ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ: ಮೂವರ ಬಂಧನ

KannadaprabhaNewsNetwork |  
Published : Feb 10, 2024, 01:48 AM IST
ಫೋಟೋ: ೯ಪಿಟಿಆರ್-ಸುಮಿತ್ರಾ ಬಾಯಿ, ೯ಪಿಟಿಆರ್-ಸೌಂದರ್ಯ ೯ಪಿಟಿಆರ್-ರಾಹುಲ್ ಕುಮಾರ್ಬಂಧಿತ ಆರೋಪಿಗಳು | Kannada Prabha

ಸಾರಾಂಶ

ಆರೋಪಿಗಳ ಬಗ್ಗೆ ಪುತ್ತೂರು ಪೊಲೀಸರು ಮಾಹಿತಿ ಸಂಗ್ರಹಿಸಿ, ಅವರನ್ನು ಬೆಂಗಳೂರು ನಗರದ ನಂದಿನಿ ಲೇ ಔಟ್‌ನ ಬಾಡಿಗೆ ಮನೆಯೊಂದರಲ್ಲಿ ಬುಧವಾರ ಪತ್ತೆ ಮಾಡಿ ಬಂಧಿಸಿ ಪುತ್ತೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿಯಾದ ನಿಶ್ಮಿತಾ ಎಂಬ ಯುವತಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ೨.೨೫ ಲಕ್ಷ ರು. ವಂಚಿಸಿದ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿದ ಪುತ್ತೂರು ಗ್ರಾಮಾಂತರ ಪೊಲೀಸರು ಇಬ್ಬರು ಯುವತಿಯರ ಸಹಿತ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಗ್ರಾಮದ ಸುಮಿತ್ರಾ ಬಾಯಿ ಸಿ.ಆರ್. (೨೩) ಮತ್ತು ಆಕೆಯ ಸಹೋದರ ರಾಹುಲ್ ಕುಮಾರ್ ನಾಯ್ಕ (೧೯) ಹಾಗೂ ಹಾಸನ ಜಿಲ್ಲೆಯ ಶಾಂತಿಗ್ರಾಮ ತಾಲೂಕಿನ ಹಳಸಿನಹಳ್ಳಿ ನಿವಾಸಿ ಸೌಂದರ್ಯ ಎಂ.ಎಸ್(೨೧) ಬಂಧಿತ ಆರೋಪಿಗಳು. ಆರೋಪಿಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿ, ಅವರನ್ನು ಬೆಂಗಳೂರು ನಗರದ ನಂದಿನಿ ಲೇ ಔಟ್‌ನ ಬಾಡಿಗೆ ಮನೆಯೊಂದರಲ್ಲಿ ಬುಧವಾರ ಪತ್ತೆ ಮಾಡಿ ಬಂಧಿಸಿ ಪುತ್ತೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

೨೦೨೩ರ ಜೂನ್ ೨೬ರಂದು ಪತ್ರಿಕೆಯೊಂದರಲ್ಲಿ ‘ಕರಾವಳಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆಫೀಸು ಕೆಲಸ ಖಾಲಿ ಇದೆ. ನಿರುದ್ಯೋಗಿಗಳಿಗೆ ಬಂದ ದಿನವೇ ಕೆಲಸ ಸಿಗುತ್ತದೆ’ ಎಂದು ಉದ್ಯೋಗದ ಜಾಹೀರಾತು ನೀಡಲಾಗಿತ್ತು. ಇದನ್ನು ನೋಡಿದ ನಿಶ್ಮಿತಾ ಜಾಹೀರಾತಿನಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ್ದರು. ಕರೆ ಸ್ವೀಕರಿಸಿದವರು, ಕೆಲಸಕ್ಕೆ ಸೇರ ಬಯಸುವುದಾದರೆ ಫೀಸ್ ಕೊಡಬೇಕೆಂದು ತಿಳಿಸಿ ನಂಬಿಸಿದ್ದರು. ಆರೋಪಿಗಳು ಸೂಚಿಸಿದಂತೆ ನಿಶ್ಮಿತಾ ಅವರು ೨೦೨೩ರಜೂನ್ ೨೮ರಿಂದ ೨೦೨೪ರ ಜನವರಿ೧೨ ರ ಅವಧಿಯಲ್ಲಿ ಹಂತ ಹಂತವಾಗಿ ಅಪರಿಚಿತ ಆರೋಪಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಯುಪಿಐ, ಫೋನ್‌ಫೇ ಮತ್ತು ಗೂಗುಲ್ ಮೂಲಕ ಒಟ್ಟು ೨,೨೫,೦೦೧ ರು. ಪಾವತಿ ಮಾಡಿದ್ದರು. ಆದರೆ ಆರೋಪಿಗಳು ಉದ್ಯೋಗವನ್ನೂ ನೀಡದೆ, ಹಣವನ್ನೂ ವಾಪಸ್‌ ನೀಡದಿದ್ದಾಗ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ನಿಶ್ಮಿತಾ ಈ ಕುರಿತು ಜ.೨೫ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೆತ್ತಿಕೊಂಡು ಸೈಬರ್ ಆರೋಪಿಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ್ದರು. ದ.ಕ.ಜಿಲ್ಲಾ ಎಸ್ಪಿ ಸಿ.ಬಿ.ರಿಷ್ಯಂತ್ ಮತ್ತು ಜಿಲ್ಲಾ ಹೆಚ್ಚುವರಿ ಎಸ್ಪಿಗಳಾದ ಧರ್ಮಪ್ಪ ಎಂ.ಎನ್ ಮತ್ತು ರಾಜೇಂದ್ರ ಡಿ.ಎಸ್ ಅವರ ನಿರ್ದೇಶನ ಮತ್ತು ಪುತ್ತೂರು ಡಿವೈಎಸ್ಪಿ ಅರುಣ್ ನಾಗೇ ಗೌಡ ಹಾಗೂ ಪುತ್ತೂರು ಗ್ರಾಮಾಂತರ ಠಾಣೆಯ ಪ್ರಭಾರ ಸರ್ಕಲ್ ಇನ್ಸ್ಪೆಕ್ಟರ್ ರವಿ.ಬಿ.ಎಸ್ ಅವರ ಮಾರ್ಗದರ್ಶನದಲ್ಲಿ ಸಂಪ್ಯ ಎಸ್‌ಐ ಜಂಬೂರಾಜ್ ಬಿ.ಮಹಾಜನ್ ಅವರ ನೇತೃತ್ವದ ಪೊಲೀಸ್ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ. ಸಂಪ್ಯ ಠಾಣೆಯ ಎಎಸ್‌ಐ ಶ್ರೀಧರ್ ರೈ, ಸಿಬ್ಬಂದಿ ಮಧು ಕೆ.ಎಸ್, ಸತೀಶ್.ಎನ್, ಗಿರೀಶ್ ಕೆ, ಶಿವಪುತ್ರಮ್ಮ, ಹೆಚ್.ಜಿ.ಹಕೀಂ ಮತ್ತು ಗಣಕ ಯಂತ್ರ ವಿಭಾಗದ ದಿವಾಕರ್, ಸಂಪತ್ ಮತ್ತಿತರರು ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