ಪುರಸಭೆ ಮಾಜಿ ಅಧ್ಯಕ್ಷ ಟಿ.ಎಂ. ನಂಜುಂಡಸ್ವಾಮಿ ಬಂಧನ

KannadaprabhaNewsNetwork |  
Published : Jul 25, 2025, 12:30 AM IST
55 | Kannada Prabha

ಸಾರಾಂಶ

ಆಸ್ತಿ ಮಾಲೀಕರು ಇ- ಖಾತೆ ಕೋರಿ ಸಲ್ಲಿಸಿರುವ ದಾಖಲೆಗಳೊಂದಿಗೆ ತೆರಿಗೆ ಪಾವತಿಸಿರುವುದಾಗಿ ಕಚೇರಿಗೆ ಚಲನ್ ಸಲ್ಲಿಸಿದ್ದರು

ಕನ್ನಡಪ್ರಭ ವಾರ್ತೆ ಟಿ. ನರಸೀಪುರಬ್ಯಾಂಕಿನ ಸೀಲನ್ನು ನಕಲಿ ಮಾಡಿ ಪುರಸಭೆಗೆ ಲಕ್ಷಾಂತರ ರು. ಗಳ ಆಸ್ತಿ ತೆರಿಗೆ ವಂಚನೆ ಮಾಡಿದ್ದ ಆರೋಪದಡಿ ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಟಿ.ಎಂ. ನಂಜುಂಡಸ್ವಾಮಿಯನ್ನು ಪಟ್ಟಣದ ಪೋಲೀಸರು ಬಂಧಿಸಿದ್ದಾರೆ.ತಾಲೂಕು ಕುರುಬ ಸಂಘದ ಮಾಜಿ ಅಧ್ಯಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಂಜುಂಡಸ್ವಾಮಿ ಹಾಗೂ 9 ಮಂದಿ ಆಸ್ತಿ ತೆರಿಗೆದಾರರ ಮೇಲೆ ಪುರಸಭೆ ಮುಖ್ಯಾಧಿಕಾರಿ ಬಿ.ಕೆ. ವಸಂತಕುಮಾರಿ ತೆರಿಗೆ ವಂಚನೆಯಡಿ ಪಟ್ಟಣ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಟಿ.ಎಂ. ನಂಜುಂಡಸ್ವಾಮಿ ತಲೆ ಮರೆಸಿಕೊಂಡಿದ್ದರು.ಆಸ್ತಿ ಮಾಲೀಕರು ಇ- ಖಾತೆ ಕೋರಿ ಸಲ್ಲಿಸಿರುವ ದಾಖಲೆಗಳೊಂದಿಗೆ ತೆರಿಗೆ ಪಾವತಿಸಿರುವುದಾಗಿ ಕಚೇರಿಗೆ ಚಲನ್ ಸಲ್ಲಿಸಿದ್ದರು. ಈ ದಾಖಲೆಗಳು ಮತ್ತು ಚಲನ್ ಗಳ ಪರಿಶೀಲನೆ ವೇಳೆ ಆಸ್ತಿ ಮಾಲೀಕರು ಹಾಜರುಪಡಿಸಿರುವ ಚಲನ್ಗಳ ಮೊತ್ತವು ಪುರಸಭಾ ಬ್ಯಾಂಕ್ ಖಾತೆಗೆ ಜಮೆಯಾಗಿರಲಿಲ್ಲ, ಚಲನ್ ಗಳಲ್ಲಿ ಕೆನರಾ ಬ್ಯಾಂಕಿನ ಸೀಲ್ ಇದ್ದ ಕಾರಣ ಈ ಬಗ್ಗೆ ವರದಿ ನೀಡಲು ಬ್ಯಾಂಕಿನ‌ ಅಧಿಕಾರಿಗಳನ್ನು ಮುಖ್ಯಾಧಿಕಾರಿ ಕೋರಿದ್ದರು. ಆದರೆ ಕೆನರಾ ಬ್ಯಾಂಕಿನ ಟಿ. ನರಸೀಪುರ ಶಾಖೆಯವರು ಚಲನ್ ಗಳಲ್ಲಿ ಇರುವ ಮೊಹರು ನಕಲಿ ಎಂದು ವರದಿ ನೀಡಿದ್ದರು.ಈ ಹಿನ್ನೆಲೆ ಕೆಲವು ಆಸ್ತಿ ಮಾಲೀಕರು ಹಾಗೂ ಪುರಸಭೆ ಸದಸ್ಯ ಟಿ.ಎಂ. ನಂಜುಂಡಸ್ವಾಮಿ ಅವರು ಜೊತೆಗೂಡಿ ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಬೇಕಾದ ತೆರಿಗೆಯನ್ನು ವಂಚಿಸುವ ದೃಷ್ಟಿಯಿಂದ ಕೆನರಾ ಬ್ಯಾಂಕಿನ ನಕಲಿ ಮೊಹರನ್ನು ಸೃಷ್ಟಿಸಿ 3,43,626 ರು.ಗಳ ಆಸ್ತಿ ತೆರಿಗೆಯನ್ನು ಪಾವತಿಸಿರುವುದಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುತ್ತಾರೆ.ಹಾಗಾಗಿ ಸರ್ಕಾರಕ್ಕೆ ತೆರಿಗೆ ವಂಚಿಸಿರುವ ಟಿ.ಎಂ. ನಂಜುಂಡಸ್ವಾಮಿ ಮತ್ತು ತೆರಿಗೆದಾರರಾದ ಆಸ್ತಿ ಮಾಲೀಕರ ವಿರುದ್ದ ತನಿಖೆ ಕೈಗೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಾಧಿಕಾರಿಗಳು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರು.ಈ ಹಿನ್ನೆಲೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಟಿ.ಎಂ. ನಂಜುಂಡಸ್ವಾಮಿ ಬೆಂಗಳೂರಿನ ತನ್ನ ಸಂಬಂಧಿಕರ ಮನೆಯಲ್ಲಿ ತಲೆ ಮರೆಸಿಕೊಂಡಿದ್ದನ್ನು ಪತ್ತೆ ಹಚ್ವಿದ ಪೊಲೀಸರು ಕಳೆದ ರಾತ್ರಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.ಜಿಲ್ಲಾ ಎಸ್ಪಿ ವಿಷ್ಣುವರ್ಧನ್, ಡಿವೈಎಸ್ಪಿ ರಘು ಹಾಗೂ ಸಿಪಿಐ ಧನಂಜಯ ಅವರ ಮಾರ್ಗದರ್ಶನದಲ್ಲಿ ಎಸ್ಐ ಜಗದೀಶ್ ದೂಳ್ ಶೆಟ್ಟಿ ಇತರೆ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