ರೇ* ಕೇಸಲ್ಲಿ ಪ್ರಜ್ವಲ್‌ ದೋಷಿ

KannadaprabhaNewsNetwork |  
Published : Aug 01, 2025, 11:45 PM ISTUpdated : Aug 02, 2025, 05:55 AM IST
ಪ್ರಜ್ವಲ್‌ ರೇವಣ್ಣ | Kannada Prabha

ಸಾರಾಂಶ

ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾ* ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ತೀರ್ಮಾನಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.

 ಬೆಂಗಳೂರು :  ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾ*  ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ತೀರ್ಮಾನಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.

ಪ್ರಕರಣ ಸಂಬಂಧ ವಿಚಾರಣೆ ಪೂರ್ಣಗೊಳಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು ಶುಕ್ರವಾರ ತೀರ್ಪು ಪ್ರಕಟಿಸಿದರು. ಶಿಕ್ಷೆ ಪ್ರಮಾಣವನ್ನು ಶನಿವಾರ ಪ್ರಕಟಿಸುವುದಾಗಿ ತಿಳಿಸಿದರು.

ಈ ವೇಳೆ ನ್ಯಾಯಾಲಯದ ಕಟಕಟೆಯಲ್ಲಿ ಕೈಕಟ್ಟಿ ನಿಂತಿದ್ದ ಪ್ರಜ್ವಲ್‌, ನ್ಯಾಯಾಧೀಶರ ತೀರ್ಪು ಘೋಷಣೆ ಕೇಳಿ ದುಃಖತಪ್ತರಾಗಿ ಕಣ್ಣೀರು ಹಾಕಿದರು. ಅಳುತ್ತಲೇ ನ್ಯಾಯಾಲಯದಿಂದ ಹೊರಗೆ ಬಂದು ಸ್ವಲ್ಪ ಸಮಯ ಕುಳಿತರು. ಬಳಿಕ ಪೊಲೀಸ್‌ ವಾಹನದಲ್ಲಿ ಅಳುತ್ತಲೇ ಜೈಲಿನತ್ತ ಪ್ರಯಾಣ ಬೆಳೆಸಿದರು.

ಪ್ರಜ್ವಲ್‌ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಅತ್ಯಾಚಾ*  ಪ್ರಕರಣಗಳು ದಾಖಲಾಗಿವೆ. ಈ ತೀರ್ಪಿನೊಂದಿಗೆ ಮೊದಲ ಪ್ರಕರಣದಲ್ಲಿ ಪ್ರಜ್ವಲ್‌ ಅಪರಾಧಿ ಎಂದು ಸಾಬೀತಾಗಿದೆ. ಇಡೀ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ಪ್ರಕರಣ ದಾಖಲಾಗಿ 14 ತಿಂಗಳೊಳಗೆ ವಿಚಾರಣೆ ಪೂರ್ಣಗೊಂಡು ತೀರ್ಪು ಹೊರಬಿದ್ದಿರುವುದು ಗಮನಾರ್ಹ ಸಂಗತಿಯಾಗಿದೆ.

ಪ್ರಜ್ವಲ್‌ ವಿರುದ್ಧ ದಾಖಲಾಗಿರುವ ಇನ್ನೂ ಮೂರು ಅತ್ಯಾಚಾ*  ಪ್ರಕರಣಗಳು ಇದೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಈ ಪ್ರಕರಣಗಳ ವಿಚಾರಣೆಯೂ ಈ ವರ್ಷದೊಳಗೆ ಪೂರ್ಣಗೊಂಡು ತೀರ್ಪು ಹೊರಬೀಳುವ ನಿರೀಕ್ಷೆಯಿದೆ.

ಪ್ರಕರಣದ ಹಿನ್ನೆಲೆ:

ಕಳೆದ ಲೋಕಸಭಾ ಚುನಾವಣೆ ವೇಳೆ ಅಂದಿನ ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಲೈಂ*ಕ ದೌರ್ಜನ್ಯದ ಹಲವು ವಿಡಿಯೋಗಳು ಹಾಗೂ ಅಶ್ಲೀಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. ಅದರಲ್ಲಿ ಕೆ.ಆರ್‌.ನಗರ ಮೂಲದ 48 ವರ್ಷದ ಸಂತ್ರಸ್ತೆಯ ಖಾಸಗಿ ವಿಡಿಯೋ ಸಹ ಇತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಹಾಸನದ ಈ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿತ್ತು.

