ಬಳ್ಳಾರಿ ಜಿಲ್ಲೆಯಲ್ಲಿ ನಾಲ್ವರಿಗೆ ಕೋವಿಡ್‌ ಸೋಂಕು

KannadaprabhaNewsNetwork | Published : Dec 23, 2023 1:45 AM

ಸಾರಾಂಶ

ಕೊರೋನಾ ಹೊಸ ರೂಪಾಂತರಿ ತಳಿಯ ಭೀತಿ ನಡುವೆ ಕಳೆದ ಒಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ನಾಲ್ಕು ಕೋವಿಡ್ ಪ್ರಕರಣಗಳು ಕಂಡು ಬಂದಿವೆ. ಕೊರೋನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಕೋವಿಡ್ ನಿಗ್ರಹಕ್ಕೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಆಯಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ ಬೆನ್ನಲ್ಲೇ ಸೋಂಕು ನಿಯಂತ್ರಣ ಕ್ರಮಗಳು ಚುರುಕುಗೊಂಡಿವೆ.

ಬಳ್ಳಾರಿ: ಕೊರೋನಾ ಹೊಸ ರೂಪಾಂತರಿ ತಳಿಯ ಭೀತಿ ನಡುವೆ ಕಳೆದ ಒಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ನಾಲ್ಕು ಕೋವಿಡ್ ಪ್ರಕರಣಗಳು ಕಂಡು ಬಂದಿವೆ.

ಈ ಪೈಕಿ ಎರಡು ಪ್ರಕರಣಗಳು ಜಿಂದಾಲ್ ಕೈಗಾರಿಕೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕಂಡು ಬಂದಿದೆ. ಇನ್ನುಳಿದ ಎರಡು ಪ್ರಕರಣಗಳು ನಗರದ ನಿವಾಸಿಗಳಿಗೆ ದೃಢಪಟ್ಟಿದೆ. ಕೋವಿಡ್ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೊರೋನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಕೋವಿಡ್ ನಿಗ್ರಹಕ್ಕೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಆಯಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ ಬೆನ್ನಲ್ಲೇ ಸೋಂಕು ನಿಯಂತ್ರಣ ಕ್ರಮಗಳು ಚುರುಕುಗೊಂಡಿವೆ.

ನಗರದ ವಿಮ್ಸ್‌ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಯಲ್ಲಿ ಐಸಿಯು, ಆಕ್ಸಿಜನ್ ಬೆಡ್‌ಗಳನ್ನು ಕಾಯ್ದಿರಿಸಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್‌ಗಳನ್ನು ಆರಂಭಿಸಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿ ಸಹ ಸೋಂಕಿಗೆ ಚಿಕಿತ್ಸೆ ನೀಡಲು ಬೇಕಾದ ಸಿದ್ಧತೆಗಳನ್ನು ಆರೋಗ್ಯ ಇಲಾಖೆ ನಡೆಸಿದೆ.

ಪ್ರತಿದಿನ 120ರಿಂದ 150 ಜನರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಕೋವಿಡ್ ಲಕ್ಷಣಗಳು ಕಂಡು ಬರುತ್ತಿದ್ದಂತೆಯೇ ಹೋಂ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ.

ಆತಂಕ ಬೇಡ: ಕೊರೋನಾ ಸೋಂಕು ತಡೆಗಟ್ಟಲು ಜಿಲ್ಲಾಡಳಿತ ಪೂರಕ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಅವರು ಹೇಳಿದ್ದಾರೆ. ಈ ಕುರಿತು ''''ಕನ್ನಡಪ್ರಭ'''' ಜತೆ ಮಾತನಾಡಿದ ಅವರು, ಕೊರೋನಾ ಹೊಸ ರೂಪಾಂತರ ತಳಿ ಜೆಎನ್.1 ಜಿಲ್ಲೆಯಲ್ಲಿ ಕಂಡು ಬಂದಿಲ್ಲ. ಸಾಮಾನ್ಯ ಕೋವಿಡ್ ಪ್ರಕರಣಗಳು ಕಂಡು ಬಂದಿದ್ದು, ಇದಕ್ಕೆ ಬೇಕಾದ ಚಿಕಿತ್ಸಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ತಿಳಿಸಿದರು.

ಕೋವಿಡ್ ಹೊಸ ರೂಪಾಂತರ ತಳಿ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಜನರ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದ್ದು, ಸೋಂಕು ಉಲ್ಬಣಗೊಂಡಾಗ ಅನುಸರಿಸಬೇಕಾದ ಚಿಕಿತ್ಸಾ ವಿಧಾನಗಳ ಕುರಿತು ಸಿಬ್ಬಂದಿಗೆ ತರಬೇತಿಯನ್ನು ಸಹ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕೈಗಾರಿಕೆ ಪ್ರದೇಶ ಡೇಂಜರ್‌: ಈ ಹಿಂದೆ ಜಿಲ್ಲೆಯಲ್ಲಿ ಜಿಂದಾಲ್ ಮತ್ತಿತರ ಕೈಗಾರಿಕಾ ಪ್ರದೇಶಗಳಿಂದಲೇ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದವು. ಈಗಾಗಲೇ ಎರಡು ಪ್ರಕರಣಗಳು ಜಿಂದಾಲ್ ಕೈಗಾರಿಕೆ ಪ್ರದೇಶದಿಂದಲೇ ಕಂಡು ಬಂದಿರುವುದು ಆತಂಕ ಮೂಡಿಸಿದೆ. ಜಿಂದಾಲ್‌ಗೆ ಹೊರ ರಾಜ್ಯಗಳ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ರೂಪಾಂತರ ತಳಿ ದಾಳಿ ಮಾಡುವ ಭೀತಿಯೂ ಎದುರಾಗಿದೆ. ಜಿಲ್ಲಾಡಳಿತ ಕೈಗಾರಿಕೆ ಪ್ರದೇಶಗಳ ಕಡೆ ಹೆಚ್ಚು ನಿಗಾ ವಹಿಸಬೇಕಾದ ಅಗತ್ಯವಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ರೂಪಾಂತರ ಜೆಎನ್.1 ಪ್ರಕರಣ ಕಂಡು ಬಂದಿಲ್ಲ. ಕೊರೋನಾ ಸೋಂಕು ಇರುವವರಿಗೆ ಹೋಂ ಐಸಿಲೋಷನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ಇಲಾಖೆಯಿಂದ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಮೇಶ್ ಬಾಬು ಹೇಳಿದರು.

Share this article