ಮುಂಡಗೋಡ: ಹುಬ್ಬಳ್ಳಿಯಲ್ಲಿ ಆಸ್ತಿ ಖರೀದಿಸಿ ವಂಚನೆಗೊಳಗಾದ ಚಿನ್ನದ ಅಂಗಡಿ ಮಾಲೀಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದ್ದು, ಈ ಕುರಿತು ೬ ಜನರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದ ಬಸ್ ನಿಲ್ದಾಣದ ಎದುರಿನ ರಾಜಲಕ್ಷ್ಮಿ ಜ್ಯುವೇಲರ್ಸ್ ಮಾಲೀಕ ಆಶ್ರೀತ್ ಮೋಹನ ವೆರ್ಣೇಕರ(೪೫) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇವರು ಹುಬ್ಬಳ್ಳಿಯ ಗಾರ್ಡನ್ ಪೇಟ್‌ನಲ್ಲಿ ವಾಸ ಹಾಗೂ ವಾಣಿಜ್ಯ ಉಪಯೋಗದ ಆಸ್ತಿಯನ್ನು ಖರೀದಿಸಿದ್ದರು. ಆಗ ಆಸ್ತಿಯ ಮೇಲಿದ್ದ ಸಾಲವನ್ನು ತೀರಿಸಿ ಬೋಜಾ ಕಡಿಮೆ ಮಾಡಿಕೊಡುವುದಾಗಿ ಹೇಳಿ ಹಣ ಪಡೆಯಲಾಗಿದೆ. ಆದರೆ ಆಸ್ತಿಯ ದಾಖಲೆಗಳನ್ನು ಪರಿಶೀಲಿಸಿದಾಗ ಅದರ ಮೇಲೆ ₹೧.೩೦ ಕೋಟಿ ಸಾಲವಿರುವುದು ಕಂಡುಬಂದಿದೆ. ಸಾಲದ ಬೋಜಾ ಕಡಿಮೆ ಮಾಡಿಸಿ ಕೊಡಿ ಅಥವಾ ಹಣವನ್ನು ವಾಪಸ್ ನೀಡಿ ಎಂದು ಕೇಳಿದ್ದಾರೆ. ಸಾಲವನ್ನು ತುಂಬುವುದಿಲ್ಲ. ನಿನ್ನ ಹಣ ಕೂಡ ವಾಪಸ್ ಕೊಡುವುದಿಲ್ಲ, ಏನು ಬೇಕಾದರೂ ಮಾಡಿಕೊ ಎಂದು ಬೆದರಿಕೆ ಹಾಕುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದರು. ಇದರಿಂದ ನೊಂದು ತಮ್ಮ ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಮೃತರ ಪತ್ನಿ ಶಂಶುದ್ದೀನ್ ಅಬ್ದುಲ್ ಲತೀಫ್ ಪಟವೇಗರ್, ಕುಶಲಚಂದ್ರ ಬಾಬುಲಾಲ್ ಜೈನ್, ಉಸಾದೇವಿ ಕುಶಲಚಂದ್ರ ಜೈನ್, ಸಾದಿಕ್ ಜಕಾತಿ, ಮುನಾಫ್ ಪಟವೇಗರ ಹಾಗೂ ಜಾವೇದ ಅಹ್ಮದ ಬ್ಯಾಳಿ ಇವರ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಕಣ್ಮರೆಯಾಗಿದ್ದ ಮೀನುಗಾರನ ಶವ ಪತ್ತೆ
ಭಟ್ಕಳ: ತಾಲೂಕಿನ ಅಳ್ವೇಕೋಡಿ ಬಂದರಿನಿಂದ ಮಂಗಳವಾರ ಮೀನುಗಾರಿಕೆಗೆ ತೆರಳಲು ಬೋಟಿನಿಂದ ಬೋಟಿಗೆ ದಾಟುವಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಕಣ್ಮರೆಯಾಗಿದ್ದ ಮೀನುಗಾರನ ಶವ ಗುರುವಾರ ಅಳ್ವೆಕೋಡಿ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.ಜಾರ್ಖಂಡ ರಾಜ್ಯದ ಸಿಂಬೆಗಾ ಕುಲಕೇರ ನಿವಾಸಿ ಬಂದೂ ಬತ್ರಾ ಬಯ್ಯಾ(31) ಮೃತ ಮೀನುಗಾರ. ಮಂಗಳವಾರ ಸಂಜೆ ಮೀನುಗಾರಿಕೆಗೆ ತೆರಳುವಾಗ ಕಾಲು ಜಾರಿ ಸಮುದ್ರದಲ್ಲಿ ಬಿದ್ದು ನಾಪತ್ತೆಯಾಗಿದ್ದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸೇತುವೆ ಮೇಲಿಂದ ಕಾಳಿ ನದಿಗೆ ಹಾರಿದ ಮಹಿಳೆದಾಂಡೇಲಿ: ನಗರದ ಕುಳಗಿ ರಸ್ತೆಯ ಸೇತುವೆಯಿಂದ ಕಾಳಿ ನದಿಗೆ ಮಹಿಳೆಯೋರ್ವಳು ಹಾರಿದ ಘಟನೆ ಗುರುವಾರ ನಡೆದಿದೆ. ನದಿಗೆ ಹಾರಿದ ಮಹಿಳೆ ಸುಮಾರು ೩೦ ವರ್ಷದ ವಯಸ್ಸಿನವಳಾಗಿದ್ದಾಳೆ ಎಂದು ತಿಳಿದುಬಂದಿದೆ. ನದಿಗೆ ಹಾರಿದ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಅರಣ್ಯ ಇಲಾಖೆಯ ಅಧಿಕಾರಿಗಳು, ನುರಿತ ಈಜು ಸಿಬ್ಬಂದಿ ತಂಡದೊಂದಿಗೆ ಶೋಧ ಕಾರ್ಯಾಚರಣೆಗೆ ಇಳಿದಿದೆ. ಸಂಜೆ ೫.೩೦ ಗಂಟೆಗೆ ಹಳಿಯಾಳ ರಸ್ತೆಯ ಪಂಪ್‌ಹೌಸ್ ಹತ್ತಿರ ಕಾಳಿನದಿಯಲ್ಲಿ ಮಹಿಳೆಯ ಶೋಧ ಕಾರ್ಯ ಮುಂದುವರಿದಿದೆ.