ವಂಚಕಿ ಐಶ್ವರ್ಯಾಗೌಡ ಅಕ್ರಮವಾಗಿ ಮೊಬೈಲ್ ಕರೆಗಳ ವಿವರ ಕೇಸ್‌ : ಪೆದೆ ಸೇರಿ ಇಬ್ಬರ ಬಂಧನ

KannadaprabhaNewsNetwork | Updated : Mar 13 2025, 09:26 AM IST

ಸಾರಾಂಶ

ಅಕ್ರಮವಾಗಿ ಮೊಬೈಲ್ ಕರೆಗಳ ವಿವರ (ಸಿಡಿಆರ್‌) ವನ್ನು ವಂಚನೆ ಪ್ರಕರಣದ ಆರೋಪಿ ಐಶ್ವರ್ಯಾ ಗೌಡ ಪಡೆದ ಕೇಸ್‌ನ ಸಂಬಂಧ ರಾಮನಗರ ಜಿಲ್ಲೆಯ ಪೊಲೀಸ್ ಕಾನ್‌ಸ್ಟೇಬಲ್ ಸೇರಿದಂತೆ ಇಬ್ಬರನ್ನು ವಿಜಯನಗರ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಅಕ್ರಮವಾಗಿ ಮೊಬೈಲ್ ಕರೆಗಳ ವಿವರ (ಸಿಡಿಆರ್‌) ವನ್ನು ವಂಚನೆ ಪ್ರಕರಣದ ಆರೋಪಿ ಐಶ್ವರ್ಯಾ ಗೌಡ ಪಡೆದ ಕೇಸ್‌ನ ಸಂಬಂಧ ರಾಮನಗರ ಜಿಲ್ಲೆಯ ಪೊಲೀಸ್ ಕಾನ್‌ಸ್ಟೇಬಲ್ ಸೇರಿದಂತೆ ಇಬ್ಬರನ್ನು ವಿಜಯನಗರ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಅಕ್ಕೂರು ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್‌ ಸುನೀಲ್ ಹಾಗೂ ಮಂಗಳವಾರಪೇಟೆಯ ಪವನ್ ಬಂಧಿತರಾಗಿದ್ದು, ಐಶ್ವರ್ಯಾ ಗೌಡಳ ಸಂಪರ್ಕ ಜಾಲವನ್ನು ಶೋಧಿಸಿದಾಗ ಸಿಡಿಆರ್ ಕೃತ್ಯದ ಹಿಂದೆ ಹೆಡ್ ಕಾನ್‌ಸ್ಟೇಬಲ್ ಪಾತ್ರ ಬಯಲಾಗಿದೆ. ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆ ಸಲುವಾಗಿ ಈ ಇಬ್ಬರು ಆರೋಪಿಗಳನ್ನು ಆರು ದಿನಗಳು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರಿನಲ್ಲಿ ಚಿನ್ನಾಭರಣ ವ್ಯಾಪಾರಿಗಳಿಗೆ ಕೋಟ್ಯಾಂತರ ರು. ಮೌಲ್ಯದ ಆಭರಣ ವಂಚಿಸಿದ ಆರೋಪ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಐಶ್ಪರ್ಯಗೌಡಳ ವಿರುದ್ಧ ಕೇಳಿ ಬಂದಿದೆ. ಈ ಸಂಬಂಧ ಬೆಂಗಳೂರಿನ ಚಂದ್ರಾಲೇಔಟ್, ರಾಜರಾಜೇಶ್ವರಿ ನಗರ ಹಾಗೂ ಮಂಡ್ಯ ನಗರ ಠಾಣೆಗಳಲ್ಲಿ ಆಕೆಯ ವಿರುದ್ಧ ಪ್ರಕರಣಗಳು ದಾಖಲಾಗಿವೆ. ತನ್ನ ವಂಚನೆ ಕೃತ್ಯದ ಸಂತ್ರಸ್ತರ ಬಗ್ಗೆ ಚಲನವಲದ ಮಾಹಿತಿ ಸಂಗ್ರಹಕ್ಕೆ ಸಿಡಿಆರ್ ಅನ್ನು ಐಶ್ವರ್ಯ ಪಡೆಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಡಿಆರ್‌ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ವಿಜಯನಗರ ಉಪ ವಿಭಾಗದ ಎಸಿಪಿ ಚಂದನ್ ಕುಮಾರ್ ನೇತೃತ್ವದ ತಂಡವು, ಐಶ್ವರ್ಯಗೌಡಳಿಂದ ಜಪ್ತಿಯಾಗಿದ್ದ ಮೊಬೈಲ್‌ಗಳನ್ನು ಪರಿಶೀಲಿಸಿದಾಗ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ. ಕೊನೆಗೆ ತಾಂತ್ರಿಕ ಮಾಹಿತಿ ಆಧರಿಸಿ ಸುನೀಲ್ ಹಾಗೂ ಮಧ್ಯವರ್ತಿ ಪವನ್‌ನನ್ನು ಎಸಿಪಿ ತಂಡ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಶ್ವರ್ಯಾ ಸಂಗ ತಂದ ಭಂಗ

ಎರಡ್ಮೂರು ವರ್ಷಗಳಿಂದ ಚನ್ನಪಟ್ಟಣ ನಗರದ ಮಂಗಳವಾರಪೇಟೆಯ ಪವನ್ ಮೂಲಕ ಐಶ್ವರ್ಯಗೌಡಳಿಗೆ ಹೆಡ್ ಕಾನ್‌ಸ್ಟೇಬಲ್ ಸುನೀಲ್ ಪರಿಚಯವಾಗಿದೆ. ಈ ಗೆಳೆತನದಲ್ಲಿ ಹಣದಾಸೆ ತೋರಿಸಿ ಸಿಡಿಆರ್‌ ಅನ್ನು ಐಶ್ವರ್ಯಗೌಡಳಿಗೆ ಸುನೀಲ್ ನೀಡುತ್ತಿದ್ದ. ಅಪರಾಧ ಪ್ರಕರಣಗಳ ತನಿಖೆ ವೇಳೆ ಐಶ್ವರ್ಯ ನೀಡುವ ಬೇರೆಯವರ ಮೊಬೈಲ್ ಸಂಖ್ಯೆಯನ್ನು ಸೇರಿಸಿ ಸಿಡಿಆರ್ ಅನ್ನು ಆತ ಪಡೆಯುತ್ತಿದ್ದ. ಬಳಿಕ ಪವನ್ ಮೂಲಕ ಆಕೆಗೆ ಸುನೀಲ್ ತಲುಪಿಸುತ್ತಿದ್ದ. ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಕೆಲಸ ಮಾಡಿದ್ದ ಸುನೀಲ್, ಪ್ರಸುತ್ತ ಅಕ್ಕೂರು ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

Share this article