ಜನರ ಕಲ್ಯಾಣಕ್ಕೆ ಜೀವನವನ್ನೇ ಮುಡುಪಿಟ್ಟ ನಾಲ್ವಡಿ: ತಗ್ಗಹಳ್ಳಿ ವೆಂಕಟೇಶ್

KannadaprabhaNewsNetwork | Published : Aug 4, 2024 1:21 AM

ಸಾರಾಂಶ

ದೇವದಾಸಿ ಪದ್ಧತಿ ನಿಷೇಧ, ಬಸವಿ ಪದ್ಧತಿ ರದ್ಧತಿ, ಗೆಜ್ಜೆಪೂಜೆ ಪದ್ಧತಿ ಸಂಪೂರ್ಣ ನಿರ್ಮೂಲನೆ, ವೇಶ್ಯಾವೃತ್ತಿ ತಡೆಗಟ್ಟುವ ಕಾಯಿದೆ ಜಾರಿ, ವಿಧವೆಯರಿಗೆ ಮರು ವಿವಾಹ ಕಾಯಿದೆ, ಮಹಿಳೆಯರಿಗೆ ಕಡ್ಡಾಯ ಶಿಕ್ಷಣ, ಮಹಿಳೆಯರಿಗೆ ಮತದಾನದ ಹಕ್ಕು ಹೀಗೆ ಹತ್ತಾರು ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ್ದಾರೆ. ಹೀಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಾತಃಸ್ಮರಣೀಯರು.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಲ್ವಡಿ ಕೃಷ್ಣರಾಜ ಒಡೆಯರ್ ಯುದ್ಧ ಮಾಡಲಿಲ್ಲ. ಸಾಮ್ರಾಜ್ಯ ವಿಸ್ತರಿಸಲಿಲ್ಲ. ಆದರೆ, ಮೈಸೂರು ಸಂಸ್ಥಾನದ ಕೀರ್ತಿ ದೇಶ-ವಿದೇಶಗಳಲ್ಲಿ ಹರಡುವಂತೆ ಮಾಡಿದರು. ಜನರ ಕಲ್ಯಾಣಕ್ಕೆ, ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ಜಿಪಂ ಮಾಜಿ ಅಧ್ಯಕ್ಷ, ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಸ್ಮರಿಸಿದರು.

ನಗರದ ಪೊಲೀಸ್ ಕಾಲೋನಿ ಸರ್ಕಾರಿ ಕಾಲೇಜಿನಲ್ಲಿ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್‌ ವತಿಯಿಂದ ನಡೆದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾಲ್ವಡಿಯವರು ಜನಪರ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಆಡಳಿತದಿಂದ ಜನಪರ ರಾಜ ಎನಿಸಿಕೊಂಡಿದ್ದರು ಎಂದರು.

ದೇವದಾಸಿ ಪದ್ಧತಿ ನಿಷೇಧ, ಬಸವಿ ಪದ್ಧತಿ ರದ್ಧತಿ, ಗೆಜ್ಜೆಪೂಜೆ ಪದ್ಧತಿ ಸಂಪೂರ್ಣ ನಿರ್ಮೂಲನೆ, ವೇಶ್ಯಾವೃತ್ತಿ ತಡೆಗಟ್ಟುವ ಕಾಯಿದೆ ಜಾರಿ, ವಿಧವೆಯರಿಗೆ ಮರು ವಿವಾಹ ಕಾಯಿದೆ, ಮಹಿಳೆಯರಿಗೆ ಕಡ್ಡಾಯ ಶಿಕ್ಷಣ, ಮಹಿಳೆಯರಿಗೆ ಮತದಾನದ ಹಕ್ಕು ಹೀಗೆ ಹತ್ತಾರು ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ್ದಾರೆ. ಹೀಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಾತಃಸ್ಮರಣೀಯರು ಎಂದರು.

ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್‌ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿ ಯುವಜನರಿಗೆ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಗ್ಗೆ ಮಾಹಿತಿ ನೀಡುವ, ಅವರ ಬಗ್ಗೆ ಸಮಗ್ರ ವಿವರ ನೀಡುವ ಕೆಲಸವನ್ನು ಮಾಡುತ್ತಿದೆ. ನಾಲ್ವಡಿ ಅವರಿಗೆ ಇಂದಿನ ಎಷ್ಟೋ ಯುವಜನರಿಗೆ ಸರಿಯಾಗಿ ಗೊತ್ತಿಲ್ಲ. ಹೀಗಾಗಿ ನಾಲ್ವಡಿ ಅವರನ್ನು ಪರಿಚಯಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.

