ನವೀಕರಣಗೊಂಡ ರಾಜ್ಯದ 4 ರೈಲು ನಿಲ್ದಾಣಗಳು ಲೋಕಾರ್ಪಣೆಗೆ ಸಿದ್ಧ

KannadaprabhaNewsNetwork |  
Published : Jul 12, 2026, 03:00 AM IST
ನವೀಕರಣದೊಂದಿಗೆ ಕಂಗೊಳಿಸುತ್ತಿರುವ ಬದಾಮಿ ರೈಲು ನಿಲ್ದಾಣ. | Kannada Prabha

ಸಾರಾಂಶ

ಅಮೃತ ಭಾರತ ಯೋಜನೆಯಡಿ ನವೀಕರಣಗೊಂಡಿರುವ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ರಾಜ್ಯದ ಕೊಪ್ಪಳ, ಬಾಗಲಕೋಟೆ ಜಿಲ್ಲೆಯ ಬಾದಾಮಿ, ಧಾರವಾಡ ಜಿಲ್ಲೆಯ ಅಳ್ನಾವರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ರೈಲ್ವೆ ನಿಲ್ದಾಣಗಳು ಜು. 17ರಂದು ಲೋಕಾರ್ಪಣೆಯಾಗಲಿವೆ.

ಮಹೇಶ ಅರಳಿ

ಹುಬ್ಬಳ್ಳಿ:

ಅಮೃತ ಭಾರತ ಯೋಜನೆಯಡಿ ನವೀಕರಣಗೊಂಡಿರುವ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ರಾಜ್ಯದ ಕೊಪ್ಪಳ, ಬಾಗಲಕೋಟೆ ಜಿಲ್ಲೆಯ ಬಾದಾಮಿ, ಧಾರವಾಡ ಜಿಲ್ಲೆಯ ಅಳ್ನಾವರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ರೈಲ್ವೆ ನಿಲ್ದಾಣಗಳು ಜು. 17ರಂದು ಲೋಕಾರ್ಪಣೆಯಾಗಲಿವೆ.

ಕೊಪ್ಪಳದ ರೈಲ್ವೆ ನಿಲ್ದಾಣವನ್ನು ₹21.1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. 580 ಮೀಟರ್ ಉದ್ದದ ಪ್ಲಾಟಫಾರ್ಮ್ ನಿರ್ಮಿಸಲಾಗಿದೆ. ಮುಖ್ಯವಾಗಿ ಎಸ್ಕಲೇಟರ್, ಲಿಫ್ಟ್ ಸೌಕರ್ಯ ಕಲ್ಪಿಸಲಾಗಿದ್ದು, ವಯಸ್ಸಾದವರು, ಅಂಗವಿಕಲರಿಗೆ ಅನುಕೂಲವಾಗಲಿದೆ. ಒಂದು ಪ್ಲಾಟಫಾರ್ಮನಿಂದ ಇನ್ನೊಂದು ಬದಿಗೆ ಹೋಗಲು ಫುಟ್ ಒವರ್ ಬ್ರಿಡ್ಜ್ ಅನ್ನು ನಿರ್ಮಿಸಲಾಗಿದೆ. ಅಲ್ಲದೆ ಪ್ರಯಾಣಿಕರ ವಿಶ್ರಾಂತಿ ಗೃಹಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಿ ಸುಸಜ್ಜಿತಗೊಳಿಸಲಾಗಿದೆ.

ಬಾದಾಮಿ ನಿಲ್ದಾಣ:

ಬಾಗಲಕೋಟೆ ಜಿಲ್ಲೆಯ ಬಾದಾಮಿ ರೈಲ್ವೆ ನಿಲ್ದಾಣವನ್ನು ₹15.1 ಕೋಟಿ ವೆಚ್ಚದಲ್ಲಿ ಮರುನಿರ್ಮಿಸಲಾಗಿದೆ. ವಿಶಾಲವಾದ ಪ್ಲಾಟಫಾರ್ಮ್ ನಿರ್ಮಿಸಲಾಗಿದ್ದು, ಪ್ರವಾಸಿ ತಾಣವಾದ ಬಾದಾಮಿ ಪಟ್ಟಣವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ. ಇದರ ಪ್ರವೇಶ ದ್ವಾರವನ್ನು ದೇಗುಲ ಮಾದರಿಯಲ್ಲಿ ಕಟ್ಟಲಾಗಿದ್ದು, ಪ್ರಯಾಣಿಕರನ್ನು ಆಕರ್ಷಿಸುತ್ತಿದೆ. ಮಳೆನೀರು ಕೊಯ್ಲು ವ್ಯವಸ್ಥೆ ಮಾಡಲಾಗಿದೆ. 2 ಲಿಫ್ಟ್ ಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಎಸ್ಕಲೇಟರ್ ಸೌಲಭ್ಯ ಕಲ್ಪಿಸಲಾಗುವುದು ಎಂದು ನೈಋತ್ಯ ರೈಲ್ವೆಯ ಬಾದಾಮಿ ಸೆಕ್ಷನ್ ಎಂಜಿನಿಯರ್ ದಿನೇಶಮಣಿ ತ್ರಿಪಾಠಿ ತಿಳಿಸಿದರು.

