ಧರಣಿಗೆ ಮುಂದಾಗಿದ್ದ ನಾಲ್ವರು ಉದ್ಯೋಗಕಾಂಕ್ಷಿಗಳ ಬಂಧನ

KannadaprabhaNewsNetwork |  
Published : Apr 15, 2026, 02:15 AM IST
ಹೋರಾಟಗಾರರನ್ನು ಬಂಧಿಸಿರುವುದು. | Kannada Prabha

ಸಾರಾಂಶ

ಹುದ್ದೆ ಭರ್ತಿಗಾಗಿ ಈ ಹಿಂದೇ ನಡೆದ ಎರಡು ಹೋರಾಟದ ಸಂದರ್ಭದಲ್ಲಿಯೂ ತಳ್ಳಾಟ-ನೂಕಾಟ ನಡೆದು ಪೊಲೀಸ್‌ ಕಮಿಷನರ್‌ ಶಶಿಕುಮಾರ ಅವರಿಗೂ ಏಟು ಬಿದ್ದಿತ್ತು. ಈ ನಡುವೆ ಕಳೆದ ವಾರ ಮತ್ತೆ ಧರಣಿ ನಡೆಸಲು ಮುಂದಾಗಿದ್ದರೂ ಪೊಲೀಸ್‌ ಕಮಿಷನರೇಟ್‌ ಅನುಮತಿ ನಿರಾಕರಿಸಿತ್ತು.

ಧಾರವಾಡ:

ಸರ್ಕಾರಿ ಇಲಾಖೆಗಳ ಖಾಲಿ ಹುದ್ದೆ ಭರ್ತಿ ಹಾಗೂ ಕೆಪಿಎಸ್‌ಸಿ ಪರೀಕ್ಷಾ ಅಕ್ರಮ ತನಿಖೆಗೆ ಆಗ್ರಹಿಸಿ ಕರ್ನಾಟಕ ವಿದ್ಯಾರ್ಥಿ ಸಂಘ ಕರೆ ನೀಡಿದ್ದ ಅಹೋರಾತ್ರಿ ಧರಣಿ ನಡೆಸುವ ಮೊದಲೇ, ಪೊಲೀಸರು ನಾಲ್ವರು ಮುಖಂಡರನ್ನು ಬಂಧಿಸಿದ್ದಾರೆ. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರ ನಡುವೆ ತೀವ್ರ ವಾಗ್ವಾದವೂ ನಡೆದಿದೆ. ಬಳಿಕ ಬಂಧಿತರನ್ನು ಬಿಡುಗಡೆ ಮಾಡಲಾಗಿದೆ.

ನಗರದ ಶಾರದಾ ಸ್ಕೂಲ್ ಪಕ್ಕದಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘ ಅಂಬೇಡ್ಕರ್‌ ಜಯಂತಿಯಂದು ಅಹೋರಾತ್ರಿ ಧರಣಿ ನಡೆಸುವ ಮೂಲಕ ಅಂಬೇಡ್ಕರ್‌ ಜಯಂತಿ ಆಚರಿಸಲು ನಿರ್ಧರಿಸಿತ್ತು. ಆದರೆ, ಪೊಲೀಸ್ ಕಮಿಷನ್‌ರೆಟ್‌ ಧರಣಿಗೆ ಅನುಮತಿ ನಿರಾಕರಿಸಿತ್ತು. ಆದರೂ ಸಹ ಮಂಗಳವಾರ ಸತ್ಯಾಗ್ರಹಕ್ಕೆ ಸಂಘ ಮುಂದಾಗಿತ್ತು. ಮುಂಜಾಗ್ರತ ಕ್ರಮವಾಗಿ ಪೊಲೀಸ್ ಕಮಿಷನರೇಟ್‌ ಜಯನಗರ, ಶ್ರೀನಗರ ಸರ್ಕಲ್, ಸಪ್ತಾಪುರ ಸೇರಿದಂತೆ ವಿವಿಧ ಆಯಕಟ್ಟಿನ ಪ್ರದೇಶಗಳಲ್ಲಿ ಧರಣಿ ನಡೆಸದಂತೆ ಕಟ್ಟೆಚ್ಚರ ವಹಿಸಿತ್ತು.

