು ಮಾಜಿ ಶಾಸಕರು ನೀಡಿಲ್ಲ. ಇವರು ರಾಜಕೀಯಕ್ಕೆ ಬರಲು ಡಿ.ಕೆ.ಸುರೇಶ್ ಹಾಗೂ ಮಾಜಿ ಸಚಿವ ಎಚ್.ಎಂ. ರೇವಣ್ಣನವರು ಕಾರಣರಾಗಿದ್ದು, ಈಗ ಬಮೂಲ್ ಚುನಾವಣೆಯಲ್ಲಿ ಡಿ.ಕೆ. ಸುರೇಶ್ ರವರು ಕನಕಪುರದಲ್ಲಿ ಜೆಡಿಎಸ್ ನ ಅಭ್ಯರ್ಥಿಗಳನ್ನು ಅನರ್ಹ ಮಾಡಿ ಗೆದ್ದಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ನಮ್ಮ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಮಾಡಿರುವ ಡಿ.ಕೆ.ಸುರೇಶ್ ವಿರುದ್ಧ ಮಾಜಿ ಶಾಸಕರು ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಬೇಕು ಜೊತೆಗೆ ಮಾಗಡಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿರುವ ಎಚ್.ಎನ್.ಅಶೋಕ್ ವಿರುದ್ಧ ಮಾಡಿರುವ ಆರೋಪಗಳೂ ಸುಳ್ಳಾಗಿದ್ದು, ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ಎಚ್.ಎನ್.ಅಶೋಕ್ ರವರು ನೀಡಿದ್ದಾರೆ ಎಂದು ಸುರೇಶ್ ಹೇಳಿದರು.
ದಲಿತ ಮುಖಂಡ ಕಲ್ಕೆರೆ ಶಿವಣ್ಣ ಮಾತನಾಡಿ, ಮಾಜಿ ಶಾಸಕ ಮಂಜುನಾಥ್ ರವರು ನಮ್ಮ ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ನಿಮ್ಮ ಕಾರ್ಯಕರ್ತರೇ ನಿಮಗೆ ಛೀಮಾರಿ ಹಾಕುತ್ತಾರೆ ಎಂದು ಹೇಳಿದರು.ದಲಿತ ಮುಖಂಡ ಬ್ಯಾಲಕೆರೆ ಚಿಕ್ಕ ರಾಜು ಮಾತನಾಡಿದರು. ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ್ ಗೌಡ, ಮುಖಂಡರಾದ ತಗ್ಗೀಕುಪ್ಪೆ ರಾಜಣ್ಣ, ಬಸವನಹಳ್ಳಿ ಸುರೇಶ್, ವನಜ ಸೇರಿದಂತೆ ಇತರರು ಭಾಗವಹಿಸಿದ್ದರು.