ವಿಡಿಯೋ ವೈರಲ್‌ ಬೆನ್ನಲ್ಲೇ ಸಂತ್ರಸ್ತೆಯು ತನ್ನ ಮನೆಯಿಂದ ನಾಪತ್ತೆಯಾಗಿದ್ದರು. ಸಂತ್ರಸ್ತೆಯ ಪುತ್ರ 2024ರ ಮೇ 2ರಂದು ಕೆ.ಆರ್‌.ನಗರ ಪೊಲೀಸ್‌ ಠಾಣೆಯಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮತ್ತು ಸಂಬಂಧಿ ಸತೀಶ್‌ ಬಾಬಣ್ಣ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಭೇದಿಸಿದ ಎಸ್‌ಐಟಿ ಪೊಲೀಸರು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಾಳೇನಹಳ್ಳಿಯ ರೇವಣ್ಣನ ಆಪ್ತ ರಾಜಗೋಪಾಲ್‌ ಎಂಬುವವರ ತೋಟದ ಮನೆಯಲ್ಲಿ ಆಕೆಯನ್ನು ರಕ್ಷಿಸಿದ್ದರು.

ವಿಚಾರಣೆ ವೇಳೆ ಹೀನಕೃತ್ಯದ ಬಗ್ಗೆ ಮಾಹಿತಿ:

ಬಳಿಕ ಎಸ್‌ಐಟಿ ಅಧಿಕಾರಿಗಳು ಆಕೆಯ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಹೊರಬಿದ್ದಿತ್ತು. ಸಂಸದ ಪ್ರಜ್ವಲ್‌ ರೇವಣ್ಣ ತನ್ನ ಮೇಲೆ ಬಲವಂತವಾಗಿ ಲೈಂ*ಕ ದೌರ್ಜನ್ಯ ಹಾಗೂ ಅತ್ಯಾಚಾ*  ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದರು. ಈ ಸಂಬಂಧ ಸಿಐಡಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಜ್ವಲ್‌ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್‌ 376(2)(ಕೆ), 376(2)(ಎನ್‌), 354(ಎ)(ಬಿ)(ಸಿ), 506, 201 ಹಾಗೂ ಐಟಿ ಕಾಯ್ದೆ ಸೆಕ್ಷನ್‌ 66(ಇ) ಅಡಿ ಎಫ್‌ಐಆರ್‌ ದಾಖಲಾಗಿತ್ತು. ಬಳಿಕ ಸಂತ್ರಸ್ತೆಯನ್ನು ನ್ಯಾಯಾಧೀಶರ ಬಳಿ ಕರೆದೊಯ್ದು ಸಿಆರ್‌ಪಿಸಿ ಸೆಕ್ಷನ್‌ 164 ಅಡಿ ಹೇಳಿಕೆ ದಾಖಲಿಸಲಾಗಿತ್ತು.

ನೀರು ಪಡೆಯುವ ನೆಪದಲ್ಲಿ ಕರೆಸಿ ಅತ್ಯಾಚಾರ:

ಹಾಸನ ಜಿಲ್ಲೆಯ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್‌ ಠಾಣೆಯ ವ್ಯಾಪ್ತಿಗೆ ಬರುವ ಗನ್ನಿಕಡದಲ್ಲಿ ಎಚ್‌.ಡಿ.ರೇವಣ್ಣ ಕುಟುಂಬಕ್ಕೆ ಸೇರಿದ ತೋಟದ ಮನೆಯಲ್ಲಿ ಹಲವು ವರ್ಷಗಳಿಂದ ಮಹಿಳೆ ಮನೆಗೆಲಸ ಮಾಡಿಕೊಂಡಿದ್ದರು. 2021ರ ಕೊರೋನಾ ಸಮಯದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಗನ್ನಿಕಡ ತೋಟದ ಮನೆಗೆ ಆಗಾಗ ಬರುತ್ತಿದ್ದರು.

