ಕನ್ನಡಪ್ರಭ ವಾರ್ತೆ ಇಂಡಿ
ವಿಜಯಪುರದಲ್ಲಿ ಜ.1 ಹಾಗೂ 2ರಂದು ನಡೆಯಲಿರುವ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಕಾರ್ಯಕ್ರಮಕ್ಕೆ ಇಂಡಿ ಹಾಗೂ ಚಡಚಣದಿಂದ ಉಚಿತ ಸಾರಿಗೆ ಬಸ್ಸಿನ ಸೌಕರ್ಯ ಕಲ್ಪಿಸಲಾಗಿದೆ ತಾಲೂಕಿನ ಸಮಸ್ತ ನಾಗರಿಕರು ಪುಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಮನವಿ ಮಾಡಿದರು.ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿಸರ್ಗದ ಮೇಲೆ ಅಪಾರ ಪ್ರೀತಿ ಹೊಂದಿರುವ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳವರ ಆಶಯದಂತೆ, ನಾವೆಲ್ಲ ನಿಸರ್ಗವನ್ನು ಪ್ರೀತಿಸಿದರೆ ಶ್ರೀಗಳನ್ನು ಪ್ರೀತಿಸಿದಂತೆ. ಜಗತ್ತಿನಲ್ಲಿ ಅವರು ಬದುಕಿ ಹೋದ ಬದಕನ್ನು ಮತ್ಯಾರು ಬದುಕಲು ಸಾಧ್ಯವಿಲ್ಲ. ಅಂತಹ ಆದರ್ಶ ಬದುಕು, ಆದರ್ಶ ವಿಚಾರಗಳನ್ನು ಹೊಂದಿದ್ದ ಶ್ರೀಗಳ ಗುರುನಮನ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಅವರ ಆದರ್ಶ ಬದುಕು ನಮಗೆಲ್ಲ ದಾರಿದೀಪವಾಗಲಿ ಎಂದು ಹೇಳಿದರು.
ಕಾತ್ರಾಳ-ಬಾಲಗಾಂವ ಮಠದ ಶ್ರೀ ಅಮೃತಾನಂದ ಮಹಾಸ್ವಾಮೀಜಿ ಮಾತನಾಡಿ, ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರಿಗೆ ನಮನ ಸಲ್ಲಿಸುವ ವಿಶಿಷ್ಠ ಕಾರ್ಯಕ್ರಮ ವಿಜಯಪುರದಲ್ಲಿ ಹಮ್ಮಿಕೊಂಡಿದ್ದು, ನಾಡಿನ ಶರಣರು, ಸಂತರು, ಸಾಹಿತಿಗಳು, ಬುದ್ಧಿಜೀವಿಗಳು, ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲರೂ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕು ಎಂದು ಹೇಳಿದರು.ಜ.1ರಂದು ದೀಪ ಬೆಳಗಿಸುವ ಕಾರ್ಯಕ್ರಮ ಹಾಗೂ 2ರಂದು ಪುಷ್ಪ ಸಮರ್ಪಣಾ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೂ ಮುಂಚೆ 9 ದಿನಗಳವರೆಗೆ ವಿವಿಧ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಡಿ.23ರಂದು ಜಾನಪದ ಕಲೆ, ಡಿ.24ರಂದು ಪರಿಸರ ಸಂರಕ್ಷಣೆ, ಡಿ.25 ರಂದು ಜಾಗತಿಕ ಆಧ್ಯಾತ್ಮಿಕ ಚಿಂತನೆ, ಡಿ.26ರಂದು ಸ್ವಚ್ಛತೆ, ಸಮಯಪಾಲನೆ, ವ್ಯಸನ ಮುಕ್ತತೆ ಹಾಗೂ ಡಿ. 27ರಂದು ಮಹಿಳೆ ಮತ್ತು ಸಂಸ್ಕೃತಿ, ಡಿ.28ರಂದು ಗ್ರಾಮೀಣ ಜನರ ಬದುಕು, ಡಿ.29ರಂದು ಯುವಕರು ಮತ್ತು ದೇಶಪ್ರೇಮ, ಡಿ.30ರಂದು ಶಿಕ್ಷಣ ಮತ್ತು ವಿಜ್ಞಾನ , ಡಿ.31ರಂದು ಕ್ರೀಡೆ, ಯೋಗ ಹಾಗೂ ಆರೋಗ್ಯದ ಕುರಿತು ವಿಶೇಷ ಗೋಷ್ಠಿಗಳು ನಡೆಯಲಿವೆ ಎಂದು ಹೇಳಿದ ಶ್ರೀಗಳು, ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಇಂಡಿಯ ಜೊತೆ ಅವಿನಾಭಾವ ಸಂಬಂಧ ಇತ್ತು. ಶ್ರೀಗಳ ಪ್ರವಚನ ಹಾಗೂ ಇತರ ಕಾರ್ಯಕ್ರಮಗಳು ಇಂಡಿ ತಾಲೂಕಿನಲ್ಲಿ ಆಗಿರುವಷ್ಟು ರಾಜ್ಯದ ಯಾವುದೇ ಭಾಗದಲ್ಲಿ ಆಗಿಲ್ಲ ಎಂದು ಹೇಳಿದರು. ಕಾರ್ಯಕ್ರಮಕ್ಕೆ ನಾಡಿನಾದ್ಯಂತ ಭಕ್ತರು ಆಗಮಿಸಲಿದ್ದು, ಇಂಡಿ ಹಾಗೂ ಚಡಚಣ ಭಾಗದ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಸಾಹಿತಿ, ಸಂಶೋಧಕ ಡಿ.ಎನ್. ಅಕ್ಕಿ, ಡಿ.ಆರ್. ಶಹಾ, ಕಸಾಪ ತಾಲೂಕು ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ಇದ್ದರು.