ಜಿಲ್ಲೆಯ 890 ಹಿರಿಯ ನಾಗರಿಕರಿಗೆ ಉಚಿತ ಸಾಧನ ಸಲಕರಣೆ ವಿತರಣೆ
ಸಂಧ್ಯಾಕಾಲದಲ್ಲಿ ಉತ್ತಮ ಜೀವನ ನಡೆಸಲು ನೆರವಾಗುವ ಸಲುವಾಗಿ ಜಿಲ್ಲೆಯ 890 ಹಿರಿಯ ನಾಗರಿಕರಿಗೆ ಉಚಿತ ಸಾಧನ ಸಲಕರಣೆಗಳನ್ನು ನಗರದಲ್ಲಿ ಸಮರ್ಪಣೆ ಮಾಡಲಾಯಿತು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಅಗತ್ಯವಾಗಿರುವ ಸಾಧನ ಸಲಕರಣೆಗಳನ್ನು ಉಚಿತವಾಗಿ ವಿತರಿಸಲಾಯಿತು.ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ವೀರೆಂದ್ರಕುಮಾರ್ ದೆಹಲಿಯಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರಿಗೆ ಉಚಿತ ಸಾಧನ ಸಲಕರಣೆಗಳನ್ನು ಸಮರ್ಪಣೆಗೊಳಿಸುವ ರಾಷ್ಟ್ರೀಯ ವಯೋಶ್ರೇಷ್ಠ ಸನ್ಮಾನ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ವರ್ಚುವೆಲ್ ಮೂಲಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ಹಿರಿಯರಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳಲ್ಲಿ ಶೇ. 5ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆದು ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ ಮಾತನಾಡಿ, ಅಂಗವಿಕಲತೆ ಶಾಪವಲ್ಲ. ನಾಗರಿಕರು ಅಂಗವಿಕಲತೆಯನ್ನು ಮೆಟ್ಟಿ ನಿಲ್ಲಬೇಕೆ ಹೊರತು ಕುಗ್ಗಬಾರದು. ಸಮಾಜದಲ್ಲಿ ಪರಾವಲಂಬಿಯಾಗದೇ ಸರ್ಕಾರದ ಸೌಲಭ್ಯಗಳನ್ನು ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದರು.