ಜಿಲ್ಲೆಯ ಇತರ ಶಾಸಕರು ಜನರ ನಡುವೆ ಇದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಆದರೆ ಚಿಕ್ಕಬಳ್ಳಾಪುರ ಕ್ಷೇತ್ರದ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಶಾಸಕರನ್ನು ಎಲ್ಲಿ ಭೇಟಿ ಮಾಡಬೇಕು ಎಂಬುದೇ ತಿಳಿಯದ ಪರಿಸ್ಥಿತಿ ಇದೆ. ಶಾಸಕರಿಗೆ ಸ್ಥಳೀಯ ಕಚೇರಿಯ ವ್ಯವಸ್ಥೆಯೂ ಇಲ್ಲ ಎಂದು ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕ್ಷೇತ್ರದ ಅಭಿವೃದ್ಧಿ ಹಾಗೂ ಬಡವರು, ದಲಿತರ ಸಮಸ್ಯೆಗಳ ಪರಿಹಾರದತ್ತ ಗಮನ ಹರಿಸುವ ಬದಲು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ದಸಂಸ ಹಿರಿಯ ಮುಖಂಡ ಕೆ.ಸಿ.ರಾಜಾಕಾಂತ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ಜನ್ಮದಲ್ಲಿ ದಲಿತನಾಗಿ ಹುಟ್ಟಬೇಕು ಎಂದು ಆಶಯವಾಗಿದೆ ಎಂಬ ಶಾಸಕರ ಹೇಳಿಕೆ ತಮಗೆ ನೋವುಂಟು ಮಾಡಿದೆ. ಶಾಸಕ ಪ್ರದೀಪ್ ಈಶ್ವರ್ ದಲಿತರ ಹೆಸರು ಬಳಸಿಕೊಂಡು ಮೋಸ ಮಾಡುತ್ತಿದ್ದಾರೆ ಎಂದರು.
ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣ ಮಾಡಿ ಶಾಸಕನಾಗಿ ಅಧಿಕಾರ ಸ್ವೀಕರಿಸಿದ್ದೇನೆ ಎಂದು ಹೇಳುವ ಶಾಸಕರು, ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ ಎಂದು ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಕಳೆದರೂ ಬಡವರಿಗೆ ಮನೆ, ಬಡ ರೈತರಿಗೆ ಸಾಗುವಳಿ ಚೀಟಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ
ಎಂದು ಆರೋಪಿಸಿದರು.
ಜಿಲ್ಲೆಯ ಚಿಂತಾಮಣಿ ತಾಲೂಕಿನ ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದ 25 ವರ್ಷಗಳ ಹಿಂದಿನ ವಿಚಾರವನ್ನು ಮತ್ತೆ ಪ್ರಸ್ತಾಪಿಸುವ ಶಾಸಕರು, ತಮ್ಮದೇ ಕ್ಷೇತ್ರದಲ್ಲಿ ನಡೆದಿರುವ ದಲಿತರ ಸಮಸ್ಯೆಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಸರ್ಕಾರದ ಸೌಲಭ್ಯಗಳು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಯಾವುದೇ ಸಮರ್ಪಕ ಸಭೆಗಳನ್ನು ನಡೆಸಿಲ್ಲ. ಕ್ಷೇತ್ರದ ಅಭಿವೃದ್ಧಿ ಹಾಗೂ ಜನಸಾಮಾನ್ಯರ ಸಾಮಾಜಿಕ ನ್ಯಾಯದ ಬಗ್ಗೆ ಗಮನ ಹರಿಸುವ ಬದಲು ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸುವುದು ಸರಿಯಲ್ಲ. ಸಿನಿಮಾ ಡೈಲಾಗ್‌ಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ, ಬಡವರ ನೋವನ್ನು ಅರ್ಥಮಾಡಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.
