ಎಸ್ ಎಲ್ ಆರ್ ಮೆಟಾಲಿಕ್ಸ್ ಲಿ. ಕಂಪನಿಯಿಂದ ಎ.ಕೆ. ಕಾಲೋನಿಯಲ್ಲಿ ಹೊಸ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಭೂಮಿ ಪೂಜೆ

KannadaprabhaNewsNetwork | Published : Feb 6, 2025 11:47 PM

ಸಾರಾಂಶ

ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕಾರ್ಖಾನೆಯವರು ಮುಂದಾಗಬೇಕು

ಮರಿಯಮ್ಮನಹಳ್ಳಿ: ಎಸ್‌ಎಲ್‌ಆರ್‌ ಮೆಟಾಲಿಕ್‌ ಕಾರ್ಖಾನೆಗೆ ಮರಿಯಮ್ಮನಹಳ್ಳಿ ಪಟ್ಟಣವು ಹೆಬ್ಬಾಗಿ ಆಗಿರುವುದರಿಂದ ಮರಿಯಮ್ಮನಹಳ್ಳಿ ಪಟ್ಟಣವನ್ನು ಅಭಿವೃದ್ದಿ ಪಡಿಸಲು ಹೆಚ್ಚಿನ ರೀತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕಾರ್ಖಾನೆಯವರು ಮುಂದಾಗಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಆದಿಮನಿ ಹುಸೇನ್‌ ಭಾಷ ತಿಳಿಸಿದರು.

ಇಲ್ಲಿನ ಎ.ಕೆ. ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಎರಡು ನೂತನ ಶಾಲಾ ಕೊಠಡಿಗಳ ನಿರ್ಮಾಣದ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಎಸ್ ಎಲ್ ಆರ್ ಕಂಪನಿ ವತಿಯಿಂದ ಎ.ಕೆ. ಕಾಲೋನಿಯ ಸರ್ಕಾರಿ ಶಾಲೆಯಲ್ಲಿ ಎರಡು ಹೊಸ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ನೀಡಿದ್ದು ಇದು ತುಂಬಾ ಸಂತೋಷದಾಯಕರ ವಿಚಾರವಾಗಿದೆ. ಮತ್ತು ಮುಂದಿನ ಹಣಕಾಸಿನ ವರ್ಷದಲ್ಲಿ ಇನ್ನೂ ಮೂರು ಕೊಠಡಿಗಳ ನಿರ್ಮಾಣಕ್ಕೆ ಅನುದಾನ ನೀಡಿ ಇಲ್ಲಿನ ವಿದ್ಯಾರ್ಥಿಗಳಿಗೆ ವಿವಿಧ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. ತಕ್ಷಣವೇ ಕಾರ್ಖಾನೆಯವರು ಶಾಲಾ ಅಭಿವೃದ್ದಿ ಸೇರಿದಂತೆ ಪಟ್ಟಣದಲ್ಲಿ ವಿವಿಧ ಅಭಿವೃದ್ದಿ ಕೆಲಸಗಳನ್ನು ನಡೆಸಲು ಮುಂದಾಗಬೇಕು ಎಂದು ಅವರು ಸೂಚಿಸಿದರು.

ಎಸ್ ಎಲ್ ಆರ್. ಕಂಪನಿಯ ಎ.ಜಿ.ಎಂ. ರಾಘವಾಂಕ ಕೆ. ಎಸ್ ಮಾತನಾಡಿ ಎಸ್.ಎಲ್.ಆರ್ ಮೆಟಾಲಿಕ್ಸ್ ಕಂಪನಿಯ ಸಿ. ಎಸ್ ಆರ್ ಯೋಜನೆಯ ಅಡಿಯಲ್ಲಿ ಕಂಪನಿಯ ಕ್ಷೇತ್ರ ವ್ಯಾಪ್ತಿಗೆ ಬರುವ ಆಯ್ದ 6 ಹಳ್ಳಿಗಳಲ್ಲಿನ ಸರ್ಕಾರಿ ಶಾಲೆಗಳ ನವಿಕರಣ ಮತ್ತು ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಈಗ ಮರಿಯಮ್ಮನಹಳ್ಳಿ ಪಟ್ಟಣದಲ್ಲಿರುವ ಅಂಬೇಡ್ಕರ್ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪನಿ ವತಿಯಿಂದ ಸುಮಾರು 18 ಲಕ್ಷ ರೂ.ಗಳ ವೆಚ್ಚದಲ್ಲಿ ಎರಡು ಹೊಸ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ ಎಂದು ಅವರು ಹೇಳಿದರು.

