ಕುಮಟಾ: ರಾಷ್ಟ್ರೀಯ ಹೆದ್ದಾರಿ ೬೬ರ ಚತುಷ್ಪಥ ಕಾಮಗಾರಿಯನ್ನು ಮೂಲ ಯೋಜನೆಯಂತೆ ಮುಂಬರುವ ಮಳೆಗಾಲದೊಳಗೆ ಪೂರ್ಣಗೊಳಿಸುವುದು ಮತ್ತು ಹೊನ್ನಾವರ- ತಾಳಗುಪ್ಪ, ಅಂಕೋಲಾ- ಶಿರಸಿ ರಸ್ತೆಯ ನಿರ್ವಹಣಾ ಕಾಮಗಾರಿಗಳನ್ನು ಮಳೆ ಕಡಿಮೆಯಾಗುತ್ತಿರುವ ಹಿನ್ನೆಲೆ ನ. ೭ರ ಬಳಿಕ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಇಲ್ಲಿನ ತಾಲೂಕು ಸೌಧದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ವಿವಿಧ ಉಪವಿಭಾಗಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ೨೦೧೪ರಿಂದ ಈವರೆಗೆ ರಾ.ಹೆ. ೬೬ರ ಚತುಷ್ಪಥ ಕಾಮಗಾರಿಯಲ್ಲಿ ೭.೮೪ ಕಿಮೀ ಕಾಮಗಾರಿ ಇನ್ನೂ ಬಾಕಿ ಇದೆ. ಸಾಕಷ್ಟು ವಿಳಂಬ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ. ಬಾಕಿ ಇರುವ ಕಾಮಗಾರಿಯಲ್ಲಿ ಪರಿಹಾರ, ವ್ಯಾಜ್ಯ, ದಾಖಲೆ ಕೊರತೆ, ತಕರಾರು ಇನ್ನಿತರ ಹಲವು ಸಮಸ್ಯೆಗಳು ಇದೆ. ಕುಮಟಾ ಪಟ್ಟಣ ವ್ಯಾಪ್ತಿಯಲ್ಲೂ ೧.೯೧ ಕಿಮೀ ಕಾಮಗಾರಿಗೆ ಹಲವು ಅಡ್ಡಿಗಳಿವೆ. ಆದರೂ ಅದೆಲ್ಲವನ್ನೂ ಬಗೆಹರಿಸಿ ಮಳೆಗಾಲದೊಳಗೆ ಕಾಮಗಾರಿ ಮುಗಿಸುವ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಗಿದೆ. ಒಟ್ಟಾರೆ ರಾ.ಹೆ. ೬೬ರ ಚತುಷ್ಪಥ ಕಾಮಗಾರಿಯ ಮೂಲ ಯೋಜನೆಯಂತೆ ಎಲ್ಲ ಕಾಮಗಾರಿಯನ್ನೂ ಪೂರ್ಣಗೊಳಿಸಿ, ಹೆಚ್ಚುವರಿಯಾಗಿ ಅಲ್ಲಲ್ಲಿ ಮೇಲ್ಸೇತುವೆ, ಸರ್ವೀಸ್ ರಸ್ತೆ, ಸೇತುವೆಯಂತಹ ಜನರ ಬೇಡಿಕೆಯನ್ನು ಪರಿಗಣಿಸಿ ಹೊಸ ಪ್ರಸ್ತಾವನೆಗಳನ್ನು ಕಳುಹಿಸಲಾಗುವುದು. ಆದರೆ ಮೊದಲು ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಜನರು ಸಹಕರಿಸಬೇಕು. ಕೇಂದ್ರ ಸರ್ಕಾರದ ಸಹಕಾರದಲ್ಲಿ ಸಾಧ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಿಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಹಾಗೆಯೇ ಅತಿವೃಷ್ಟಿಯಿಂದ ಸಾಕಷ್ಟು ಹಾನಿಗೊಳಗಾದ ಅಂಕೋಲಾ- ಹುಬ್ಬಳ್ಳಿ ಮತ್ತು ಹೊನ್ನಾವರ- ತಾಳಗುಪ್ಪ ರಸ್ತೆಯ ಹೊಂಡ, ಧೂಳು ನಿರ್ವಹಣೆಗೆ, ದುರಸ್ತಿ ಕಾರ್ಯವನ್ನು ನ. ೭ರಿಂದ ನಡೆಸಲಾಗುವುದು. ಕೆಲವೆಡೆ ಅಗತ್ಯವಿರುವಲ್ಲಿ ಮರುಡಾಂಬರೀಕರಣ ಕಾರ್ಯವನ್ನೂ ೩- ೪ ತಿಂಗಳೊಳಗೆ ಮಾಡಿ ಮುಗಿಸಲಾಗುವುದು ಎಂದರು.
