ವಂಚಕನ ಬಂಧನ: ₹62.83 ಲಕ್ಷ ವಂಚನೆ!

KannadaprabhaNewsNetwork |  
Published : Nov 15, 2024, 12:33 AM IST
14ಕೆಡಿವಿಜಿ9-ದಾವಣಗೆರೆ ಎಸ್ಪಿ ಉಮಾ ಪ್ರಶಾಂತ. | Kannada Prabha

ಸಾರಾಂಶ

ಕನ್ನಡ ಮ್ಯಾಟ್ರಿಮೋನಿಗಳ ಮೂಲಕ ಹೆಣ್ಣುಮಕ್ಕಳನ್ನು ವಂಚಿಸುತ್ತಿದ್ದ, ನೌಕರಿ ಕೊಡಿಸುವ ಆಮಿಷವೊಡ್ಡಿ, ಹಣ ಪಡೆದು ಮೋಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ಆತನಿಂದ 1 ಮೊಬೈಲ್‌ ಫೋನ್‌ನ್ನು ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.

- ಮಂಡ್ಯ ಜಿಲ್ಲೆಯ ಮಾಚಹಳ್ಳಿ ಗ್ರಾಮದ ಮಾಧು ಅಲಿಯಾಸ್ ಮಹದೇವಪ್ಪ ಬಂಧಿತ ಆರೋಪಿ

- - -

- ಮ್ಯಾಟ್ರಮೋನಿಯಲ್ಲಿ ಪರಿಚಯ ಮಾಡಿಕೊಂಡು, ನೌಕರಿ ಕೊಡಿಸುವುದಾಗಿ ವಂಚಿಸುವ ಆರೋಪಿ - ದಾವಣಗೆರೆ, ಹರಿಹರ, ಬೆಂಗಳೂರು, ಮೈಸೂರು, ಕೆ.ಆರ್. ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲು

- 8 ಪ್ರಕರಣಗಳಲ್ಲಿ ಒಟ್ಟು ₹62,83,600 ವಂಚನೆ, ವಿಚಾರಣೆ ವೇಳೆ ಬಾಯಿಬಿಟ್ಟಿರುವ ಆ ವಂಚಕ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕನ್ನಡ ಮ್ಯಾಟ್ರಿಮೋನಿಗಳ ಮೂಲಕ ಹೆಣ್ಣುಮಕ್ಕಳನ್ನು ವಂಚಿಸುತ್ತಿದ್ದ, ನೌಕರಿ ಕೊಡಿಸುವ ಆಮಿಷವೊಡ್ಡಿ, ಹಣ ಪಡೆದು ಮೋಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ಆತನಿಂದ 1 ಮೊಬೈಲ್‌ ಫೋನ್‌ನ್ನು ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಮಾಚಹಳ್ಳಿ ಗ್ರಾಮದ ಮಾಧು ಅಲಿಯಾಸ್ ಮಧು ಅಲಿಯಾಸ್ ಮಧು ಎಂ. ಮಹದೇವಪ್ಪ (31) ಬಂಧಿತ ಆರೋಪಿ. ಮ್ಯಾಟ್ರಿಮೋನಿಗಳ ಮೂಲಕ ಹೆಣ್ಣುಮಕ್ಕಳನ್ನು ಪರಿಚಯ ಮಾಡಿಕೊಂಡು, ವಂಚಿಸುತ್ತಿದ್ದ ಬಗ್ಗೆ ಆತನ ವಿರುದ್ಧ ದೂರು ದಾಖಲಾಗಿತ್ತು. ಮೇ 4ರಂದು ಬೆಳಗ್ಗೆ 10 ಗಂಟೆ ವೇಳೆಗೆ ನಗರದ ತನ್ನ ಮನೆಯಲ್ಲಿ ಮೊಬೈಲ್‌ನಲ್ಲಿ ಮ್ಯಾಟ್ರಿಮೋನಿ ಆ್ಯಪ್ ನೋಡುತ್ತಿದ್ದ ಯುವತಿಗೆ ಅದೇ ಆ್ಯಪ್‌ನಲ್ಲಿ ಅಪರಿಚಿತ ವ್ಯಕ್ತಿ ಮಧು ಎಂ.ಮಹಾದೇವಪ್ಪ ಎಂಬಾತ ಪರಿಚಯವಾಗಿದ್ದಾನೆ. ಅನಂತರ ಯುವತಿ ಮೊಬೈಲ್ ನಂಬರ್‌ಗೆ ವಾಟ್ಸಪ್ ಮೆಸೇಜ್ ಮಾಡಿ, ನಿಮ್ಮ ಪ್ರೊಫೈಲ್ ಇಷ್ಟವಾಗಿದೆ. ನಾನು ನಿಮ್ಮನ್ನು ಮದುವೆಯಾಗಲು ಒಪ್ಪಿದ್ದೇನೆ ಎಂದು ಮೆಸೇಜ್ ಮಾಡಿದ್ದಾನೆ. ಅನಂತರ ಆರೋಪಿ ಮಧು ಪಿರ್ಯಾದಿ ಮೊಬೈಲ್‌ಗೆ ವಿವಿಧ ಮೊಬೈಲ್ ನಂಬರ್‌ಗಳಿಂದ ವಾಟ್ಸಪ್ ಮೆಸೇಜ್‌ ಮಾಡುತ್ತಾ, ಕಾಲ್ ಮಾಡಿ ಮಾತನಾಡುತ್ತಿದ್ದನು.

ಅನಂತರ ಯುವತಿಯ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿ, ಮೈಸೂರು ನಗರದ ಆರ್‌ಆರ್‌ಬಿ ರೈಲ್ವೆ ಇಲಾಖೆಯಲ್ಲಿ ಕ್ಲರಿಕಲ್ ಪೋಸ್ಟ್ ಖಾಲಿ ಇವೆ. ತಾನು ರೈಲ್ವೆ ಇಲಾಖೆ ವರ್ಕ್ ಶಾಪ್‌ನಲ್ಲಿ ಎಂಜಿನಿಯರ್ ಎಂದು ನಂಬಿಸಿದ್ದಾನೆ. ಯುವತಿಯಿಂದ ವಿವಿಧ ದಿನಾಂಕಗಳಂದು ಹಂತ ಹಂತವಾಗಿ ಒಟ್ಟು ₹21,03,600 ಗಳನ್ನು ಆನ್ ಲೈನ್ ಪಡೆದು, ವಂಚಿಸಿದ್ದನು. ಈ ಬಗ್ಗೆ ಸಂತ್ರಸ್ತ ಯುವತಿ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಎಎಸ್‌ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ, ಸಿಇಎನ್ ಅಪರಾಧ ಠಾಣೆ ಡಿವೈಎಸ್‌ಪಿ ಪದ್ಮಶ್ರೀ ಗುಂಜೀಕರ್‌ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಲಕ್ಷ್ಮಣ ನಾಯ್ಕ ನೇತೃತ್ವದಲ್ಲಿ ಸಿಬ್ಬಂದಿ ಗೋವಿಂದರಾಜ, ಅಶೋಕ, ಎಸ್‌ಪಿ ಕಚೇರಿಯ ರಾಮಚಂದ್ರ ಜಾಧವ್‌, ರಾಘವೇಂದ್ರ ಅವರನ್ನು ಒಳಗೊಂಡ ತಂಡವು ಆರೋಪಿ ಮಾಧು ಅಲಿಯಾಸ್ ಮಹದೇವಪ್ಪ (31)ನನ್ನು ಪತ್ತೆ ಮಾಡಿ, ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ, ತನಿಖೆ ಕೈಗೊಂಡಿದೆ. ಬಂಧಿತನಿಂದ ಹಾಲಿ ₹4,01,463 ಪಿರ್ಯಾದಿ ಯುವತಿಗೆ ಮರುಪಾವತಿ ಮಾಡಿಸಲಾಗಿದೆ.

ಪ್ರಕರಣಗಳು ಬಯಲು:

ಆರೋಪಿ ಬಂಧನದಿಂದ ಮ್ಯಾಟ್ರಮೋನಿ ವಿಚಾರವಾಗಿ ಹೆಣ್ಣುಮಕ್ಕಳಿಗೆ ಮೋಸ ಮಾಡಿರುವ ಸಾಕಷ್ಟು ಪ್ರಕರಣ ಬಯಲಾಗಿವೆ. ಚಿಕ್ಕಮಗಳೂರು ಠಾಣೆ ವ್ಯಾಪ್ತಿಯಲ್ಲಿ ₹3.80 ಲಕ್ಷ, ಮಂಡ್ಯ ಸಿಇಎನ್ ಠಾಣೆಯಲ್ಲಿ ₹26 ಲಕ್ಷ, ದಾವಣಗೆರೆ ಸಿಇಎನ್ ಠಾಣೆಯಲ್ಲಿ ₹21,03,600 ಗಳಿಗೆ ಹೆಣ್ಣುಮಕ್ಕಳಿಗೆ ವಂಚನೆ ಮಾಡಿದ್ದಾನೆ.

ಅಷ್ಟೇ ಅಲ್ಲ, ನೌಕರಿ ಕೊಡಿಸುವುದಾಗಿ ದಾವಣಗೆರೆ ಬಡಾವಣೆ ಠಾಣೆಯಲ್ಲಿ ₹1.5 ಲಕ್ಷ ರು., ಹರಿಹರ ನಗರ ಠಾಣೆಯಲ್ಲಿ ₹1.30 ಲಕ್ಷ ರು., ಬೆಂಗಳೂರಿನ ಕಾಟನ್‌ ಪೇಟೆ ಠಾಣೆಯಲ್ಲಿ ₹2.80 ಲಕ್ಷ, ಮೈಸೂರು ಸಿಇಎನ್ ಠಾಣೆಯಲ್ಲಿ ₹90 ಸಾವಿರ, ಕೆ.ಆರ್. ನಗರ ಠಾಣೆಯಲ್ಲಿ ₹5.50 ಲಕ್ಷ ಹೀಗೆ ಆರೋಪಿ ಮಧು ವಿವಿಧ ಕಡೆ 8 ಪ್ರಕರಣಗಳಲ್ಲಿ ಒಟ್ಟು ₹62,83,600 ವಂಚಿಸಿರುವುದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.

ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿ, ಸಿಬ್ಬಂದಿಗೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂಥಹ ವಂಚನೆ ಪ್ರಕರಣಗಳು ಕಂಡುಬಂದರೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ಉಮಾ ಪ್ರಶಾಂತ ಮನವಿ ಮಾಡಿದ್ದಾರೆ.

- --14ಕೆಡಿವಿಜಿ9: ಉಮಾ ಪ್ರಶಾಂತ, ಎಸ್‌ಪಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?