ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪ್ರಾಥಮಿಕ ಕೃಷಿಯಲ್ಲಿನ ನಷ್ಟ ತಡೆಗೆ ಸೆಕೆಂಡರಿ ಕೃಷಿಯೇ ಪರಿಹಾರ ಎಂಬ ಸಿದ್ದ ಸೂತ್ರದ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ ಗ್ರಾಮೀಣ ಭಾಗದಲ್ಲಿ ಕೃಷಿ ಆಧರಿತ ಉದ್ಯಮಶೀಲ ಪರಿಸರ ವ್ಯವಸ್ಥೆಯನ್ನು ಜಾಗೃತಗೊಳಿಸಿ ರೈತರ ಮಕ್ಕಳಿಗೆ ಕಾರ್ಪೋರೆಟ್ ಉದ್ಯೋಗ ಸೃಜಿಸುವುದು ಎಫ್‌ಪಿಒ ಗುರಿಯಾಗಬೇಕು ಎಂದು ಜಲಾನಯನ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಮಹಮ್ಮದ ಪರವೇಜ್ ಬಂಥನಾಳ ಹೇಳಿದರು.ಪಟ್ಟಣದ ತಹಸೀಲ್ದಾರ ಕಚೇರಿ ಬಳಿಯ ಆದಿತ್ಯ ಫ್ಲಾಜಾ ಸಭಾಭವನದಲ್ಲಿ ಅಮೃತ ರೈತ ಉತ್ಪಾದಕ ಸಂಸ್ಥೆಗಳ ಯೋಜನೆಯಡಿ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದಿಂದ ಅನುಷ್ಠಾನಗೊಂಡ ಮುದ್ದೇಬಿಹಾಳದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಹಾಗೂ ಬಸರಕೋಡ ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉದ್ಯಮಶೀಲ ಕೃಷಿ ಅಭಿವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿದರು. ಕೃಷಿ ಇಲಾಖೆ ಉಪ ನಿರ್ದೇಶಕ ಶರಣಗೌಡ ಮಾತನಾಡಿ, ರೈತರನ್ನು ಸುಸ್ಥಿರ ದಾರಿಯಲ್ಲಿ ಮುನ್ನಡೆಸುವ ವಿಚಾರದಲ್ಲಿ ತರ್ಕಬದ್ಧ ಆಲೋಚನೆ ಹಾಗೂ ಶಿಸ್ತುಬದ್ದ ಯೋಜನೆಗಳನ್ನು ಮುಂದಿಟ್ಟುಕೊಂಡು ಸದಸ್ಯ ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ದಾಸೋಹಿ ಕಂಪನಿ ಜಾರಿಗೊಳಿಸುತ್ತಿರುವ ಕಾರ್ಯಕ್ರಮಗಳು ರಾಜ್ಯದೆಲ್ಲಡೆ ಮಾದರಿಯಾಗಲಿವೆ. ಬರಲಿರುವ ದಿನಗಳಲ್ಲಿ ಇಲಾಖೆಯೂ ಸಹ ಕಂಪನಿಯ ಅಭಿವೃದ್ಧಿಯೊಂದಿಗೆ ಹೆಜ್ಜೆ ಹಾಕಲಿದೆ ಎಂದರು.ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ಸಂಸ್ಥಾಪಕ ಅರವಿಂದ ಕೊಪ್ಪ ಮಾತನಾಡಿ, ಸದೃಢ ಆಂತರಿಕ ವ್ಯವಸ್ಥೆ, ಪರಿಣಾಮಕಾರಿ ಆಡಳಿತ ಹಾಗೂ ಸಹಕಾರಿ ತತ್ವ-ಮೌಲ್ಯಗಳಾಧಾರಿತ ವೃತ್ತಿಪರ ನಿರ್ವಹಣೆಯ ಮೂಲಕ ಸಾಮೂಹಿಕ ಕೃಷಿ ಭೂಮಿಕೆಯಾಗಿ ರೈತ ಉತ್ಪಾದಕ ಕಂಪನಿ ನಿಲ್ಲಬೇಕು ಎಂಬ ಉದ್ದೇಶವನ್ನು ಸಾಕಾರಗೊಳಿಸುವಲ್ಲಿ ಸದಸ್ಯರ ಸಕ್ರಿಯ ಪ್ರೋತ್ಸಾಹ ಹಾಗೂ ಸರ್ಕಾರಿ ಯಂತ್ರದ ನಿರಂತರ ಬೆಂಬಲವೇ ನಮ್ಮ ಶಕ್ತಿ ಎಂದು ಹೇಳಿದರು.