ಎಸ್ ಎಲ್ ಆರ್. ಕಂಪನಿಯು ಯಾವಾಗಲೂ ವಿದ್ಯಾರ್ಥಿಗಳ ಭವಿಷ್ಯದ ಏಳಿಗೆಗಾಗಿ ವಿದ್ಯಾರ್ಥಿ ಯೋಜನೆ ಅಡಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಮತ್ತು ಅನುದಾನಗಳನ್ನು ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಸಹ ಮಕ್ಕಳ ಭವಿಷ್ಯವನ್ನು ರೂಪಿಸಲು ಇನ್ನು ಹೆಚ್ಚಿನ ಮಟ್ಟದಲ್ಲಿ ಸಿ.ಎಸ್.ಆರ್. ಯೋಜನೆ ಅಡಿಯಲ್ಲಿ ಅನುದಾನವನ್ನು ಬಿಡುಗಡೆ ಮಾಡಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಕಂಪನಿ ಮುಂದಾಗಲಿದೆ ಎಂದು ಅವರು ಹೇಳಿದರು.

ಶಾಲಾ ಮುಖ್ಯೋಪಾದ್ಯಯ ಸಿ. ವೆಂಕಟೇಶ ಮಾತನಾಡಿ, ಎಸ್ಎಲ್ಆರ್ ಕಂಪನಿ ವತಿಯಿಂದ ಈಗಾಗಲೇ ಮಕ್ಕಳಿಗೆ ಶಾಲಾ ಸಮವಸ್ತ್ರ, ನೋಟ್ ಪುಸ್ತಕ ಸೇರಿದತೆ ಇತರೆ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದಾರೆ. ಪ್ರಸ್ತುತ ಕಂಪನಿಯು ನಮ್ಮ ಶಾಲೆ ತುಂಬಾ ಹಳೆಯ ಕಟ್ಟಡವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಪಾಠ ಕೇಳಲು ತುಂಬಾ ಸಮಸ್ಯೆ ಆಗುತ್ತಿತ್ತು. ಇದನ್ನು ಮನಗಂಡ ಕಂಪನಿಯು ಹಳೆ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ತುಂಬಾ ಅನುಕೂಲವಾಗಿದೆ ಎಂದು ಅವರು ಹೇಳಿದರು.

ಪ,ಪಂ. ಸದಸ್ಯರಾದ ಎಲ್‌. ವಸಂತ, ಎಲ್‌. ಪರುಶುರಾಮ, ಮರಡಿ ಸುರೇಶ್‌, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಹಲಿಗಿ ನಾಗರಾಜ, ಪಿಎಸ್‌ಐ ಮೌನೇಶ್ ರಾಥೋಡ್‌, ಸ್ಥಳೀಯ ಮುಖಂಡರಾದ ಎಲ್‌. ನಾಗರಾಜ, ಸಣ್ಣ ದುರುಗಪ್ಪ, ರೆಡ್ಡಿ ಹನುಮಂತಪ್ಪ,ರೋಗಾಣಿ ಮಂಜುನಾಥ, ರುದ್ರನಾಯ್ಕ, ಎಲ್‌. ಚಂದ್ರಶೇಖರ್‌, ಪಾರ್ವತಮ್ಮ, ದುರುಗಪ್ಪ, ಸ್ವಾಮಿ, ದುರುಗೇಶ್‌, ಕುಮಾರೆಪ್ಪ, ಅಯ್ಯನಹಳ್ಳಿ ಪರಮೇಶ್, ಗೋಣೆಪ್ಪ, ಅಂಬ್ರೇಶ್‌, ಸಿ. ರಂಗಪ್ಪ, ಎಸ್‌.ಎಲ್‌.ಆರ್‌ ಕಂಪನಿಯ ಸಿ.ಎಸ್.ಆರ್. ಸಿಬ್ಬಂದಿಗಳಾದ ಮಲ್ಲಿಕಾರ್ಜುನ.ಕೆ, ಮಾರುತಿ ಘೋಷಿ, ಶಿವಕುಮಾರ್, ವಿರೇಶ ಬಳಿಗರ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು, ಸ್ಥಳೀಯ ಎ.ಕೆ.ಕಾಲೋನಿಯ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

Share this article