ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಆಯಾಮ ಸೃಷ್ಟಿ ಮಾಡಿ ಗ್ರಾಮೀಣ ಪ್ರದೇಶದಲ್ಲಿ ಅಕ್ಷರ ಕ್ರಾಂತಿ ಮಾಡಿದ ಶೈಕ್ಷಣಿಕ ಹರಿಕಾರ ಮಾಜಿ ಸಂಸದ ದಿ.ಡಾ.ಜಿ.ಮಾದೇಗೌಡರು ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಹೇಳಿದರು.ಭಾರತೀ ಸ್ಕೂಲ್ ಆಫ್ ಎಕ್ಸಲೆನ್ಸ್ ಆಯೋಜಿಸಿದ್ದ ವಾರ್ಷಿಕ ಉಲ್ಲಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಳೆದ 62 ವರ್ಷಗಳ ಹಿಂದೆ ಹಳ್ಳಿಗಾಡಿನ ಮಕ್ಕಳ ಭವಿಷ್ಯ ರೂಪಿಸಲು ಸ್ಥಾಪಿಸಿದ ಸಂಸ್ಥೆ ಪ್ರಸ್ತುತ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂದರು.
ಭಾರತೀ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ದೇಶ-ವಿದೇಶದಲ್ಲಿ ಉದ್ಯೋಗದಲ್ಲಿರುವುದು ಸಂಸ್ಥೆ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ದಾರಿ ದೀಪವಾದ ಜಿ.ಮಾದೇಗೌಡರ ಕಾರ್ಯ ಸಾರ್ಥಕವಾಗಿದೆ ಎಂದರು.ಸಂಸ್ಥೆ ಅಧ್ಯಕ್ಷ, ಎಂಎಲ್ಸಿ ಮಧು ಜಿ.ಮಾದೇಗೌಡ ಮಾತನಾಡಿ, ಭಾರತೀ ವಿದ್ಯಾ ಸಂಸ್ಥೆ ಯಾವುದೇ ರಾಜೀ ಆಗದೇ ಉತ್ತಮ ಶಿಕ್ಷಕರ ತಂಡ ಕಟ್ಟಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಯಾವುದೇ ಪ್ರಭಾವಕ್ಕೆ ಒಳಗಾಗಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳದೆ ಅರ್ಹತೆ ಅನುಗುಣವಾಗಿ ನೇಮಿಸಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದರು.
ನನ್ನ ತಂದೆ ಮಾಜಿ ಸಂಸದ ದಿವಂಗತ ಜಿ.ಮಾದೇಗೌಡರ ಹಳ್ಳಿಗಾಡಿನ ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣ ಸಂಸ್ಥೆ ಕಟ್ಟಿದರು. ಇಂದು ಅತ್ಯಂತ ಪ್ರಗತಿ ಸಾಧಿಸಿ ರಾಜ್ಯ ಮತ್ತು ದೇಶದಲ್ಲೆ ನಂಬರ್ ಒನ್ ವಿದ್ಯಾಸಂಸ್ಥೆಗಳ ಸಾಲಿಗೆ ಸೇರಿರುವುದು ಸಂಸ್ಥೆ ಶಿಕ್ಷಣಿಕ ಗುಣಮಟ್ಟಕ್ಕೆ ಹಿಡಿದ ಸಾಕ್ಷಿಯಾಗಿದೆ. ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ನಾನು ಮತ್ತು ನನ್ನ ಪುತ್ರ ಆಶಯ್ ಸಾಗುತ್ತಿದ್ದೇವೆ ಎಂದರು.ಭಾರತೀ ಸ್ಕೂಲ್ ಆಫ್ ಎಕ್ಸ್‌ಲೆನ್ಸ್‌ನ ಶೈಕ್ಷಣಿಕ ಮಾರ್ಗದರ್ಶಿ ಡಾ. ಎಲ್.ಸವಿತಾ ಕೌಶಲ್ಯಕ್ಕೆ ಹೆಚ್ಚು ಬೆಲೆ, ಮಾನ್ಯತೆ ಇದೆ. ವಿದ್ಯಾರ್ಥಿಗಳಲ್ಲಿ ಕೌಶಲಾಭಿವೃದ್ಧಿಯನ್ನು ವೃದ್ಧಿಸಲು ಹೆಚ್ಚು ಒತ್ತು ನೀಡಬೇಕು. ಮುಂದಿನ ಶೈಕ್ಷಣಿಕ ವರ್ಷದಿಂದ ಭಾರತೀ ಸ್ಕೂಲ್ ಆಫ್ ಎಕ್ಸ್‌ಲೆನ್ಸ್‌ನಲ್ಲಿ ಸಿಬಿಎಸ್‌ಸಿ ಪಠ್ಯಕ್ರಮವನ್ನು ಆರಂಭಿಸಲಾಗುವುದು. ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದೇ ಸಂಸ್ಥೆ ಉದ್ದೇಶವಾಗಿದೆ ಎಂದರು.
ಇದೇ ವೇಳೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಕ್ಕಳ ನೃತ್ಯ ವಿಕ್ಷೀಸಿದ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಬಿಇಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ನಿವೃತ್ತ ಬಿಇಒ ಸಿ.ಎಸ್.ಕಾಳೀರಯ್ಯ, ಭಾರತೀ ಪಿಯು ಅಕಾಡೆಮಿ ಪ್ರಾಂಶುಪಾಲ ಸಿ.ವಿ.ಮಲ್ಲಿಕಾರ್ಜುನ್, ಮುಖ್ಯಶಿಕ್ಷಕಿ ಪ್ರತಿಭಾ, ತನುಶ್ರೀ, ರೇಖಾ, ರೇವಣ್ಣ, ಬಸವರಾಜು ಸೇರಿದಂತೆ ಹಲವರಿದ್ದರು.