ವಂಚನೆ: ಸೋದರಿ ವಿರುದ್ಧ ನಟಿ ಕಾರುಣ್ಯ ಕೇಸ್‌

KannadaprabhaNewsNetwork |  
Published : Jan 16, 2026, 03:30 AM IST
karunya ram | Kannada Prabha

ಸಾರಾಂಶ

ನಟಿ, ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಕಾರುಣ್ಯ ರಾಮ್ ಅವರು ತನ್ನ ಸಹೋದರಿ ಸಮೃದ್ಧಿ ರಾಮ್ ಸೇರಿ ಇತರರ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಟಿ, ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಕಾರುಣ್ಯ ರಾಮ್ ಅವರು ತನ್ನ ಸಹೋದರಿ ಸಮೃದ್ಧಿ ರಾಮ್ ಸೇರಿ ಇತರರ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.

ವಂಚನೆ ಪ್ರಕರಣದ ಸಂಬಂಧ ಸಹೋದರಿ ಸಮೃದ್ಧಿ ರಾಮ್‌ ವಿರುದ್ಧ ಹಾಗೂ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ ಆರೋಪದ ಮೇರೆಗೆ ಪ್ರತಿಭಾ, ಕಪಿಲ್, ಪ್ರಜ್ವಲ್, ರಕ್ಷಿತ್, ಸಾಗರ್ ಎಂಬುವವರ ವಿರುದ್ಧ ದೂರು ದಾಖಲಿಸಿದ್ದಾರೆ.

ತಮ್ಮ ಸಹೋದರಿಗೆ ಸಾಲ ನೀಡಿದವರ ಪೈಕಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದರು ಎಂಬುದಾಗಿ ಕಾರುಣ್ಯ ತಿಳಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಂದೆ-ತಾಯಿ, ಸಹೋದರಿ ಜತೆಗೆ ಕಾರುಣ್ಯ ಅವರು ಆರ್.ಆರ್.ನಗರದಲ್ಲಿ ವಾಸವಿದ್ದರು. ಸಹೋದರಿ ಸಮೃದ್ಧಿ ರಾಮ್ ವಿರುದ್ಧ 2023ರಲ್ಲಿ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ನಟಿ ದೂರು ದಾಖಲಿಸಿದ್ದರು. ಆಗ ಎನ್‌ಸಿಆರ್ ದಾಖಲಾಗಿತ್ತು. ಮನೆಯಲ್ಲಿದ್ದ ಸುಮಾರು 25 ಲಕ್ಷ ಮೌಲ್ಯದ ಚಿನ್ನ ಹಾಗೂ ಹಣವನ್ನು ಯಾರಿಗೂ ತಿಳಿಸದೇ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಇದೀಗ ಮತ್ತೆ ದೂರು ನೀಡಿದ್ದರು. ಹಣಕಾಸು ವಿಚಾರವಾಗಿರುವುದರಿಂದ ಪೊಲೀಸರು ಎಫ್‌ಐಆರ್‌ ದಾಖಲಿಸಿಲ್ಲ ಎನ್ನಲಾಗಿದೆ. ಹೀಗಾಗಿ ನಟಿ ಸಿಸಿಬಿ ಮೊರೆ ಹೋಗಿದ್ದಾರೆ.

‘ಸಮೃದ್ಧಿ ಅವರು ಬೊಟಿಕ್ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದರು. ಅಲ್ಲದೆ, ಆನ್‌ಲೈನ್‌ ಬೆಟ್ಟಿಂಗ್‌ನಲ್ಲೂ 25 ಲಕ್ಷ ರು. ಕಳೆದುಕೊಂಡಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಕುಟುಂಬದಿಂದ ಸಮೃದ್ಧಿ ಪ್ರತ್ಯೇಕವಾಗಿದ್ದರು. ಸಮೃದ್ಧಿಗೆ ಸಾಲ ನೀಡಿದವರು ನನ್ನ ಬಳಿ ಕೇಳುತ್ತಿದ್ದಾರೆ. ಮನೆಯ ಬಳಿಗೂ ಬಂದು ಗಲಾಟೆ ಮಾಡುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಅಶ್ಲೀಲವಾಗಿ ನಿಂದನೆ ಮಾಡುತ್ತಿದ್ದಾರೆ ಎಂದು ನಟಿ ದೂರಿನಲ್ಲಿ ವಿವರಿಸಿದ್ದಾರೆ.

‘ವಾಟ್ಸ್‌ಆ್ಯಪ್‌ನಲ್ಲಿ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಫೋಟೋಗಳಿಗೂ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಎಲ್ಲ ವಿವರನ್ನೂ ಕಾರುಣ್ಯ ನೀಡಿದ್ದಾರೆ. ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾರುಣ್ಯ ರಾಮ್ ಅವರು ವಜ್ರಕಾಯ, ಕಿರಗೂರಿನ ಗಯ್ಯಾಳಿಗಳು, ಪೆಟ್ರೊಮಾಕ್ಸ್ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಸಮೃದ್ಧಿ ಅವರು ಧಾರಾವಾಹಿಗಳಲ್ಲಿ ನಟಿಸಿದ್ದರು. ಬಳಿಕ ಬೊಟಿಕ್ ಉದ್ಯಮ ಆರಂಭಿಸಿದ್ದರು.

ಬೆಟ್ಟಿಂಗ್‌ ಆ್ಯಪ್‌ ನಿಷೇಧಿಸಲು ಮನವಿ

ಈ ಬಗ್ಗೆ ಕಾರುಣ್ಯ ರಾಮ್ ಅವರು ಪ್ರತಿಕ್ರಿಯಿಸಿ, ಬೆಟ್ಟಿಂಗ್‌ ಆ್ಯಪ್‌ ಅನ್ನು ಯಾರೂ ಬಳಸಬೇಡಿ. ಬಳಸುವಂತೆಯೂ ಯಾರನ್ನೂ ಪ್ರೋತ್ಸಾಹಿಸಬೇಡಿ. ಈ ಆ್ಯಪ್‌ಗಳಿಂದ ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ನಮ್ಮ ಕುಟುಂಬವೂ ಮಾನಸಿಕವಾಗಿ ಕುಗ್ಗಿದೆ. ಜನರ ಮುಗ್ಧತೆ ಬಳಸಿಕೊಂಡು ಕುಟುಂಬಗಳನ್ನೇ ನಾಶ ಪಡಿಸಲಾಗುತ್ತಿದೆ. ನನ್ನ ಸಹೋದರಿ ಮೂರು ವರ್ಷದಿಂದ ಬೇರೆಯಾಗಿ ನೆಲಸಿದ್ದಾಳೆ. ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡಿದ್ದರಿಂದ ನಗರ ಪೊಲೀಸ್‌ ಕಮಿಷನರ್‌ಗೆ ದೂರು ನೀಡಿದ್ದೇನೆ. ರಾಜ್ಯ ಸರ್ಕಾರವು ಬೆಟ್ಟಿಂಗ್‌ ಆ್ಯಪ್‌ ನಿಷೇಧಿಸಬೇಕು ಎಂದು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನಮ್ಮ ಮಹಿಳೆಯರ ಸ್ವಾಭಿಮಾನ ಸಂಕೇತ: ತರಳಬಾಳು ಶಿವಮೂರ್ತಿ ಶ್ರೀ
ಜ.19ರಿಂದ ನಾನ್ ಯುಜಿಸಿ ಅತಿಥಿ ಉಪನ್ಯಾಸಕರ ಅನಿರ್ಧಿಷ್ಟಾವಧಿ ಮುಷ್ಕರ