ಧಾರವಾಡ: ಇಲ್ಲಿಯ ಕೃಷಿ ವಿಶ್ವವಿದ್ಯಾಲಯವು ಈ ಬಾರಿಯ ಕೃಷಿಮೇಳವನ್ನು ಸೆಪ್ಟೆಂಬರ್ 13ರಿಂದ 16ರ ವರೆಗೆ ಆಯೋಜಿಸಲಿದೆ. ಈ ಮೇಳವನ್ನು ''''ಪೌಷ್ಟಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ಮತ್ತು ಸಾಂಪ್ರದಾಯಿಕ ತಳಿಗಳು'''' ಘೋಷವಾಕ್ಯದಡಿಯಲ್ಲಿ ಆಯೋಜಿಸಲು ವಿವಿ ತೀರ್ಮಾನಿಸಿದೆ.
ವಿವಿ ವ್ಯಾಪ್ತಿಯಲ್ಲಿ ಕೈಗೊಂಡ ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆ ಸಮಗ್ರ ಮಾಹಿತಿಯನ್ನು ರೈತ ಸಮುದಾಯಕ್ಕೆ ಒದಗಿಸಲಾಗುವುದು. ಅಲ್ಲದೇ, ವಿವಿಯಿಂದ ಬಿಡುಗಡೆಯಾದ ಮತ್ತು ಬಿಡುಗಡೆಯ ಹಂತದಲ್ಲಿರುವ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಕ್ಷೇತ್ರ ಪ್ರಯೋಗ ಹಾಗೂ ವಿವಿಧ ಪ್ರಾತ್ಯಕ್ಷಿಕೆಗಳ ಮೂಲಕ ಮನದಟ್ಟಾಗುವ ರೀತಿಯಲ್ಲಿ ಏರ್ಪಡಿಸಲಾಗುವುದು.ಬೀಜ ಮೇಳ, ಪೌಷ್ಟಿಕ ಆಹಾರ ಭದ್ರತೆಗೆ ಸಾಂಪ್ರದಾಯಿಕ ತಳಿಗಳು, ಪೌಷ್ಟಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ತಾಂತ್ರಿಕತೆಗಳು, ಸಾಂಪ್ರದಾಯಿಕ ತಳಿಗಳ ಪ್ರಾಮುಖ್ಯತೆ ಹಾಗೂ ಸಂರಕ್ಷಣೆ, ಸುಸ್ಥಿರತೆಗಾಗಿ ಹಾಗೂ ಪರಿಸರ ಸ್ನೇಹಿ ನೈಸರ್ಗಿಕ ಮತ್ತು ಸಾವಯವ ಕೃಷಿ, ಕೃಷಿ ತಜ್ಞರೊಂದಿಗೆ ಸಮಾಲೋಚನೆ ಹಾಗೂ ಕೃಷಿ ನವೋದ್ಯಮಗಳು, ಸಮಗ್ರ ಬೆಳೆ, ಪೋಷಕಾಂಶ ಹಾಗೂ ಕೀಟಗಳ ನಿರ್ವಹಣೆ, ಹಿಂಗಾರು ಬೆಳೆಗಳ ತಾಂತ್ರಿಕತೆಗಳು, ಮಳೆ ನೀರು ಕೊಯ್ಲು ಹೀಗೆ ಕೃಷಿಗೆ ಸಂಬಂಧ ಮಾಹಿತಿಯನ್ನು ಇಲ್ಲಿ ನೀಡಲಾಗುವುದು.
ಇದರ ಜತೆಗೆ ರೈತರ ಆವಿಷ್ಕಾರಗಳು, ವಿಶೇಷ ಸಾಧನೆಗೈದ ಅದರಲ್ಲೂ ಸಾಂಪ್ರದಾಯಿಕ ತಳಿಗಳು ಹಾಗೂ ಮಣ್ಣು ಮತ್ತು ನೀರಿನ ಸಂರಕ್ಷಣೆಯಲ್ಲಿ ಯಶಸ್ಸು ಸಾಧಿಸಿದ ರೈತ ಹಾಗೂ ರೈತ ಮಹಿಳೆಯರೊಂದಿಗೆ ಸಂವಾದ, ಕೃಷಿ ತಜ್ಞರೊಂದಿಗೆ ಸಮಾಲೋಚನೆಯನ್ನು ಏರ್ಪಡಿಸಲಾಗುವುದು.ಕೃಷಿ ವಸ್ತು ಪ್ರದರ್ಶನದಲ್ಲಿ, ಹೈಟೆಕ್ ಮಳಿಗೆಗಳು, ಸಾಮಾನ್ಯ ಮಳಿಗೆಗಳು, ಯಂತ್ರೋಪಕರಣ ಮಳಿಗೆಗಳು, ಆಹಾರ ಮಳಿಗೆಗಳು, ಜಾನುವಾರು ಪ್ರದರ್ಶನ ಮಳಿಗೆಗಳು ಹಾಗೂ ಕ್ಷೇತ್ರ ಮಳಿಗೆಗಳ ವ್ಯವಸ್ಥೆ ಮಾಡಲಾಗುವುದು. ಕೃಷಿಕರು, ಕೃಷಿ ಮಹಿಳೆಯರು, ಗ್ರಾಮೀಣ ಯುವಕರು ಹಾಗೂ ಎಲ್ಲ ಕೃಷಿ ಆಸಕ್ತರು ಈ ಕೃಷಿ ಮೇಳದ ಲಾಭವನ್ನು ಪಡೆದುಕೊಳ್ಳಲು ವಿಶ್ವವಿದ್ಯಾಲದ ವಿಸ್ತರಣಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜತೆಗೆ ಮಳಿಗೆಗಳನ್ನು ಕಾಯ್ದಿರಿಸಲು ದೂ. 8277478507 ಸಂಪರ್ಕಿಸಬಹುದು.