ಶಿರ್ವ ಎಂಎಸ್ಆರ್ ಎಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ

KannadaprabhaNewsNetwork | Published : May 3, 2024 1:07 AM

ಸಾರಾಂಶ

ಶಿರ್ವದ ಮೂಲ್ಕಿ ಸುಂದರ ರಾಮ್‌ ಶೆಟ್ಟಿ ಕಾಲೇಜುನಲ್ಲಿ ಕರಿಯರ್‌ ಮತ್ತು ಪ್ಲೆಸ್ಮೆಂಟ್‌ ಟ್ರೈನಿಂಗ್‌ ಕಾರ್ಯಕ್ರಮ ನಡೆಯಿತು. 13 ವಿದ್ಯಾರ್ಥಿಗಳಿಗೆ ಉದ್ಯೋಗ ತರಬೇತಿಗೆ ಆಯ್ಕೆ ಪತ್ರ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜುನಲ್ಲಿ ಏ. 30ರಂದು ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಅವರ ಸಂಸ್ಮರಣೆ - ಸ್ಥಾಪಕರ ದಿನ ಹಾಗೂ ಬೆಂಗಳೂರಿನ ಕ್ಯೂ ಸ್ಪೈಡರ್ಸ್ ಸಹಯೋಗದಲ್ಲಿ ಕರಿಯರ್ ಮತ್ತು ಪ್ಲೆಸ್ಮೆಂಟ್ ಟ್ರೈನಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಿವೃತ್ತ ಅಧೀಕ್ಷಕ ರಮಾನಂದ ಶೆಟ್ಟಿಗಾರ್ ಅವರು ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಅವರ ಬಹುಮುಖ ವ್ಯಕ್ತಿತ್ವ, ಅಸಾಧಾರಣ ಕಾರ್ಯಕ್ಷಮತೆಯನ್ನು ಸ್ಮರಿಸಿದರು. ಅವರು ಶಿರ್ವದಂತಹ ಗ್ರಾಮೀಣ ಪ್ರದೇಶದಲ್ಲಿ ಕಾಲೇಜನ್ನು ಸ್ಥಾಪಿಸಿ, ಸಾವಿರಾರು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸು ಮಾಡಿದ ಧೀಮಂತರು ಎಂದು ನುಡಿದರು.

ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಅವರ 109 ನೇಯ ಹುಟ್ಟು ಹಬ್ಬದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಮಿಥುನ್ ಚಕ್ರವರ್ತಿ ಅವರು ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಅವರ ಆದರ್ಶ ವ್ಯಕ್ತಿತ್ವದ ಕುರಿತು ಮಾತನಾಡಿ ಇಂತಹ ಮಹನೀಯರು ಸ್ಥಾಪಿಸಿದ ಈ ಸಂಸ್ಥೆಯಲ್ಲಿ ನಾವೆಲ್ಲ ಕರ್ತವ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಕ್ಯೂಸ್ಪೈಡರ್ ನ ಜೆನಿಫರ್ ಮತ್ತು ಶ್ರೀಲೇಖಾ ಅವರು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಒಂದು ದಿನದ ವೃತ್ತಿ ತರಬೇತಿಯ ಕಾರ್ಯಾಗಾರದಲ್ಲಿ ಸಂದರ್ಶನ ನಡೆಸಿ, ಆಯ್ಕೆಯಾದ 13 ವಿದ್ಯಾರ್ಥಿಗಳಿಗೆ ಅಂತಿಮ ಪದವಿ ಪರೀಕ್ಷೆಯ ನಂತರ ನಡೆಯುವ ಎರಡು ತಿಂಗಳ ಉಚಿತ ಉದ್ಯೋಗ ತರಬೇತಿಗೆ ಆಯ್ಕೆ ಪತ್ರವನ್ನು ನೀಡಿದರು.

ವಿಜಯ ಬ್ಯಾಂಕ್ ಶಿರ್ವದ ನಿವೃತ್ತ ವ್ಯವಸ್ಥಾಪಕ ಸದಾನಂದ ಶೆಟ್ಟಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರು ಹಾಗೂ ಪ್ಲೆಸ್ಮೆಂಟ್ ಅಧಿಕಾರಿ ಹೇಮಲತಾ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಅಪ್ಸಾನ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ರಶ್ಮಿ ವಂದಿಸಿದರು.

Share this article