ವಿಜಯಪುರ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಆರ್.ಪಿ ಹಿರೇಮಠ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಭಾವಿಕಟ್ಟಿ, ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಉಪಾಧ್ಯಕ್ಷ ಆರ್.ಬಿ ಸಜ್ಜನ ಉಪಸ್ಥಿತರಿದ್ದರು. ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಕಾರ್ಯಾಧ್ಯಕ್ಷೆ ರಶ್ಮಿ ಕೊಪ್ಪ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ವಿಜಯಲಕ್ಷ್ಮಿ ಹೊಸಮನಿ ನಿರೂಪಿಸಿದರು, ಆರತಿ ರಾಯಚೂರಕರ ವಂದಿಸಿದರು. ನಂತರದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಮಹಮ್ಮದ ಪರವೇಜ್ ಬಂಥನಾಳ ಸದಸ್ಯ ರೈತರೊಂದಿಗೆ ಸಂವಾದ ನಡೆಸಿ ಎಫ್‌ಪಿಸಿ(ಒ) ಬಗೆಗಿನ ತಿಳುವಳಿಕೆ, ಯೋಜನೆಗಳಿಂದ ಆಗುತ್ತಿರುವ ಪ್ರಯೋಜನಗಳು, ಸರ್ಕಾರಿ ಯೋಜನೆಗಳ ಮಾಹಿತಿ, ಕೃಷಿ ಉದ್ಯಮಗಳಿರುವ ಅವಕಾಶಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.ಕೋಟ್‌ರೈತರು ತಮ್ಮ ಜಮೀನುಗಳಲ್ಲಿ ಬೆಳೆಯುವ ಪ್ರತಿಯೊಂದು ಪ್ರಾಥಮಿಕ ಕೃಷಿ ಉತ್ಪನ್ನಗಳನ್ನು ಸಂಸ್ಕರಣೆಯೊಂದಿಗೆ ಮೌಲ್ಯವರ್ಧನೆಗೊಳಿಸಿ ಆಕರ್ಷಕ ಪ್ಯಾಕ್‌ಗಳಲ್ಲಿ ಮಾರಾಟ ಮಾಡುವ ವ್ಯವಹಾರಿಕ ಕೌಶಲ್ಯಗಳನ್ನು ಪ್ರತಿಯೊಬ್ಬ ರೈತರು ಅಳವಡಿಸಿಕೊಂಡು ಉದ್ಯಮಶೀಲ ಕೃಷಿಯ ಪ್ರವರ್ತಕರಾಗಬೇಕು. ಪಿಎಂಎಫ್‌ಎಂಇ, ಪಿಎಂಇಜಿಪಿ, ಎಐಎಫ್ ಇತ್ಯಾದಿ ಯೋಜನೆಗಳ ಮೂಲಕ ಕೃಷಿ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಮಾರಾಟಕ್ಕೆ ಬೇಕಾದ ಸೌಕರ್ಯಗಳನ್ನು ಅಳವಡಿಸಿಕೊಳ್ಳಲು ಶೇ.50ರವರೆಗೆ ಸಹಾಯಧನ ಲಭ್ಯವಿದೆ. ಹೆಚ್ಚಿನ ರೈತರು ಅವುಗಳ ಪ್ರಯೋಜನ ಪಡೆಯಬೇಕು.ಮಹಮ್ಮದ ಪರವೇಜ್ ಬಂಥನಾಳ, ಜಲಾನಯನ ಅಭಿವೃದ್ಧಿ ಇಲಾಖೆಯ ನಿರ್ದೇಶಕ