ಕನ್ನಡಪ್ರಭ ವಾರ್ತೆ ಜಮಖಂಡಿ
ಮಹಾರಾಷ್ಟ್ರ ಯವತ್ಮಾಳ ಜಿಲ್ಲೆ, ಬುಸಾ ತಾಲೂಕಿನ ಗುಪವಾಡಿ ಗ್ರಾಮದ ನಿವಾಸಿಗಳಾದ ಮನೀಷ್ ಪುಂಡಲೀಕ ಪಾಂಡೆ (23), ಹಲಕಿ ಪುಂಡಲೀಕ ಪಾಂಡೆ (2), ಲಕ್ಷ್ಮೀ ಸಮಾದಾನ ಚಿರಮಡಿ(27), ರೇಖಾ ಪಾಂಡುರಂಗ ಭೂಕೆ (28) ಮೃತರು. ಕೆಲವು ಗಾಯಾಳುಗಳಿಗೆ ಜಮಖಂಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರ ಸ್ಥಿತಿ ಗಂಭೀರವಾಗಿದೆ.
ಏನಾಯ್ತು?ಕಳೆದೆರಡು ತಿಂಗಳಿಂದ ರಾಜ್ಯಕ್ಕೆ ಕಬ್ಬು ಕಟಾವು ಮಾಡಲು ಒಂದೇ ಗ್ರಾಮದ 15ಕ್ಕೂ ಅಧಿಕ ಕೂಲಿಕಾರ್ಮಿಕರು ಕುಟುಂಬ ಸಮೇತ ಬಂದಿದ್ದರು. ಲೋಕಾಪುರ, ಯರಗಟ್ಟಿ ಸಮೀಪದ ಜಮೀನುಗಳಲ್ಲಿ ಕಬ್ಬು ಕಟಾವು ಕೆಲಸ ಮುಗಿಸಿಕೊಂಡು ಎರಡು ಟ್ರೇಲರ್ ಜೋಡಿಸಿದ್ದ ಟ್ರ್ಯಾಕ್ಟರ್ ನಲ್ಲಿ ಜಮಖಂಡಿ ಮಾರ್ಗವಾಗಿ ಶುಕ್ರವಾರ ರಾತ್ರಿ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಮುಧೋಳ ಕಡೆಯಿಂದ ಹೊರಟಿದ್ದಾಗ ಜಮಖಂಡಿ ಕಟ್ಟಿಕೆರೆಯ ಸಮೀಪ ತಡರಾತ್ರಿ 1.45 ರಿಂದ 2 ಗಂಟೆಯ ಸುಮಾರಿಗೆ ಕತ್ತಲಲ್ಲಿ ರೋಡ್ ಬ್ರೆಕರ್ ಜಂಪ್ ಆದ ಪರಿಣಾಮ ಟ್ರೇಲರ್ ಕೊಂಡಿ ಮುರಿದು ಎರಡೂ ಟ್ರೇಲರ್‌ಗಳು ಕಂದಕ್ಕೆ ಉರುಳಿ ಬಿದ್ದಿವೆ. ಅಗತ್ಯ ವಸ್ತುಗಳೊಂದಿಗೆ ಟ್ರೇಲರ್‌ನಲ್ಲಿ ನಿದ್ದೆ ಮಂಪರಿನಲ್ಲಿದ್ದ ಕೃಷಿ ಕೂಲಿಕಾರ್ಮಿಕರು ಕಣ್ಣು ಬಿಡುವಷ್ಟರಲ್ಲಿ ಅವಘಡ ನಡೆದು ಹೋಗಿದೆ.
ಘಟನಾ ಸ್ಥಳಕ್ಕೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಡಿವೈಎಸ್‌ಪಿ ಸೈಯದ್ ರೋಶನ್ ಜಮೀರ್, ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐ ಅನೀಲ ಕುಂಬಾರ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಮಖಂಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.