ಎಚ್ಚರಿಕೆಗೂ ಡೋಂಟ್‌ಕೇರ್‌:

ಧರಣಿ ನಡೆಸಲು ವಿದ್ಯಾರ್ಥಿ ಸಂಘದ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದಾಗ ಪೊಲೀಸರು, ಧರಣಿ ನಡೆಸಬಾರದು, ನಡೆಸಿದರೆ ಬಂಧಿಸುವುದಾಗಿ ಎಚ್ಚರಿಕೆ ನೀಡಿದರು. ಅವರ ಎಚ್ಚರಿಕೆಗೂ ಬಗ್ಗದ ಕಾರ್ಯಕರ್ತರು ಧರಣಿ ನಡೆಸಲು ಮುಂದಾದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ನಿಯಂತ್ರಣ ತಪ್ಪುವ ಮುನ್ಸೂಚನೆ ಅರಿತ ಪೊಲೀಸರು, ವಿದ್ಯಾರ್ಥಿ ಮುಖಂಡರಾದ ಯಲ್ಲಪ್ಪ ಹೆಗಡೆ, ಚಾಣಕ್ಯ, ನಾಗರಾಜ ಚಲವಾದಿ ಸೇರಿ ನಾಲ್ವರನ್ನು ಬಂಧಿಸಿದರು. ಇದರಿಂದ ಕೆರಳಿದ ಉಳಿದ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಆಗ ಪೊಲೀಸರು ಅವರನ್ನು ಸಮಾಧಾನಪಡಿಸಿ ಕಳುಹಿಸಿದರು.

ಹುದ್ದೆ ಭರ್ತಿಗಾಗಿ ಈ ಹಿಂದೇ ನಡೆದ ಎರಡು ಹೋರಾಟದ ಸಂದರ್ಭದಲ್ಲಿಯೂ ತಳ್ಳಾಟ-ನೂಕಾಟ ನಡೆದು ಪೊಲೀಸ್‌ ಕಮಿಷನರ್‌ ಶಶಿಕುಮಾರ ಅವರಿಗೂ ಏಟು ಬಿದ್ದಿತ್ತು. ಈ ನಡುವೆ ಕಳೆದ ವಾರ ಮತ್ತೆ ಧರಣಿ ನಡೆಸಲು ಮುಂದಾಗಿದ್ದರೂ ಪೊಲೀಸ್‌ ಕಮಿಷನರೇಟ್‌ ಅನುಮತಿ ನಿರಾಕರಿಸಿತ್ತು. ಆಗ ವಿದ್ಯಾರ್ಥಿಗಳ ಸಂಘ ಹೋರಾಟಕ್ಕೆ ಅನುಮತಿ ನೀಡುವಂತೆ ಹೈಕೋರ್ಟ್‌ ಮೆಟ್ಟಿಲಿರಿತ್ತು. ಆಗ ಹೈಕೋರ್ಟ್‌ ಧಾರವಾಡದಲ್ಲಿ ಅನುಮತಿ ಕೊಡದೇ ಹುಬ್ಬಳ್ಳಿ ನೆಹರು ಮೈದಾನದಲ್ಲಿ ಧರಣಿ ನಡೆಸಲು ಅನುಮತಿ ನೀಡಿತ್ತು. ಆದರೆ, ವಿದ್ಯಾರ್ಥಿ ಸಂಘವು ಜ್ಯುಬಲಿ ಸರ್ಕಲ್‌ನಲ್ಲಿ ಹೋರಾಟ ಮಾಡುವುದಿಲ್ಲ. ಬದಲಿಗೆ ಶಾರದಾ ಸ್ಕೂಲ್‌ ಬಳಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ, ಅದಕ್ಕೆ ಅನುಮತಿ ನೀಡಿ ಎಂದು ಕೇಳಿಕೊಂಡಿತ್ತು. ಇದೀಗ ಅದಕ್ಕೂ ಅನುಮತಿ ನೀಡದೆ ಮುಖಂಡರನ್ನು ಕಮಿಷನರೇಟ್‌ ಬಂಧಿಸುವ ಮೂಲಕ ಧರಣಿ ನಡೆಯದಂತೆ ನೋಡಿಕೊಂಡಿದೆ.