ಈ ವೇಳೆ ಕುಡಿಯಲು ನೀರು ಪಡೆಯುವ ನೆಪದಲ್ಲಿ ರೂಮ್‌ಗೆ ಕರೆಸಿಕೊಂಡು ಬಳಿಕ ಬಲವಂತವಾಗಿ ಲೈಂ*ಕ ದೌರ್ಜನ್ಯ ಹಾಗೂ ಅತ್ಯಾಚಾರ ಮಾಡಿದ್ದರು. ಈ ಬಗ್ಗೆ ಬಾಯಿ ಬಿಡದಂತೆ ಬೆದರಿಕೆ ಹಾಕಿದ್ದರು.

ಬೆಂಗಳೂರಿನ ಬಸವನಗುಡಿಯಲ್ಲಿರುವ ಎಚ್‌.ಡಿ.ರೇವಣ್ಣ ಅವರ ಮನೆಗೆ ಕೆಲಸಕ್ಕೆ ಕರೆದೊಯ್ದು ಅಲ್ಲಿಯೂ ಪ್ರಜ್ವಲ್‌ ರೇವಣ್ಣ ತನ್ನ ಮೇಲೆ ಬಲವಂತವಾಗಿ ಅತ್ಯಾಚಾ*  ಮಾಡಿದ್ದರು. ಪರಿ ಪರಿಯಾಗಿ ಕೈ ಮುಗಿದು ಕೇಳಿಕೊಂಡರೂ ಬಿಡಲಿಲ್ಲ. ಅತ್ಯಾಚಾ*  ದೃಶ್ಯಗಳನ್ನು ಪ್ರಜ್ವಲ್‌ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದರು.

ಪ್ರಜ್ವಲ್‌ ವಿರುದ್ಧ 1,663 ಪುಟಗಳ ಜಾರ್ಜ್‌ಶೀಟ್‌:

ಈ ಪ್ರಕರಣದ ತನಿಖೆ ನಡೆಸಿದ್ದ ಎಸ್ಐಟಿ ತನಿಖಾಧಿಕಾರಿಗಳು ಬಾಡಿ ವಾರಂಟ್‌ ಮೇಲೆ ಆರೋಪಿ ಪ್ರಜ್ವಲ್‌ ರೇವಣ್ಣ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ತನಿಖೆ ಪೂರ್ಣಗೊಳಿಸಿ ಸಂತ್ರಸ್ತೆ ಹೇಳಿಕೆ, ಆರೋಪಿ ಹೇಳಿಕೆ, 113 ಸಾಕ್ಷಿಗಳು, ಸಾಂದರ್ಭಿಕ ಸಾಕ್ಷಿಗಳು, ಡಿಜಿಟಲ್‌ ಸಾಕ್ಷಿಗಳು, ಎಫ್‌ಎಸ್ಎಲ್‌ ವರದಿ, ತಾಂತ್ರಿಕ ಸಾಕ್ಷಿಗಳು ಒಳಗೊಂಡಂತೆ ಸುಮಾರು 1,632 ಪುಟಗಳ ದೋಷಾರೋಪ ಪಟ್ಟಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಜ್ವಲ್‌ ವಿರುದ್ಧದ ಸೆಕ್ಷನ್‌ಗಳು