ಮೈಲಪ್ಪನಹಳ್ಳಿಯಲ್ಲಿ ಬಡವರು ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಹಲವು ಬಾರಿ ಮನವಿ ಮಾಡಿದ್ದರೂ ಅವರ ಸಮಸ್ಯೆಗೆ ಸ್ಪಂದಿಸಿಲ್ಲ. ಬದಲಾಗಿ ಜೆಸಿಬಿ ಮೂಲಕ ಗುಡಿಸಲುಗಳನ್ನು ತೆರವುಗೊಳಿಸಲಾಗಿದೆ. ಇದೇನಾ ಶಾಸಕರ ಸಾಧನೆ ಎಂದು ಪ್ರಶ್ನಿಸಿದರು.
ಸಂವಿಧಾನದ ಆಶಯದಂತೆ ಅಧಿಕಾರವನ್ನು ಬಳಸಿಕೊಂಡು ಸಾಮಾಜಿಕ ನ್ಯಾಯ ಒದಗಿಸಬೇಕಾಗಿದೆ. ಆದರೆ, ಶಾಸಕರಿಂದ ಬಡವರು ಹಾಗೂ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಕೆಲಸ ನಡೆದಿಲ್ಲ ಎಂದು ಆರೋಪಿಸಿದರು.
ತಾಲೂಕಿನ ಸಿಂಗಾಡಿಕದಿರೇನಹಳ್ಳಿ ಗ್ರಾಮದ ದಲಿತ ರೈತರ ಜಮೀನು ವಿಚಾರವಾಗಿ 90 ದಿನಗಳ ಕಾಲ ಧರಣಿ ನಡೆಸಿದರೂ, ಕನಿಷ್ಠ ಸೌಜನ್ಯಕ್ಕಾದರೂ ಸ್ಥಳಕ್ಕೆ ಭೇಟಿ ನೀಡಿ ಬಡ ದಲಿತ ರೈತರ ಅಹವಾಲು ಆಲಿಸಲಿಲ್ಲ. ಹಾಗಿದ್ದರೆ ತಾವು ದಲಿತರ ಪರ ಎಂದು ಹೇಳಿಕೊಳ್ಳುವುದಕ್ಕೆ ಅರ್ಥವೇನು ಎಂದು ಪ್ರಶ್ನಿಸಿದರು.
ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುತ್ತಿಲ್ಲ ಎಂಬ ದೂರುಗಳಿವೆ. ಜನರು ಸಮಸ್ಯೆ ಎದುರಿಸುತ್ತಿದ್ದರೂ ಶಾಸಕರು ಈ ಬಗ್ಗೆ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ನಗರಸಭೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳಿದ್ದರೂ ಈ ಬಗ್ಗೆ ಶಾಸಕರು ಧ್ವನಿ ಎತ್ತಿಲ್ಲ. ದೊರೆತಿರುವ ಅಧಿಕಾರಾವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ರಾಜಾಕಾಂತ್ ಟೀಕಿಸಿದರು.
ಜಿಲ್ಲೆಯ ಇತರ ಶಾಸಕರು ಜನರ ನಡುವೆ ಇದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಆದರೆ ಚಿಕ್ಕಬಳ್ಳಾಪುರ ಕ್ಷೇತ್ರದ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಶಾಸಕರನ್ನು ಎಲ್ಲಿ ಭೇಟಿ ಮಾಡಬೇಕು ಎಂಬುದೇ ತಿಳಿಯದ ಪರಿಸ್ಥಿತಿ ಇದೆ. ಶಾಸಕರಿಗೆ ಸ್ಥಳೀಯ ಕಚೇರಿಯ ವ್ಯವಸ್ಥೆಯೂ ಇಲ್ಲ ಎಂದು ಆರೋಪಿಸಿದರು.
ದಲಿತರ ಅಭಿವೃದ್ಧಿ ಹಾಗೂ ಬಡವರ ಕಲ್ಯಾಣದ ಬಗ್ಗೆ ಮಾತನಾಡುವ ಬದಲು, ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪುವಂತೆ ಮಾಡಬೇಕು. ಕೇವಲ ಊರೂರು ಸುತ್ತಿ ಹೇಳಿಕೆ ನೀಡುವುದರಿಂದ ಜನರ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ರಾಜಾಕಾಂತ್ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.