ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಪತ್ರಿಕಾಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಲಯನ್ಸ್ ಕ್ಲಬ್ ಯಾದಗಿರಿ ಹಾಗೂ ಯಾದಗಿರಿಯ ವಿಬಿಆರ್ ಆಸ್ಪತ್ರೆ ಸಹಯೋಗದೊಂದಿಗೆ, ಕೋಡಾಲ ಹಾಗೂ ನೇರಡಗಂ ಮಠದ ಪೂಜ್ಯ ಪಂಚಮಸಿದ್ದಲಿಂಗ ಸ್ವಾಮೀಜಿ, ಸಂಗಮದ ಕರುಣೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ, ವಡಗೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 4.30ಕ್ಕೆ ಶಿಬಿರ ನಡೆಯಲಿದ್ದು,ಅನೇಕ ತಜ್ಞ ವೈದ್ಯರು ರೋಗಿಗಳ ತಪಾಸಣೆ ಮಾಡಲಿದ್ದಾರೆ. ತಪಾಸಣೆಗೆ ಬರುವ ರೋಗಿಗಳಿಗೆ ಶಿಬಿರದ ಸ್ಥಳದಲ್ಲಿ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದರು.
ರಾಜಕೀಯದಲ್ಲಿದ್ದು, ಅಜಾತಶತ್ರು ಎನ್ನಿಸಿಕೊಂಡಿದ್ದ ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ, ಅಸ್ಪೃಶ್ಯತೆ ನಿವಾರಣೆ, ವರದಕ್ಷಿಣೆ ಪದ್ಧತಿ ನಿವಾರಣೆಗಾಗಿ ಶ್ರಮಿಸಿದ್ದ, ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಮಂತ್ರಿ ದಿ.ವಿಶ್ವನಾಥರೆಡ್ಡಿ ಮುದ್ನಾಳ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿ ಜನಾನುರಾಗಿಯಾಗಿದ್ದ ಮಾಜಿ ಶಾಸಕ ದಿ. ಡಾ.ವೀರಬಸವಂತರೆಡ್ಡಿ ಮುದ್ನಾಳ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಈ ಶಿಬಿರ ಆಯೋಜಿಸಲಾಗಿದೆ ಎಂದರು.ಲಯನ್ಸ್ ಕ್ಲಬ್ ಹಿರಿಯ ಸದಸ್ಯ, ಉದ್ಯಮಿ ರಾಚನಗೌಡ ಮುದ್ನಾಳ ಮಾತನಾಡಿ, ಲಯನ್ಸ್ ಕ್ಲಬ್ ವತಿಯಿಂದ ಮುಂದಿನ ದಿನಗಳಲ್ಲಿ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯಿದ್ದು, ಅದರ ಭಾಗವಾಗಿ ವಡಗೇರಾದಲ್ಲಿ ಮೊದಲಿಗೆ ಬೃಹತ್ ಪ್ರಮಾಣದ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ನೇತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದರು.
ಶಿಬಿರದಲ್ಲಿ ನೇತ್ರ ತಪಾಸಣೆಗೆ ಒಳಗಾದವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದರೆ ಕ್ಲಬ್ ವತಿಯಿಂದ ಉಚಿತವಾಗಿ ಮಹಿಬೂಬ್ ನಗರದ ಲಯನ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಚಿಕಿತ್ಸೆ ಮಾಡಿಸಲಾಗುವುದು. ರೋಗಿಗಳ ಮಹಿಬೂಬ್ ನಗರಕ್ಕೆ ಹೋಗಿ ಬರುವ ಪ್ರಯಾಣ ವ್ಯವಸ್ಥೆ, ಊಟೋಪಚಾರ, ಇತರ ವೆಚ್ಚವನ್ನು ಕ್ಲಬ್‌ನಿಂದ ಭರಿಸಲಾಗುವುದು ಎಂದರು.ಯಾದಗಿರಿ ನಗರದ ಪ್ರಸಿದ್ಧ ವಿಬಿಆರ್ ಆಸ್ಪತ್ರೆಯ ಡಾ.ಅಮೋಘ ಸಿದ್ಧೇಶ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ.ಶಿವಪುತ್ರರೆಡ್ಡಿ ಪಾಟೀಲ, ಲಯನ್ಸ್ ಕ್ಲಬ್ ಮಾಜಿ ಕಾರ್ಯದರ್ಶಿ ಡಾ.ಸಿದ್ಧರಾಜರೆಡ್ಡಿ, ಲಯನ್ಸ್ ಸದಸ್ಯರಾದ ಹೇಮಂತಕುಮಾರ ಕಶೆಟ್ಟಿ, ಸೋಮಶೇಖರ್ ಗಣಬೂರ ಹಲವರು ಹಾಜರಿದ್ದರು.
ಅಟಲ್ ಬಿಹಾರಿ ವಾಜಪೇಯಿ ಕವಿಮನದ ಅಜಾತಶತ್ರುವಾಗಿದ್ದರು. ವಿಶ್ವನಾಥರೆಡ್ಡಿ ಮುದ್ನಾಳ ಅವರು ರಾಜಕೀಯದಲ್ಲಿದ್ದೂ ಸಂತನಂತೆ ಬದುಕು ಸವೆಸಿದವರು. ಡಾ.ವೀರಬಸವಂತರೆಡ್ಡಿ ಮುದ್ನಾಳ ಅವರು ರಾಜಕೀಯಕ್ಕಿಂತಲೂ ರೋಗಿಗಳ ಸೇವೆಯಲ್ಲಿಯೇ ಸಾರ್ಥಕತೆ ಕಂಡವರು. ಅವರ ಹೆಸರಲ್ಲಿ ಶಿಬಿರ ಆಯೋಜನೆ ಮಾಡಲಾಗಿದೆ.ರಾಚನಗೌಡ ಮುದ್ನಾಳ, ಲಯನ್ಸ್ ಕ್ಲಬ್ ಹಿರಿಯ ಸದಸ್ಯ, ಯಾದಗಿರಿ.