ಧಾರವಾಡ:
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಹಾಗೂ ಮಹಾನಗರ ಪೊಲೀಸ್ ಇಲಾಖೆ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿದ ಅವರು, ಕಳೆದ ಐದಾರು ತಿಂಗಳಿಂದ ಅಪರಾಧಗಳ ಸಂಖ್ಯೆ ಕಡಿಮೆ ಆಗಿದ್ದರೂ ಸಂಪೂರ್ಣ ನಿಯಂತ್ರಣವಾಗುತ್ತಿಲ್ಲ. ಡ್ರಗ್ಸ್, ಗಾಂಜಾ ಸೇವನೆ, ಮಾರಾಟವಿದ್ದು ಸಂಪೂರ್ಣ ನಿಲ್ಲುತ್ತಿಲ್ಲ. ಕೆಳಮಟ್ಟದಿಂದ ಪೊಲೀಸ್ ಅಧಿಕಾರಿಗಳು ಪ್ರತಿ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ, ತನಿಖೆ ಮಾಡಿ, ನಿಜವಾದ ಅಪರಾಧಿಗಳ ಮೇಲೆ ಕ್ರಮ ಜರುಗಿಸಬೇಕು. ಅಪರಾಧಿ ಕೃತ್ಯದ ಮನೊಭಾವದವರಿಗೆ ಪೊಲೀಸ್ ಅಧಿಕಾರ ತೋರಿಸಿ, ನಿಯಮಾನುಸಾರ ಕಾನೂನು ಕ್ರಮ ಜರುಗಿಸಲು ತಿಳಿಸಿದರು.
ಕಾಲೇಜು, ಸಾರ್ವಜನಿಕ ಸ್ಥಳ ಹಾಗೂ ಗ್ರಾಮ, ಪಟ್ಟಣ ಪ್ರದೇಶಗಳಲ್ಲಿ ಡ್ರಗ್ಸ್, ಗಾಂಜಾ ಅಂತಹ ಅಫೀಮುಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಶಿಕ್ಷಕರನ್ನು, ಸಮಾಜದ ಗಣ್ಯ ವ್ಯಕ್ತಿ, ಜನಾಭಿಪ್ರಾಯ ರೂಪಿಸುವವರನ್ನು ಅಪರಾಧ ಮುಕ್ತ ಜಿಲ್ಲೆ ಮಾಡುವ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದ ಅವರು, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಪೊಲೀಸ್ ಅಧೀಕ್ಷಕರು ಮತ್ತು ಠಾಣಾ, ವೃತ್ತ ಮಟ್ಟದ ಅಧಿಕಾರಿಗಳು ರಾತ್ರಿ ಜಿಲ್ಲೆಯಲ್ಲಿ ಸಂಚರಿಸಿ, ಅನಿರೀಕ್ಷಿತ ಭೇಟಿ ನೀಡಿ, ಶಾಂತಿ, ಕಾನೂನು ಸುವ್ಯವಸ್ಥೆ ಪರಿಶೀಲಿಸಬೇಕು. ಜೊತೆಗೆ ತಮಗೆ ವರದಿ ಸಲ್ಲಿಸಲು ಲಾಡ್ ತಿಳಿಸಿದರು.ಜಿಲ್ಲೆಯು ವಿದ್ಯಾವಂತರ ನಾಡು, ಸಾಂಸ್ಕೃತಿಕ ಬೀಡು, ಸಾಹಿತ್ಯ, ಸಂಸ್ಕೃತಿಯ ನೆಲ ಎಂಬ ಖ್ಯಾತಿ ಪಡೆದಿದೆ. ಅದಕ್ಕೆ ತಕ್ಕಂತೆ ಇಲ್ಲಿಯ ಯುವ ಜನಾಂಗ ವರ್ತಿಸಬೇಕು. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯವಿದೆ. ಈ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಸಿ, ಜಿಲ್ಲಾಡಳಿತ ಕಾರ್ಯೋನ್ಮುಖವಾಗಬೇಕು ಎಂದು ಸಚಿವರು ಸಲಹೆ ನೀಡಿದರು.
ಅಪರಾಧಿಗಳು, ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗವಹಿಸುವವರು, ಶಾಂತಿ, ಸುವ್ಯಸ್ಥೆಗೆ ದಕ್ಕೆ ತರುವವರ ಮೇಲೆ ಮುಲಾಜು ಇಲ್ಲದೆ ಕ್ರಮಕೈಗೊಳ್ಳಬೇಕು. ಯಾರ ಶಿಫಾರಸು, ಒತ್ತಡಗಳಿಗೆ ಒಳಗಾಗದೇ ನಿಯಮಾನುಸಾರ ಕಾನೂನು ಕ್ರಮಕೈಗೊಳ್ಳಿ. ಜಿಲ್ಲೆಯು ಆದಷ್ಟು ಬೇಗನೆ ಡ್ರಗ್ಸ್, ಗಾಂಜಾ ಹಾಗೂ ಅಪರಾಧ ಮುಕ್ತ ಜಿಲ್ಲೆಯಾಗಿ ರೂಪಗೊಳ್ಳಬೇಕು. ಇದಕ್ಕೆ ನಾನು ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರ, ಜನಪ್ರತಿನಿಧಿಗಳ ಸಹಕಾರವಿದೆ.