ನಾಲ್ವಡಿ ಅವರಿಂದಾಗಿ ನಾನು ಅನ್ನ ತಿನ್ನುತ್ತಿದ್ದೇವೆ. ನೀರು ಕುಡಿಯುತ್ತಿದ್ದಾರೆ. ಆದರೆ, ಇಷ್ಟು ವರ್ಷಗಳ ಕಾಲ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತವರ ಕೆಲಸಗಳು ತ್ಯಾಗವನ್ನು ಮರೆ ಮಾಚಲಾಗಿತ್ತು. ಹೀಗಾಗಿ ಅವರ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ, ವಿದ್ಯಾರ್ಥಿ ಯುವಜನರನ್ನು ಜಾಗೃತಗೊಳಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ವಿವರಿಸಿದರು.

ಡಿಡಿಪಿಐ ಎಚ್.ಶಿವರಾಮೇಗೌಡ ಮಾತನಾಡಿ, ನೂರಾರು ಜನಪರ ಕಾರ್ಯಕ್ರಮಗಳನ್ನು ಜಾರಿಯ ಮೂಲಕ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಮ್ಮೆಲ್ಲರಿಗೂ ಜೀವನ ರೂಪಿಸಿಕೊಟ್ಟಿದ್ದಾರೆ. ಅನ್ನ, ಬೆಳಕು, ಉದ್ಯೋಗ, ಬದುಕು ಕೊಟ್ಟವರು ನಾಲ್ವಡಿಯವರು. ಕೈಗಾರಿಕೆಗಳ ಸ್ಥಾಪನೆ, ರೈಲು ಮಾರ್ಗಗಳ ನಿರ್ಮಾಣದ ಮೂಲಕ ಸಮಾಜದ ಎಲ್ಲ ಸ್ತರದ ಜನರಿಗೂ ಅನುಕೂಲ ಕಲ್ಪಿಸಿದ್ದಾರೆ. ಅವರ ಕಾರ್ಯಗಳು ಮತ್ತೆ ಪುನರುತ್ಥಾನಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಇತಿಹಾಸ ಸಹ ಪ್ರಾಧ್ಯಾಪಕ ಡಾ.ಲಿಂಗರಾಜು ಅವರು ನಾಲ್ವಡಿ ಅವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಗಾಯಕರಾದ ವೈರಮುಡಿ, ಹನಿಯಂಬಾಡಿ ಶೇಖರ್‌, ಕಾರಸವಾಡಿ ಸುರೇಶ್ ಅವರು ಜನಪದ ಗೀತೆ, ರಂಗಗೀತೆಗಳ ಗಾಯನದ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಇದೇ ವೇಳೆ ಟ್ರಸ್ಟಿನಿಂದ ವಿದ್ಯಾರ್ಥಿಗಳಿಗೆ ನಾಲ್ವಡಿ ಅವರ ಬಗ್ಗೆ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಿಸಲಾಯಿತು.

ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಿಕ್ಕಮಂಡ್ಯ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲಿಂಗೇಗೌಡ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶಬಾನ, ಸಿನಿಮಾ ನಿರ್ದೇಶಕ ಅಭಿಗೌಡ ಹನಕೆರೆ, ಚೀರನಹಳ್ಳಿ ಗ್ರಾ.ಪಂ.ಉಮೇಶ್, ಮಂಗಲ ಗ್ರಾ.ಪಂ. ಸದಸ್ಯ ಮಹದೇವಸ್ವಾಮಿ, ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್‌ ಕಾರ್ಯದರ್ಶಿ ಎಂ.ಸಿ.ಮಂಗಲ ಲಂಕೇಶ್, ಖಜಾಂಚಿ ಯರಹಳ್ಳಿ ನವೀನ್, ಪದಾಧಿಕಾರಿಗಳಾದ ಮಂಜು, ಟಿ.ಡಿ.ನಾಗರಾಜು, ಚೀರನಹಳ್ಳಿ ಉಮೇಶ್, ಲಿಂಗರಾಜು, ಸಿದ್ದರಾಜು, ಸುಬ್ರಮಣ್ಯ, ತಗ್ಗಹಳ್ಳಿ ಸಾಗರ್ ಇತರರು ಭಾಗವಹಿಸಿದ್ದರು.

Share this article