ಕನ್ನಡಪ್ರಭ ವಾರ್ತೆ ಮಾಲೂರು
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಪೈಪ್ ಲೈನ್ ಪಂಪು, ಮೋಟಾರ್ ದುರಸ್ತಿಪಡಿಸಿ ಶುದ್ಧ ಕುಡಿಯುವ ನೀರನ್ನು ಪಟ್ಟಣದ ಜನತೆಗೆ ಸರಬರಾಜು ಮಾಡಲು ಟಾಸ್ಕ್ ಫೋರ್ಸ್ ಸಮಿತಿ ೪೦ ಲಕ್ಷ ರು.ಗಳನ್ನು ಬಿಡುಗಡೆಗೊಳಿಸಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ೨೦೨೪-೨೫ ನೇ ಸಾಲಿನ ಬಜೆಟ್ ಮಂಡನೆಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯಾದ್ಯಾಂತ ಬೇಸಿಗೆ ಆರಂಭವಾಗಿದ್ದು, ತಾಲೂಕಿನಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಗ್ರಾಪಂಗಳು, ಪುರಸಭೆಗಳು ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದರು.
ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಜಿಲ್ಲಾ ಟಾಸ್ಕಪೋರ್ಸ್ ಸಮಿತಿ ೪೦ ಲಕ್ಷ ರು.ಗಳನ್ನು ಬಿಡುಗಡೆ ಮಾಡಿದ್ದು, ವಾರ್ಡುಗಳಲ್ಲಿ ಸದಸ್ಯರು ಅಗತ್ಯವಿರುವ ಪಂಪು, ಮೋಟಾರ್ ಅಳವಡಿಕೆ, ಪೈಪ್ ಲೈನ್ ದುರಸ್ತಿ ಮತ್ತಿತರ ಅಗತ್ಯವಿರುವ ಕಾಮಗಾರಿಗಳ ಪಟ್ಟಿ ತಯಾರಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಶುದ್ಧ ಕುಡಿಯುವ ನೀರಿನ ಸರಬರಾಜಿಗೆ ಮುಂದಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಪುರಸಭಾ ಸದಸ್ಯ ಎಂ.ವಿ.ವೇಮನ ಮಾತನಾಡಿ, ಕಳೆದ ೧೦ ತಿಂಗಳಿಂದ ಪುರಸಭಾ ಅಧ್ಯಕ್ಷರು ಆಡಳಿತ ಮಂಡಳಿ ಇಲ್ಲದ ಕಾರಣ ವಾರ್ಡುಗಳಲ್ಲಿ ಕುಂದು ಕೊರತೆಗಳನ್ನು ಚರ್ಚಿಸಲು ಅವಕಾಶವೇ ಸಿಗುತ್ತಿಲ್ಲ. ಅಧ್ಯಕ್ಷ, ಉಪಾಧ್ಯಕರ ಆಯ್ಕೆ ಬೇಗ ಆದರೆ ಸಾರ್ವಜನಿಕರ ಕೊರತೆ ನೀಗಿಸಲು ಸಾಧ್ಯವಾಗಲಿದೆ ಎಂದರು.
ಈ ಬಗ್ಗೆ ಮಾತನಾಡಿದ ಶಾಸಕ ನಂಜೇಗೌಡರು, ಪುರಸಭಾ ಅಧ್ಯಕ್ಷರ ಆಯ್ಕೆ ವಿಚಾರ ನ್ಯಾಯಾಲಯದಲ್ಲಿ ಇರುವುದರಿಂದ ಆದೇಶ ಬರುವವರೆಗೂ ಪ್ರತಿ ತಿಂಗಳು ಪುರಸಭೆಯಲ್ಲಿ ಸಭೆ ಸೇರಿ ವಾರ್ಡಗಳ ಸಮಸ್ಯೆಗಳನ್ನು ಚರ್ಚಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.ಸದಸ್ಯ ರಾಜಪ್ಪ ಮಾತನಾಡಿದರು.