ಆಕ್ರೋಶ:

ಪ್ರತಿಭಟನೆಗೂ ಮುನ್ನವೇ ವಿದ್ಯಾರ್ಥಿ ಮುಖಂಡರನ್ನು ಬಂಧಿಸಿರುವುದು ತೀವ್ರ ಆಕ್ರೋಶ ವ್ಯಕ್ತವಾಗಿದೆ. ರೈತ ಮುಖಂಡ ಶಂಕರ ಅಂಬಲಿ ಮಾತನಾಡಿ, ವಿದ್ಯಾರ್ಥಿ ಮುಖಂಡರನ್ನು ಬಂಧಿಸಿರುವುದು ಖಂಡನೀಯ. ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಉದ್ಯೋಗಾಕಾಂಕ್ಷಿಗಳನ್ನು ಕರೆದು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.ನಾನು ಉದ್ಯೋಗಾಕಾಂಕ್ಷಿಗಳ ಪರವಾಗಿದ್ದೇನೆ. ಸರ್ಕಾರವನ್ನೂ ಸಂಪರ್ಕಿಸಿದ್ದೇವೆ. ಅಧಿವೇಶನದಲ್ಲಿ ಚರ್ಚೆ ಆಗಿದೆ. ಒಳಮೀಸಲಾತಿ ವಿಚಾರ ಎಲ್ಲರಿಗೂ ಗೊತ್ತಿರುವ ಸಂಗತಿ. ನೇಮಕಾತಿಗೆ ಕೆಲವು ತಾಂತ್ರಿಕ ಸಮಸ್ಯೆಗಳಿದ್ದು ಹೀಗಾಗಿ ಸ್ವಲ್ಪ ತಾಳ್ಮೆ ವಹಿಸಬೇಕು.

ಸಂತೋಷ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ

ಪ್ರತಿಭಟನೆ, ರ‍್ಯಾಲಿ ನಡೆಸಲು ಯಾವುದೇ ವಿದ್ಯಾರ್ಥಿ ಸಂಘಟನೆಗೆ ಅನುಮತಿ ನೀಡಿಲ್ಲ. ಧರಣಿ ನಡೆಸದಂತೆ ನೋಟಿಸ್ ಕೂಡ ನೀಡಿದೆ. ಹೀಗಾಗಿ ಕಾನೂನು ಬಾಹಿರ ಧರಣಿಗೆ ಮುಂದಾದ ವಿದ್ಯಾರ್ಥಿ ಸಂಘಟನೆ ಮುಖಂಡರನ್ನು ಬಂಧಿಸಲಾಗಿದೆ.

ಎನ್. ಶಶಿಕುಮಾರ್, ಹು-ಧಾ ಪೊಲೀಸ್ ಆಯುಕ್ತರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂವಿಧಾನ ರಚನೆಯಾದ ದಿನ ನಿಜವಾದ ಸ್ವಾತಂತ್ರ‍್ಯ ದೊರಕಿದ ದಿನ: ಶಾಸಕ ಕೋಳಿವಾಡ
ಅಂಬೇಡ್ಕರ್ ಸಮಾನತೆಯ ಸಂದೇಶ ಪಾಲಿಸಿ: ಲಕ್ಷ್ಮೀಪ್ರಿಯಾ