ನೌಕರಿ ಕಾಯಂಗೊಳಿಸುವುದಾಗಿ ₹58 ಲಕ್ಷ ವಂಚನೆ, ಆರೋಪ

KannadaprabhaNewsNetwork |  
Published : Sep 23, 2024, 01:18 AM IST

ಸಾರಾಂಶ

ಪ್ರಕರಣದ ಸತ್ಯಾಸತ್ಯತೆಯೂ ತನಿಖೆಯಿಂದಲೇ ಹೊರ ಬರಬೇಕಿದೆ

ಗದಗ: ಪದವಿ ಅತಿಥಿ ಉಪನ್ಯಾಸಕರ ಕೆಲಸ ಕಾಯಂಗೊಳಿಸುವುದಾಗಿ ನಂಬಿಸಿ ₹58 ಲಕ್ಷಕ್ಕೂ ಹೆಚ್ಚಿನ ಹಣ ಪಡೆದು ವಂಚನೆ ಮಾಡಿರುವುದಾಗಿ ಆರೋಪಿಸಿ ಅತಿಥಿ ಉಪನ್ಯಾಸಕ ಸಂಘದ ರಾಜ್ಯಾಧ್ಯಕ್ಷ ಗದಗ ಮೂಲದ ಹನುಮಂತ ಗೌಡ ಕಲ್ಮಿನಿ, ಕಾರ್ಯದರ್ಶಿ ಪೀಟರ್ ವಿನೋದ್ ಚಂದ್, ಶಾಲಿನಿ ನಾಯ್ಕ ಸೇರಿದಂತೆ ಹಲವರು ವಿರುದ್ಧ ಶಿವಮೊಗ್ಗ ಜಿಲ್ಲೆ ಸಾಗರ ನಿವಾಸಿ ಗಣಪತಿ ಎಸ್.ಎಂ., ಅನುಷಾ ಎಲ್.ವಿ., ಅಶೋಕ ಎಚ್., ಭವ್ಯಾ ವಿ., ಕೌಶಿಕ್ ಕೆ. ಎಂಬವರು ಶಿವಮೊಗ್ಗ ಜಿಲ್ಲೆಯ ಸಾಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆದರೆ, ಹನುಮಂತಗೌಡ ಕಲ್ಮನಿ ಆರೋಪ ನಿರಾಕರಿಸಿದ್ದು, ಸ್ಪಷ್ಟನೆ ನೀಡಿದ್ದಾರೆ. ಪ್ರತಿಯೊಬ್ಬರಿಂದ ₹ 3.50 ಲಕ್ಷ ಸಂಗ್ರಹಿಸುವುದು ಸಂಘದ ನಿರ್ಧಾರ ವಿನಃ ಕೇವಲ ನನ್ನ ನಿರ್ಧಾರವಲ್ಲ. ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿರುವ ದೂರುದಾರರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ತಿಳಿಸಿದ್ದಾರೆ. ಪ್ರಕರಣದ ಸತ್ಯಾಸತ್ಯತೆಯೂ ತನಿಖೆಯಿಂದಲೇ ಹೊರ ಬರಬೇಕಿದೆ ಎಂದಿದ್ದಾರೆ.

ದೂರಿನ ವಿವರ: ಕೆಲಸ ಕಾಯಂಗೊಳಿಸುವುದಾಗಿ ನಂಬಿಸಿ ಹಲವರಿಂದ ₹3.50 ಲಕ್ಷ ಪಡೆದು ವಂಚನೆ ಮಾಡಲಾಗಿದೆ. ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕ ವೃತ್ತಿ ನಂಬಿಕೊಂಡು ಬದುಕುತ್ತಿರುವರ ಅತಂತ್ರ ಬದುಕನ್ನು ಅಸ್ತ್ರವಾಗಿ ಬಳಸಿಕೊಂಡ ಅತಿಥಿ ಉಪನ್ಯಾಸಕ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ಹಾಗೂ ಆತನ ಸಂಗಡಿಗರು ನೂರಾರು ಆಕಾಂಕ್ಷಿಗಳಿಂದ ಲಕ್ಷಾಂತರ ಹಣ ವಸೂಲಿ ಮಾಡಿ ವಂಚಿಸಿದ್ದಾರೆ. ಭಾರತೀಯ ದಂಡ ಸಂಹಿತೆ 1860 ಸೆಕ್ಷನ್ 420 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ

ಖಾತೆಗೆ ವರ್ಗಾವಣೆ: ಪ್ರತಿಯೊಬ್ಬರಿಂದ ₹3.50 ಲಕ್ಷ ಸಂಗ್ರಹಿಸುವ ಪ್ರಸ್ತಾಪ ಬಂದಾಗ ಕೆಲವರು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆ, ನಿಮ್ಮ ಹಣ ಸುರಕ್ಷಿತವಾಗಿರುತ್ತದೆ ಎಂಬ ಭರವಸೆ ನೀಡಿ, ಅಳ್ನಾವರ ಮೂಲದ ಕೋ ಅಪರೇಟಿವ್ ಸೊಸೈಟಿ ಒಂದರ ಚಾಲ್ತಿ ಖಾತೆಗೆ ಹಣವನ್ನು ಅಭ್ಯರ್ಥಿಗಳಿಂದ ನೇರವಾಗಿ ವರ್ಗಾಯಿಸಿಕೊಂಡಿದ್ದಾರೆ. ಸೊಸೈಟಿಯ ಮೇಲೆ ಭರವಸೆ ಇಟ್ಟು ನೂರಾರು ಅತಿಥಿ ಉಪನ್ಯಾಸಕರು ತಲಾ ₹3 ಲಕ್ಷಕ್ಕೂ ಅಧಿಕ ಮೊತ್ತವನ್ನು ಹನುಮಂತಗೌಡ ಕಲ್ಮನಿ ಮತ್ತು ಸಂಗಡಿಗರು ಸೂಚಿಸಿದ ಖಾತೆಗೆ ಹಣ ವರ್ಗಾಯಿಸಿದ್ದಾರೆ.

ಅಳ್ನಾವರ ಮೂಲದ ಕೋಆಪರೇಟಿವ್ ಸೊಸೈಟಿಯೊಂದರ ಖಾತೆಗೆ ಎಲ್ಲರೂ ಹಣ ಹಾಕಿದ್ದೇವೆ. ಒಂದೂವರೆ ವರ್ಷದಿಂದ ನೌಕರಿ ಕಾಯಂ ಮಾಡಿಕೊಡುವುದಾಗಿ ಹೇಳುತ್ತಲೇ ವಿಳಂಬ ಮಾಡಿದ್ದಾರೆ. ಖರ್ಚು ವೆಚ್ಚ ಬಿಟ್ಟು ಇನ್ನುಳಿದ ಮೊತ್ತ ನೀಡಿ ಎಂದು ಮನವಿ ಮಾಡಿದರು ಸಹ ಹಣ ನೀಡುತ್ತಿಲ್ಲ. ಹಾಗಾಗಿ ದೂರು ದಾಖಲಿಸಲಾಯಿತು ಎಂದು ದೂರುದಾರ ಗಣೇಶ ಎಸ್.ಎಂ ಹೇಳಿದ್ದಾರೆ.

ಇದು ಕೇವಲ ನನ್ನ ನಿರ್ಧಾರ ಅಲ್ಲ, ಸಂಘದ ನಿರ್ಧಾರವಾಗಿದೆ. ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಆರೋಪ ಎದುರಿಸುತ್ತಿರುವ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಪನಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