ಪುರಸಭಾ ಸದಸ್ಯ ಭವ್ಯ ಮಾತನಾಡಿ, ವಾರ್ಡಿನಲ್ಲಿ ಪೈಪ್ ಲೈನ್ ಹಾಗೂ ನೀರಿನ ಸಮಸ್ಯೆ ಹೆಚ್ಚಾಗಿದೆ. ವಾಟರ್ ಆಪರೇಟರ್ ನಮ್ಮ ಮಾತು ಕೇಳುತ್ತಿಲ್ಲ, ಸಾರ್ವಜನಿಕರೊಂದಿಗೆ ಶಾಮಿಲಾಗಿ ಅನಧಿಕೃತವಾಗಿ ನಲ್ಲಿ , ಪೈಪ್ ಲೈನ್ ಗಳನ್ನು ಅಳವಡಿಸುತ್ತಿದ್ದಾರೆ. ಅಧಿಕಾರಿಗಳು ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದಾಗ, ಶಾಸಕ ನಂಜೇಗೌಡ ಮಾತನಾಡಿ, ಯಾರೇ ಆಗಿರಲಿ ಮುಲಾಜಿಲ್ಲದೆ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿ, ಕಸ ವಿಲೇವಾರಿ ಘಟಕದ ಕಾಮಗಾರಿ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.ನಗರೋತ್ಥಾನ ಯೋಜನೆಯಡಿ ಕಾಮಗಾರಿಗಳನ್ನು ಪೂರ್ಣಗೊಳಿಸದ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲು ಸದಸ್ಯರು ಒತ್ತಾಯಿಸಿದ ಹಿನ್ನೆಲೆ ಸಭೆಯಲ್ಲಿ ಸರ್ವಾನುಮತದಿಂದ ಚರ್ಚಿಸಿ ಬ್ಲಾಕ್ ಲಿಸ್ಟ್ ಗೆ ಸೇರಿಸಲು ತೀರ್ಮಾನಿಸಲಾಯಿತು. ಪುರಸಭೆಯ ಆಸ್ತಿಯಲ್ಲಿ ಅತಿಕ್ರಮ ಪ್ರವೇಶಿಸಿ ಕಟ್ಟಡಗಳನ್ನು ನಿರ್ಮಿಸಿದರೆ ಅಂತಹ ಕಟ್ಟಡಗಳನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸುವಂತೆ ಶಾಸಕರು ಸೂಚಿಸಿದರು.
ಪುರಸಭಾ ಆಡಳಿತ ನನ್ನ ಸರ್ಕಾರದ ಆಡಳಿತವಾಗಿದ್ದು, ಇಲ್ಲಿ ಯಾವುದೇ ರೀತಿಯ ಸಮಸ್ಯೆಗಳಾದಲ್ಲಿ ನಾನು ಸುಮ್ಮನೆ ಇರುವುದಿಲ್ಲ. ಸದಸ್ಯರು ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ತಮ್ಮ ವಾರ್ಡುಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಪಟ್ಟಣದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು, ಅಧಿಕಾರಿಗಳು ಪ್ರತಿನಿತ್ಯ ಸಂಗ್ರಹವಾಗುವ ಕಸವನ್ನು ತೆರವು ಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಕಸವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತೆರವುಗೊಳಿಸುವ ಕೆಲಸ ಮಾಡುವಂತೆ ಹೇಳಿದರು.ಬೇಸಿಗೆ ಸಮೀಪಿಸುತ್ತಿರುವುದರಿಂದ ಪಟ್ಟಣದಲ್ಲಿ ನೀರಿನ ಸಮಸ್ಯೆ ಇರುವ ವಾರ್ಡುಗಳಲ್ಲಿ ಅಗತ್ಯವಿರುವ ಪೈಪ್ ಲೈನ್, ಪಂಪು, ಮೋಟಾರ್ ದುರಸ್ತಿಗೆ ಅಗತ್ಯವಾಗಿ ಪಟ್ಟಿ ಮಾಡಿ ನೀಡಿದರೆ ಮತ್ತಷ್ಟು ಹಣವನ್ನು ಬಿಡುಗಡೆಗೊಳಿಸಲಾಗುವುದೆಂದರು.
ತಹಸೀಲ್ದಾರ್ ಕೆ. ರಮೇಶ್ ಪುರಸಭಾ ಸದಸ್ಯರು ಹಾಜರಿದ್ದರು.