ಕನ್ನಡಪ್ರಭ ವಾರ್ತೆ ಮಂಗಳೂರು
ಸುರತ್ಕಲ್ ಎನ್‌ಐಟಿಕೆಯಲ್ಲಿ ಶನಿವಾರ 21ನೇ ಘಟಿಕೋತ್ಸವದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಯುವಕರು ಅತ್ಯಾಧುನಿಕ ಉತ್ಪನ್ನಗಳನ್ನು ಗುಣಮಟ್ಟದೊಂದಿಗೆ ಅಭಿವೃದ್ಧಿಪಡಿಸುವ ಸ್ಟಾರ್ಟ್ ಅಪ್‌ಗಳನ್ನು ಆರಂಭಿಸಲು ಮುಂದೆ ಬರಬೇಕಿದೆ. ಉತ್ಪನ್ನಗಳು ಕಡಿಮೆ ಬೆಲೆಯಲ್ಲಿ ವಿಶ್ವಾದ್ಯಂತ ದೊರೆಯುವಂತಾಗಬೇಕು ಎಂದು ಕರೆ ನೀಡಿದರು.2016ರ ಆಸುಪಾಸಿನಲ್ಲಿ ದೇಶದಲ್ಲಿ 458 ಸ್ಟಾರ್ಟ್ ಅಪ್‌ಗಳಿದ್ದವು. ಈಗ ಸ್ಟಾರ್ಟ್ ಅಪ್‌ಗಳ ಸಂಖ್ಯೆ 1 ಲಕ್ಷಕ್ಕೇರಿದೆ. ರಕ್ಷಣಾ ಕ್ಷೇತ್ರದಲ್ಲೇ 2 ಸಾವಿರದಷ್ಟು ಸ್ಟಾರ್ಟ್ ಅಪ್‌ಗಳಿವೆ. ಈ ಕಾರಣದಿಂದಲೇ ಮುಂಚೆ ಬೃಹತ್ ಆಮದು ದೇಶವಾಗಿದ್ದ ಭಾರತ ಈಗ ಪ್ರಮುಖ ರಫ್ತು ದೇಶವಾಗಿ ಬೆಳೆದಿದೆ. ಇದೇ ರೀತಿ ಹೊಸ ತಂತ್ರಜ್ಞಾನಗಳ ಮೂಲಕ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ ‘ಮೇಕ್ ಫಾರ್ ವರ್ಲ್ಡ್’ ಪರಿಕಲ್ಪನೆಯನ್ನು ಜಾರಿಗೊಳಿಸಿದರೆ ವಿಶ್ವದ ಅಗ್ರಗಣ್ಯ ರಫ್ತು ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂದು ಡಾ.ಸತೀಶ್ ರೆಡ್ಡಿ ಹೇಳಿದರು.
ಹಿಂದೆ ರಕ್ಷಣಾ ಉಪಕರಣಗಳನ್ನು ಹೊರದೇಶದಿಂದ ಆಮದು ಮಾಡಲಾಗುತ್ತಿತ್ತು. ಈಗ ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದ್ದು, ತನ್ನ ಶಸ್ತ್ರಾಗಾರದಲ್ಲಿ ವ್ಯಾಪಕ ಶ್ರೇಣಿಯ ಕ್ಷಿಪಣಿಗಳನ್ನು ಹೊಂದಿದೆ. ಜತೆಗೆ ರಾಡಾರ್‌ಗಳು, ವಿಮಾನಗಳು, ಬಂದೂಕುಗಳು, ಸಂವಹನ ವ್ಯವಸ್ಥೆ, ಜಲಾಂತರ್ಗಾಮಿ ನೌಕೆಗಳ ತಯಾರಿಯಲ್ಲೂ ಸ್ವಾವಲಂಬಿಯಾಗಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ವೆಂಟಿಲೇಟರ್‌ಗಳು ಇಲ್ಲದಾಗ ಅತ್ಯಂತ ಕಡಿಮೆ ಅವಧಿಯಲ್ಲಿ 30 ಸಾವಿರ ವೆಂಟಿಲೇಟರ್‌ಗಳನ್ನು ತಯಾರಿಸಿದಾಗ ದೇಶದ ಸಾಮರ್ಥ್ಯ ಸಾಬೀತಾಗಿದೆ. ಇದರಿಂದ ಅದೆಷ್ಟೋ ಕೈಗಾರಿಕೆಗಳು ತೆರೆದವು. ದೇಶದ ಈ ಸಾಮರ್ಥ್ಯವನ್ನು ಹೆಚ್ಚಿನ ಮಟ್ಟದಲ್ಲಿ ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ಅವರು ಹೇಳಿದರು.