ಪ್ರಜ್ವಲ್‌ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್‌ 376(2)(ಕೆ), 376(2)(ಎನ್‌), 354(ಎ)(ಬಿ)(ಸಿ), 506, 201 ಹಾಗೂ ಐಟಿ ಕಾಯ್ದೆ ಸೆಕ್ಷನ್‌ 66(ಇ) ಅಡಿ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ಐಪಿಸಿ ಸೆಕ್ಷನ್‌ 376(2)(ಕೆ) ಎಂಬುದು ಅತ್ಯಾಚಾ* ಪ್ರಕರಣಕ್ಕೆ ಸಂಬಂಧಿಸಿದೆ. ಇದರಡಿ ಕನಿಷ್ಠ 10 ವರ್ಷ, ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ. ಉಳಿದಂತೆ ಐಪಿಸಿ ಸೆಕ್ಷನ್‌ 376(2)(ಎನ್‌) (ಸಾರ್ವಜನಿಕ ಸೇವಕನಿಂದ ಅಧಿಕಾರ ದುರ್ಬಳಕೆ ಮಾಡಿ ಅತ್ಯಾಚಾರ) ಕನಿಷ್ಠ 10 ವರ್ಷ, ಗರಿಷ್ಠ ಜೀವಾವಧಿ, ಐಪಿಸಿ 354(ಎ) (ಲೈಂಗಿಕ ಕಿರುಕುಳ, ಬಲವಂತದ ದೈಹಿಕ ಸಂಪರ್ಕ) ಕನಿಷ್ಠ 3 ವರ್ಷ, ಐಪಿಸಿ 354(ಬಿ) (ಬಲವಂತದಿಂದ ವಿವಸ್ತ್ರಗೊಳಿಸುವುದು) ಕನಿಷ್ಠ 3 ವರ್ಷ, ಗರಿಷ್ಠ 7 ವರ್ಷ, ಐಪಿಸಿ 354(ಸಿ) (ಮಹಿಳೆಯ ಖಾಸಗಿ ಚಿತ್ರ ಸೆರೆ ಹಿಡಿಯುವುದು) ಕನಿಷ್ಠ 1 ವರ್ಷ, ಗರಿಷ್ಠ 3 ವರ್ಷ, ಐಪಿಸಿ 506 (ಕ್ರಿಮಿನಲ್ ಬೆದರಿಕೆ) ಕನಿಷ್ಠ 2 ವರ್ಷ, ಗರಿಷ್ಠ 7 ವರ್ಷ, ಐಪಿಸಿ 201 (ಸಾಕ್ಷ್ಯ ನಾಶ) ಕನಿಷ್ಠ 3 ವರ್ಷ, ಗರಿಷ್ಠ 7 ವರ್ಷ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 66(ಇ) (ವ್ಯಕ್ತಿಯ ಗೌಪ್ಯತೆ ಉಲ್ಲಂಘನೆ) 3 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ಗರಿಷ್ಠ 2 ಲಕ್ಷ ರು. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಪ್ರಜ್ವಲ್‌ ಶಿಕ್ಷೆ ಪ್ರಮಾಣ ಶನಿವಾರ ಪ್ರಕಟವಾಗಲಿದೆ.

ದೀರ್ಘಕಾಲ ನೆನಪಿರುವ ತೀರ್ಪು

ದೇಶದ ಪ್ರಭಾವಿ ರಾಜಕಾರಣಿಗಳ ಕುಟುಂಬಗಳಲ್ಲಿ ಒಂದಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬದ ಕುಡಿ ಪ್ರಜ್ವಲ್‌ ರೇವಣ್ಣಗೆ ಅತ್ಯಾಚಾ*ದಂತಹ ಗಂಭೀರ ಸ್ವರೂಪದ ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಕೇವಲ 14 ತಿಂಗಳೊಳಗೆ ಈ ಪ್ರಕರಣದಲ್ಲಿ ವಿಚಾರಣೆ ಮುಗಿದು ತೀರ್ಪು ಪ್ರಕಟವಾಗಿದೆ. ಹೀಗಾಗಿ ದೇಶದ ನ್ಯಾಯಾಂಗದ ಇತಿಹಾಸದಲ್ಲಿ ಇದೊಂದು ದೀರ್ಘಕಾಲ ನೆನಪಿನಲ್ಲಿ ಉಳಿಯುವ ತೀರ್ಪಾಗಲಿದೆ.

