ವಂಚನೆ ಪ್ರಕರಣ: ನಕಲಿ ಸ್ವಾಮಿ ಸೇರಿ ಮೂವರ ಬಂಧನ

KannadaprabhaNewsNetwork | Published : Sep 9, 2024 1:32 AM

ಸಾರಾಂಶ

ಪೊಲೀಸರು ಕಾರ್ಯಾಚರಣೆ ಕೈಗೊಂಡು ಹೊಸಪೇಟೆ, ಚಿತ್ರದುರ್ಗದಲ್ಲಿ ಇಟ್ಟಿದ್ದ ಹಣ ವಶಪಡಿಸಿಕೊಂಡಿದ್ದಾರೆ.

ಹೊಸಪೇಟೆ: ಬಾಕ್ಸ್‌ನಲ್ಲಿ ನಗದು ಹಣ ಇಟ್ಟು ಪೂಜೆ ಮಾಡಿದರೆ ಭಾರೀ ಪ್ರಮಾಣದಲ್ಲಿ ಹಣ ಹೆಚ್ಚಾಗುತ್ತದೆ ಎಂದು ನಂಬಿಸಿ ಮೋಸ ಮಾಡಿದ ಆರೋಪದ ಮೇರೆಗೆ ರಾಜಸ್ಥಾನ ಮೂಲದ ನಕಲಿ ಸ್ವಾಮಿ ಸೇರಿದಂತೆ ಮೂವರನ್ನು ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತರಿಂದ ₹35.14 ಲಕ್ಷ ನಗದು ಮತ್ತು ನೋಟು ಎಣಿಕೆ ಯಂತ್ರ ವಶಪಡಿಸಿಕೊಂಡಿದ್ದಾರೆ. ರಾಜಸ್ಥಾನ ಮೂಲದ ಜಿತೇಂದ್ರ ಸಿಂಗ್‌ (25), ಕಲ್ಲಹಳ್ಳಿ ಗ್ರಾಮದ ತುಕ್ಯಾ ನಾಯ್ಕ (29) ಮತ್ತು ಶಂಕು ನಾಯ್ಕ (30) ಬಂಧಿತರು.

ಪೊಲೀಸರು ಕಾರ್ಯಾಚರಣೆ ಕೈಗೊಂಡು ಹೊಸಪೇಟೆ, ಚಿತ್ರದುರ್ಗದಲ್ಲಿ ಇಟ್ಟಿದ್ದ ಹಣ ವಶಪಡಿಸಿಕೊಂಡಿದ್ದಾರೆ. ಇಂತಹ ಇನ್ನಷ್ಟು ವಂಚನೆ ಪ್ರಕರಣ ಬಯಲಿಗೆ ಬರಲಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ಶ್ರೀಹರಿಬಾಬು ಮಾಹಿತಿ ನೀಡಿದ್ದಾರೆ.

ಈ ತಂಡ ಸಂಡೂರು ಭಾಗದಲ್ಲೂ ವಂಚಿಸಿದೆ ಎಂಬ ಮಾಹಿತಿ ಬಂದಿದೆ. ಹೆಚ್ಚಿನ ಪ್ರಮಾಣದ ನಗದು ಆರೋಪಿ ಬಳಿ ದೊರೆತಿದೆ ಎಂದು ಹೇಳಿದರು.

