ಸಿದ್ದಾಪುರ: ತಾಲೂಕಿನ ಕರೆ ಒಕ್ಕಲಿಗರ ಸಂಘ ಹಲಗಡಿಕೊಪ್ಪದಲ್ಲಿ ನಿರ್ಮಿಸಲಿರುವ ಸಮುದಾಯ ಭವನದ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಏ. ೧೧ರಂದು ಅಪರಾಹ್ನ 12.30ಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ನೆರವೇರಿಸಲಿದ್ದಾರೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪ್ರಧಾನ ಕಾರ್ಯದರ್ಶಿ, ಶಿವಮೊಗ್ಗ ಶಾಖಾ ಮಠದ ಸದ್ಗುರು ಶ್ರೀ ಪ್ರಸನ್ನನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮಿಜೀ ಸಾನ್ನಿಧ್ಯ ವಹಿಸಲಿದ್ದು, ಶ್ರೀ ಆದಿಚುಂಚನಗಿರಿ ಮಿರ್ಜಾನ್ ಶಾಖಾಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಉಪಸ್ಥಿತಿ ವಹಿಸುವರು. ತಾಲೂಕು ಕರೆ ಒಕ್ಕಲಿಗರ ಸಂಘದ ಅಧ್ಯಕ್ಷ ಸುಬ್ರಾಯ ಗೌಡ ಕುಳಿಕಟ್ಟು ಅಧ್ಯಕ್ಷತೆ ವಹಿಸುವರು. ಸಚಿವ ಮಂಕಾಳ ಎಸ್. ವೈದ್ಯ, ಶಾಸಕ ಭೀಮಣ್ಣ ನಾಯ್ಕ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಉಮಾಪತಿ ಗೌಡ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಧಮೇಶ್ ಸಿರಿಬೈಲ್, ಉದ್ಯಮಿ ಉಪೇಂದ್ರ ಪೈ, ವಕೀಲ ಕೆ.ಟಿ. ಗೌಡ ಕಾರವಾರ, ಎಂ.ಟಿ. ಗೌಡ ಕುಮಟಾ, ಸಂಘಟಕರಾದ ಮಹಾಬಲೇಶ್ವರ ಗೌಡ, ಶಂಕರ ಎಂ. ಗೌಡ ಪಾಲ್ಗೊಳ್ಳುವರು. ಭೂಮಿ ದಾನ ಮಾಡಿದ ವೆಂಕಟೇಶ ಆರ್. ಕಾಂತು ಅವರನ್ನು ಸನ್ಮಾನಿಸಲಾಗುವುದು ಎಂದರು.ಏ. ೧೧ರ ಬೆಳಗ್ಗೆ ಪಟ್ಟಣದ ಸಾಗರ ವೃತ್ತದಿಂದ ಶ್ರೀಗಳನ್ನು ಪೂರ್ಣಕುಂಭ ಸ್ವಾಗತ ನೀಡಿ, ಬೈಕ್ ಹಾಗೂ ಕಾರುಗಳ ರ‍್ಯಾಲಿಯ ಜತೆಗೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾಗುವುದು. ಕರೆ ಒಕ್ಕಲಿಗರ ಸಮುದಾಯ ಭವನ ಜಿಲ್ಲೆಯಲ್ಲೇ ಮೊದಲನೆಯದು. ಸುಮಾರು ₹೬ ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಯೋಜಿಸಲಾಗಿದೆ. ವೆಂಕಟೇಶ ಕಾಂತು ಅವರು ೨೦ ಗುಂಟೆ ಭೂಮಿಯನ್ನು ದಾನ ನೀಡಿದ್ದು ೧೪ ಗುಂಟೆಯನ್ನು ಖರೀದಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಸಂಘದ ಗೌರವಾಧ್ಯಕ್ಷ ಮಹಾಬಲೇಶ್ವರ ಗೌಡ ಮೇಲಿನ ಸರಕುಳಿ, ಅಧ್ಯಕ್ಷ ಸುಬ್ರಾಯ ಗೌಡ ಕುಳಿಕಟ್ಟು, ಪದಾಧಿಕಾರಿಗಳಾದ ರವೀಶ ಗೌಡ ಹುತ್ಗಾರ, ಶಂಕರ ಗೌಡ ಹುಬ್ಬಳ್ಳಿ, ನಾಗಪತಿ ಗೌಡ, ಸೀತಾರಾಮ ಗೌಡ, ಮಂಜುನಾಥ ಗೌಡ, ವಿನಾಯಕ ಗೌಡ, ಕೃಷ್ಣ ಗೌಡ, ವಿ.ಟಿ. ಗೌಡ ಮುಂತಾದವರಿದ್ದರು.