14 ತಿಂಗಳಿಂದ ಜೈಲುವಾಸ

ಕಳೆದ 14 ತಿಂಗಳಿಂದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಪ್ರಜ್ವಲ್‌ ರೇವಣ್ಣ ಈ ಪ್ರಕರಣದಲ್ಲಿ ದೋಷಮುಕ್ತರಾಗಿ ಖುಲಾಸೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ, ಅವರ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಯಾಗಿದ್ದಾರೆ. ಹೀಗಾಗಿ ಜೈಲು ಶಿಕ್ಷೆ ಕಾಯಂ ಆಗಲಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಜ್ವಲ್‌ರದ್ದು ಎನ್ನಲಾದ ಲೈಂ*ಕ ದೌರ್ಜನ್ಯದ ಹಲವು ವಿಡಿಯೋ ಜಾಲತಾಣದಲ್ಲಿ ವೈರಲ್‌

ವಿಡಿಯೋ ಕುರಿತು ತನಿಖೆಗೆ ಎಸ್‌ಐಟಿ ರಚಿಸಿ ಸರ್ಕಾರ ಆದೇಶ. ಅದರ ನಡುವೆ ವಿಡಿಯೋದಲ್ಲಿದ್ದ ಓರ್ವ ಮಹಿಳೆ ದಿಢೀರ್‌ ನಾಪತ್ತೆ

ತಮ್ಮ ತಾಯಿ ನಾಪತ್ತೆ ಕುರಿತು ಮಹಿಳೆ ಪುತ್ರನಿಂದ ದೂರು ಸಲ್ಲಿಕೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಬಳಿಕ ಸಂತ್ರಸ್ತ ಮಹಿಳೆ ರಕ್ಷಣೆ

ವಿಚಾರಣೆ ವೇಳೆ ತನ್ನ ಮೇಲೆ ಪ್ರಜ್ವಲ್‌ ರೇಪ್‌ ಮಾಡಿದ್ದಾರೆಂದು ಸಂತ್ರೆಸ್ತೆ ಸ್ಫೋಟಕ ಆರೋಪ. ಈ ಹಿನ್ನೆಲೆಯಲ್ಲಿ ಪ್ರಜ್ವಲ್‌ ವಿರುದ್ಧ ಕೇಸು

ನೀರು ಕೇಳುವ ನೆಪದಲ್ಲಿ ಬಂದು ತನ್ನ ಮೇಲೆ ತೋಟದ ಮನೆಯಲ್ಲಿ ಪ್ರಜ್ವಲ್‌ ಅತ್ಯಾಚಾ* ಮಾಡಿದ್ದರೆಂದು ಸಂತ್ರಸ್ತ ಮಹಿಳೆ ಆರೋಪ

ಪ್ರಕರಣ ದಾಖಲಾಗಿ 14 ತಿಂಗಳಲ್ಲಿ ವಿಚಾರಣೆ ಪೂರ್ಣಗೊಂಡು ಪ್ರಜ್ವಲ್‌ ರೇವಣ್ಣ ದೋಷಿ ಎಂದು ನ್ಯಾಯಾಲಯದಿಂದ ತೀರ್ಪು ಪ್ರಕಟ

ಪ್ರಜ್ವಲ್‌ ಮುಂದಿನ ಆಯ್ಕೆಗಳೇನು?

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು. ಒಂದು ವೇಳೆ ಹೈಕೋರ್ಟ್‌ ಈ ತೀರ್ಪಿಗೆ ತಡೆ ನೀಡಿದರೆ, ಉಳಿದ ಮೂರು ಪ್ರಕರಣಗಳಲ್ಲಿ ಜಾಮೀನು ಪಡೆಯುವ ಪ್ರಯತ್ನವನ್ನು ಮುಂದುವರಿಸಬಹುದು. ಈ ತೀರ್ಪನ್ನು ಹೈಕೋರ್ಟ್‌ ಸಹ ಎತ್ತಿ ಹಿಡಿದರೆ, ಆಗ ಸುಪ್ರೀಂಕೋರ್ಟ್‌ ಕದ ತಟ್ಟಬೇಕಾಗುತ್ತದೆ. ಸುಪ್ರೀಂಕೋರ್ಟ್‌ ಸಹ ಹೈಕೋರ್ಟ್‌ ತೀರ್ಪು ಎತ್ತಿ ಹಿಡಿದರೆ ಪ್ರಜ್ವಲ್‌ ಶಿಕ್ಷೆ ಅನುಭವಿಸಲೇಬೇಕಾಗುತ್ತದೆ.

PREV
Read more Articles on

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