ಸಿಎಸ್‌ಐಆರ್- ಎನ್‌ಐಐಎಸ್‌ಟಿ ನಿರ್ದೇಶಕ ಡಾ.ಸಿ. ಆನಂದರಾಮಕೃಷ್ಣನ್ ಮಾತನಾಡಿ, ದೇಶದಲ್ಲಿ ಮುಖ್ಯವಾಗಿ ಆರೋಗ್ಯ, ಆಹಾರ, ಇಂಧನ, ಹವಾಮಾನಕ್ಕೆ ತೊಂದರೆಯಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ. ಶೇ.54ರಷ್ಟು ಸಿಟಿಗಳಲ್ಲಿ ನೀರಿನ ಕೊರತೆ ಇದೆ. 2033ರ ಹೊತ್ತಿಗೆ ದೇಶದ ಜನಸಂಖ್ಯೆ 150 ಕೋಟಿ ತಲುಪಲಿದ್ದು, ಬೃಹತ್ ಪ್ರಮಾಣದ ಆಹಾರದ ಅಗತ್ಯವೂ ಇದೆ. ಇಂಧನ ಬಳಕೆಯಲ್ಲಿ ಜಗತ್ತಿನ ಮೂರನೇ ಅತಿದೊಡ್ಡ ದೇಶವಾಗಿರುವುದರಿಂದ ಪರ್ಯಾಯ ಇಂಧನಗಳತ್ತ ಗಮನ ಹರಿಸಬೇಕಿದೆ. ಆರೋಗ್ಯ ಕ್ಷೇತ್ರದ ಸುಧಾರಣೆಗೂ ಹೊಸ ಆವಿಷ್ಕಾರಗಳು ನಡೆಯಬೇಕಿದೆ ಎಂದರು.
ಎನ್‌ಐಟಿಕೆ ನಿರ್ದೇಶಕ ಪ್ರೊ.ಬಿ. ರವಿ ಮಾತನಾಡಿ, ಎನ್ಐಟಿಕೆಯಿಂದ ನಡೆಸುವ ವಿವಿಧ ಪರೀಕ್ಷೆಗಳು ಮತ್ತು ಸಲಹಾ ಸೇವೆಗಳ ಮೊತ್ತ 3 ಕೋಟಿ ರು.ಗಿಂತ (ಕಳೆದ ವರ್ಷ) 5 ಕೋಟಿ ರು.ಗೆ ಏರಿಕೆಯಾಗಿದೆ. ಸಂಸ್ಥೆಯ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ವಿಫುಲವಾಗಿದೆ ಎಂದು ಹೇಳಿದರು.
2013 ವಿದ್ಯಾರ್ಥಿಗಳಿಗೆ ಪದವಿ: ಒಟ್ಟು 2013 ಅಭ್ಯರ್ಥಿಗಳು ಘಟಿಕೋತ್ಸವದಲ್ಲಿ ಪದವಿ ಪಡೆದರು. ಅವರಲ್ಲಿ 138 ಪಿಎಚ್‌ಡಿ, 961 ಪಿಜಿ ಮತ್ತು 914 ಬಿಟೆಕ್ ವಿದ್ಯಾರ್ಥಿಗಳು ಸೇರಿದ್ದಾರೆ. ಒಂಬತ್ತು ಬಿಟೆಕ್ ವಿದ್ಯಾರ್ಥಿಗಳು ಮತ್ತು 30 ಪಿಜಿ ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದರು.