ಸೈನಿಕರು, ಪೊಲೀಸರು, ಕ್ರೀಡಾಪಟುಗಳು, ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನ
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ತಮ್ಮ ಜೀವವನ್ನು ಬಲಿಕೊಟ್ಟರು ಹಾಗೂ ಸ್ವಾತಂತ್ರ್ಯದ ನಂತರ ಈ ದೇಶವನ್ನು ಮುನ್ನಡೆಸಿಕೊಂಡು ಬಂದವರು ಹಿರೋಗಳು ಎಂದು ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರರಾದ ವೇದಾ ಕೃಷ್ಣಮೂರ್ತಿ ಹೇಳಿದರು.
ನಗರದ ರಾಮನಹಳ್ಳಿಯ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಜಿಲ್ಲಾ ಪೊಲೀಸ್ ಇಲಾಖೆ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ದೇಶಕ್ಕಾಗಿ ಜೀವನ ಮುಡುಪಾಗಿಟ್ಟು ದೇಶವನ್ನು ಕಾಪಾಡುತ್ತಿರುವ ಸೈನಿಕರು, ಆಂತರಿಕ ರಕ್ಷಣೆ ಮಾಡುತ್ತಿರುವ ಪೊಲೀಸ್ ಸಿಬ್ಬಂದಿ ಹಾಗೂ ದೇಶದ ಹೆಸರನ್ನು ಉತ್ತುಂಗಕ್ಕೆ ತರುವ ಕ್ರೀಡಾಪಟುಗಳು ಸಹ ಹಿರೋಗಳು ಎಂದು ಹೇಳಿದರು.ಕ್ರಿಕೆಟ್ ಆಟದ ಸಂದರ್ಭದಲ್ಲಿ ಹಲವು ದೇಶಗಳಿಗೆ ಹೋಗಿ ಬಂದಿದ್ದೇನೆ. ಅಭಿವೃದ್ಧಿ ಹೊಂದಿರುವ ಹಾಗೂ ಶ್ರೀಮಂತ ದೇಶ ಗಳನ್ನು ನೋಡಿದ್ದೇನೆ. ಆದರೆ, ಚಿಕ್ಕಮಗಳೂರಿನಂತಹ ಜಿಲ್ಲೆ ಯಾವ ದೇಶದಲ್ಲೂ ನೋಡಿಲ್ಲ, ಉತ್ತಮ ಪರಿಸರ ಹೊಂದಿರುವ ವಿಶ್ವದ ಕೆಲವೇ ದೇಶಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ಸ್ಥಾನ ಪಡೆದುಕೊಂಡಿರುವುದು ನಾವೆಲ್ಲಾ ಹೆಮ್ಮೆ ಪಡುವ ವಿಷಯ ಎಂದ ಅವರು, ಪ್ರೀತಿ, ಪ್ರೇಮ, ಉತ್ತಮ ಮನೋಭಾವನೆ ಹೊಂದಿರುವವರು ಈ ನಮ್ಮ ಜಿಲ್ಲೆಯಲ್ಲಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಮಾತನಾಡಿ, ಬೇರೆ ಎಲ್ಲೆಡೆಗೂ ಗಮನ ಹರಿಸದೇ ಮನಸ್ಸು ಮತ್ತು ದೇಹ ಒಂದೇ ವಿಷಯದ ಮೇಲೆ ಕೇಂದ್ರಿಕೃತವಾದರೆ ನಮ್ಮನ್ನು ತಡೆಯೋರು ಯಾರೂ ಇಲ್ಲ ಎಂದರು.
ಈ ಕ್ರೀಡಾಕೂಟದಲ್ಲಿ ಐದು ತಂಡಗಳಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದಾರೆ. ಇಂತಹ ಕ್ರೀಡಾಕೂಟ ದಲ್ಲಿ ಭಾಗವಹಿಸುವುದರಿಂದ ನಮ್ಮಲ್ಲಿ ಸಮನ್ವಯತೆ ಬರುತ್ತದೆ. ನಾಯಕತ್ವ ಗುಣಗಳು ಬೆಳೆಯುತ್ತವೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಮಾತನಾಡಿ, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿ ಸ್ಪರ್ಧಾತ್ಮಕ ಮನೋಭಾವ ಬರಬೇಕು. ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ನಡುವೆ ಬೇಧಬಾವ ಇರುವುದಿಲ್ಲ, ಈ ಅಂತರ ಕಡಿಮೆಯಾಗುತ್ತದೆ ಎಂದರು. ಆರೋಗ್ಯ ಎಂದರೆ ಬರೀ ದೈಹಿಕ ಆರೋಗ್ಯ ಅಲ್ಲ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವೂ ಸಹ ಸಿಬ್ಬಂದಿಗೆ ಮುಖ್ಯವಾಗಿರುತ್ತದೆ. ಈ ಆರೋಗ್ಯಕ್ಕಾಗಿ ದೈಹಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿರಬೇಕು. ಅದಕ್ಕೆ ಕ್ರೀಡಾ ಮನೋಭಾವನೆ ನಮ್ಮಲ್ಲಿ ಹೆಚ್ಚಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು. 29 ಕೆಸಿಕೆಎಂ 1ಚಿಕ್ಕಮಗಳೂರಿನ ರಾಮನಹಳ್ಳಿಯ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಜಿಲ್ಲಾ ಪೊಲೀಸ್ ಇಲಾಖೆ ಕ್ರೀಡಾಕೂಟವನ್ನು ವೇದಾ ಕೃಷ್ಣಮೂರ್ತಿ ಉದ್ಘಾಟಿಸಿ ಮಾತನಾಡಿದರು. ಜಿಪಂ ಸಿಬೊಓ ಕೀರ್ತನಾ, ಎಎಸ್ಪಿ ಕೃಷ್ಣಮೂರ್ತಿ ಇದ್ದರು.