ಕುಮಟಾ- ಶಿರಸಿ ರಸ್ತೆಯಲ್ಲಿ ಭೂಪರಿಹಾರ ಕುರಿತ ೮೭ ಪ್ರಕರಣಗಳಲ್ಲಿ ೭- ೮ ಪ್ರಕರಣಗಳು ಮಾತ್ರ ಬಾಕಿ ಇದೆ. ಪರಿಹಾರ ಕೊಡಲು ನಾವು ಸಿದ್ಧರಿದ್ದೇವೆ. ಆದರೆ ಫಲಾನುಭವಿಗೆ ತಾಂತ್ರಿಕ ಸಮಸ್ಯೆಯಿಂದ ಅಡ್ಡಿಯಾಗಿದೆ. ಈ ರಸ್ತೆಯಲ್ಲಿ ಪ್ರಮುಖವಾದ ಸೇತುವೆಗಳ ನಿರ್ಮಾಣವಾಗಬೇಕಿದೆ. ರಸ್ತೆ ಸಂಪೂರ್ಣ ಬಂದ್ ಮಾಡಿ ಕಾಮಗಾರಿ ನಡೆಸುವುದಕ್ಕೆ ಅನುಮತಿ ಸಿಕ್ಕಿದೆ. ಆದರೆ ಉಳಿದೆಲ್ಲ ಕಾಮಗಾರಿಗಳು ಮುಗಿದು, ಕೇವಲ ರಸ್ತೆ ಬಂದ್ ಮಾಡಲೇಬೇಕಾದ ಅನಿವಾರ್ಯ ಕಾಮಗಾರಿ ಮಾತ್ರ ನಡೆಸುವ ಸಮಯದಲ್ಲಿ ಮಾತ್ರ ರಸ್ತೆ ಬಂದ ಮಾಡಬೇಕೆಂದು ಸೂಚಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ದಿನಾಂಕ ಪ್ರಕಟಿಸಲಿದ್ದಾರೆ ಎಂದರು.ಕುಮಟಾದಲ್ಲಿ ಬೈಪಾಸ್ ಕುರಿತು ಸ್ಪಷ್ಟಪಡಿಸಿದ ಸಂಸದ ಕಾಗೇರಿ, ಚತುಷ್ಪಥದ ಮೂಲ ಯೋಜನೆಯಲ್ಲಿ ಬೈಪಾಸ್ ವಿಚಾರ ಇರಲಿಲ್ಲ. ನಂತರ ಜನರ ಬೇಕು- ಬೇಡಗಳಿಂದಾಗಿ ವಿವಾದ ಸೃಷ್ಟಿಯಾಗಿದೆ. ಹೆದ್ದಾರಿ ಪ್ರಾಧಿಕಾರವೂ ಪ್ರಸ್ತಾವನೆಗೆ ಮಂಜೂರಿ ನೀಡಿದ್ದರೂ ಹಲವರ ತಕರಾರಿನಿಂದ ನಿಂತಿದೆ. ಆದರೆ ಬೈಪಾಸ್ ಅಗತ್ಯತೆ ಖಂಡಿತವಾಗಿ ಮುಂದಿನ ದಿನಗಳಲ್ಲಿ ಇರಲಿದೆ. ಈ ಬಗ್ಗೆ ಬೇಕು- ಬೇಡ ಚರ್ಚಿಸಿಯೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.ಏನೇ ಇದ್ದರೂ ಇಲ್ಲಿನ ಬೈಪಾಸ್‌ಗೂ ಚತುಷ್ಪಥ ಕಾಮಗಾರಿ ವಿಳಂಬಕ್ಕೂ ಸಂಬಂಧವಿಲ್ಲ. ಈಗಿರುವ ಮಾರ್ಗದಲ್ಲಿ ಚತುಷ್ಪಥ ಕಾಮಗಾರಿ ನಡೆದು ಮುಂಬರುವ ಮಳೆಗಾಲದೊಳಗೆ ಜನರ ಸುರಕ್ಷತೆಗಾಗಿ ಕಾಮಗಾರಿ ಪೂರ್ಣಗೊಳಿಸುವುದು ನಮ್ಮ ಆದ್ಯತೆಯಾಗಿದೆ. ಜನ ಸಹಕರಿಸಬೇಕು ಎಂದರು.
ಶಾಸಕ ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಇತರರು ಇದ್ದರು.