ಅಳ್ನಾವರ ರೈಲ್ವೆ ನಿಲ್ದಾಣ:

ಧಾರವಾಡ ಜಿಲ್ಲೆಯ ಅಳ್ನಾವರದ ರೈಲ್ವೆ ನಿಲ್ದಾಣವನ್ನು ₹17.20 ಕೋಟಿ ವೆಚ್ಚದಲ್ಲಿ ಆಧುನಿಕರಣಗೊಳಿಸಲಾಗಿದೆ. 4500 ಚದರ ಮೀ. ಪ್ರದೇಶದಲ್ಲಿ ಸುಸಜ್ಜಿತ ಪ್ಲಾಟಫಾರ್ಮ್ ಹೊಂದಿದೆ. ಪಾದಚಾರಿಗಳು ರೈಲ್ವೆ ಹಳಿ ದಾಟಲು ಮೇಲ್ಸೇತುವೆ ನಿರ್ಮಿಸಲಾಗಿದೆ. 2 ಲಿಫ್ಟ್ ಸುಸಜ್ಜಿತ ಟಿಕೆಟ್ ಕೌಂಟರ್, ವಿಶ್ರಾಂತಿಗೃಹಗಳು ಪ್ರಯಾಣಿಕರನ್ನು ಆಕರ್ಷಿಸುತ್ತಿವೆ.

ಬಂಟ್ವಾಳ ನಿಲ್ದಾಣ:

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ರೈಲ್ವೆ ನಿಲ್ದಾಣವನ್ನು ₹26.18 ಕೋಟಿ ವೆಚ್ಚದಲ್ಲಿ ಮರುನಿರ್ಮಾಣಗೊಂಡಿದ್ದು, ನಿರೀಕ್ಷಣಾ ಮಂದಿರ, ಟಿಕೆಟ್ ಕೌಂಟರಗಳನ್ನು ನವೀಕರಿಸಲಾಗಿದೆ. ಪ್ರಯಾಣಿಕರು ಓಡಾಡಲು ಪ್ಲಾಟಫಾರ್ಮ್ ಅನ್ನು ಮತ್ತಷ್ಟು ವಿಸ್ತರಣೆ ಮಾಡಲಾಗಿದೆ.ಜು. 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಅಮೃತ ಭಾರತ ಯೋಜನೆಯಡಿ ಮರು ನಿರ್ಮಾಣಗೊಂಡ ದೇಶದ 75 ರೈಲ್ವೆ ನಿಲ್ದಾಣಗಳನ್ನು ಲೋಕಾರ್ಪಣೆ ಮಾಡುವರು. ಅದರಲ್ಲಿ ನೈಋತ್ಯ ರೈಲ್ವೆ ವಲಯದಲ್ಲಿ ಅಭಿವೃದ್ಧಿಗೊಂಡ ರಾಜ್ಯದ 4 ರೈಲ್ವೆ ನಿಲ್ದಾಣಗಳೂ ಸೇರಿವೆ ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕ ವಿಭಾಗದ ನಿರೀಕ್ಷಕ ಪವನ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕ್ ಅದಾಲತ್; ಅತ್ಯಂತ ವೇಗದ ಶಾಶ್ವತ ಪರಿಹಾರ: ನ್ಯಾಯಾಧೀಶ ಸಿದ್ದಲಿಂಗ ಪ್ರಭು
ಜನರಿಗೆ ಕಲಾಭವನ ಮುಕ್ತ ಮಾಡಲು ಹೋರಾಟ ಸಮಿತಿ