ಕಲ್ಲಹಳ್ಳಿ ಗ್ರಾಮದ ಕುಮಾರ ನಾಯ್ಕ ಎಂಬವರಿಗೆ ಅದೇ ಗ್ರಾಮದ ತುಕ್ಯಾ ನಾಯ್ಕ ಮತ್ತು ಶಂಕು ನಾಯ್ಕ ಎಂಬವರು ರಾಜಸ್ಥಾನ ಮೂಲದ ಜಿತೇಂದ್ರ ಸಿಂಗ್‌ ಎಂಬ ನಕಲಿ ಸ್ವಾಮಿಯನ್ನು ಸೆ. 4ರಂದು ಪರಿಚಯಿಸಿದ್ದಾರೆ. ₹7.50 ಲಕ್ಷ ನಗದನ್ನು ಬಾಕ್ಸ್‌ನಲ್ಲಿಟ್ಟು ಪೂಜೆ ಮಾಡಿದರೆ ₹80 ಲಕ್ಷ ಮಾಡಿಕೊಡುವುದಾಗಿ ನಂಬಿಸಿದ್ದಾರೆ. ಸ್ವಾಮೀಜಿ ಹೇಳಿದಷ್ಟು ನಗದನ್ನು ಬಾಕ್ಸ್‌ನಲ್ಲಿ ಹಾಕಿಟ್ಟು ಪೂಜೆ ಮಾಡಿದ್ದಾರೆ. 168+2 ದಿನಗಳ ನಂತರ ಬಾಕ್ಸ್‌ ಬಿಚ್ಚುವಂತೆ ಹೇಳಿ ಹೋಗಿದ್ದಾರೆ. ಇದೇ ತಂಡ ಕಲ್ಲಹಳ್ಳಿ ಗ್ರಾಮದ ರಾಜಾ ನಾಯ್ಕ ಎಂಬವರ ಮನೆಯಲ್ಲೂ ಸೆ. 7ರಂದು ಪೂಜೆ ಸಲ್ಲಿಸಲು ಬಂದಿದೆ. ಈ ತಂಡ ನಡೆಸುವ ಪೂಜೆ ಸುಳ್ಳು ಎಂಬುದು ಅನುಮಾನ ಬಂದು, ಕುಮಾರ ನಾಯ್ಕ ತನ್ನ ಮನೆಯಲ್ಲಿದ್ದ ಬಾಕ್ಸ್‌ ತೆರೆದರೆ, ಬಾಕ್ಸ್‌ನಲ್ಲಿ ಊದುಬತ್ತಿ ಪ್ಯಾಕೆಟ್‌ಗಳು, ಉಸುಕಿನ ಚೀಲ, ಮೂರು ಟವೆಲ್‌ಗಳು ಮಾತ್ರ ಇವೆ. ಮೋಸ ಹೋಗಿರುವುದು ಗೊತ್ತಾದ ತಕ್ಷಣ, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಎಸ್ಪಿ ಬಿ.ಎಲ್‌. ಶ್ರೀಹರಿಬಾಬು, ಎಎಸ್ಪಿ ಸಲೀಂ ಪಾಷಾ, ಡಿವೈಎಸ್ಪಿ ಟಿ. ಮಂಜುನಾಥ ಮಾರ್ಗದರ್ಶನದಲ್ಲಿ ಪಿಐ ಗುರುರಾಜ್‌ ಕಟ್ಟಿಮನಿ ನೇತೃತ್ವದಲ್ಲಿ ಪಿಎಸ್‌ಐಗಳಾದ ಎಚ್‌. ನಾಗರತ್ನಾ, ಜಯಲಕ್ಷ್ಮಿ, ಸಿಬ್ಬಂದಿ ಕೀಮ್ಯಾ ನಾಯ್ಕ, ಮೋತಿ ನಾಯ್ಕ, ಆರ್‌. ವೆಂಕಟೇಶ್‌, ಪರಮೇಶ್ವರಪ್ಪ, ಮಂಜುನಾಥ ಮೇಟಿ, ಚಂದ್ರಶೇಖರ್‌, ವಿ. ರಾಘವೇಂದ್ರ, ಹೊನ್ನೂರಪ್ಪ, ಸಣ್ಣ ಗಾಳೆಪ್ಪ, ಅಡಿವೆಪ್ಪ, ಚಂದ್ರಪ್ಪ, ಎಂ. ಸಂತೋಷ್‌ಕುಮಾರ, ನಾಗರಾಜ ಬಂಡಿಮೇಗಳ, ಜಗದೀಶ್‌, ಗೋಪಿ ನಾಯ್ಕ, ವೀರೇಶ್‌, ಜಿ. ನಾಗರಾಜ್‌ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.

Share this article