ಮಡಿಕೇರಿಯ ಪೌರ ಕಾರ್ಮಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರ

KannadaprabhaNewsNetwork |  
Published : Jul 30, 2025, 12:50 AM IST
ಚಿತ್ರ : 28ಎಂಡಿಕೆ7 : ಮಡಿಕೇರಿಯ ಪೌರ ಕಾರ್ಮಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರ  ಜರುಗಿತು.  | Kannada Prabha

ಸಾರಾಂಶ

ಪೌರಕಾರ್ಮಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಹಾಗೂ ಔಷಧಿಗಳ ವಿತರಣಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನ್ಯಾಷನಲ್ ಮೆಡಿಕೋಸ್ ಸಂಸ್ಥೆಯ ಕೊಡಗು ಘಟಕ ಮತ್ತು ಕೊಡಗು ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ವತಿಯಿಂದ ಮಡಿಕೇರಿ ನಗರಸಭೆ ಪೌರ ಕಾರ್ಮಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಹಾಗೂ ಔಷಧಿಗಳ ವಿತರಣಾ ಕಾರ್ಯಕ್ರಮ ನಡೆಯಿತು.

ನಗರಸಭೆಯ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ನಡೆದ ಶಿಬಿರವನ್ನು ಪೌರಾಯುಕ್ತ ಹೆಚ್.ಆರ್.ರಮೇಶ್ ಹಾಗೂ ಪೌರ ಕಾರ್ಮಿಕ ಸುಂದರ ಅವರು ಉದ್ಘಾಟಿಸಿದರು.

ಪೌರಾಯುಕ್ತ ಹೆಚ್.ಆರ್.ರಮೇಶ್ ಮಾತನಾಡಿ ನಗರದ ಸ್ವಚ್ಛತೆಗಾಗಿ ಪೌರ ಕಾರ್ಮಿಕರು ಬೆಳಗ್ಗಿನಿಂದ ಸಂಜೆಯವರೆಗೆ ಶ್ರಮ ಪಡುತ್ತಾರೆ. ಶ್ರಮಿಕ ಜೀವಿಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು.

ಪೌರ ಕಾರ್ಮಿಕರ ಆರೋಗ್ಯವನ್ನು ಕಾಪಾಡಬೇಕು ಎನ್ನುವ ಉದ್ದೇಶದಿಂದ ನ್ಯಾಷನಲ್ ಮೆಡಿಕೋಸ್ ಸಂಸ್ಥೆ ಮತ್ತು ಕೊಡಗು ಸಂಸ್ಕೃತಿ ಸಿರಿ ಬಳಗ ಆರೋಗ್ಯ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ. ಸಂಘಟಕರಿಗೆ ಪೌರ ಕಾರ್ಮಿಕರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಜಿಲ್ಲಾ ಆಸ್ಪತ್ರೆಯ ತುರ್ತು ಘಟಕ ಮತ್ತು ನ್ಯಾಷನಲ್ ಮೆಡಿಕೋಸ್ ಸಂಸ್ಥೆಯ ಮುಖ್ಯಸ್ಥ ಡಾ.ಮೋಹನ್ ಅಪ್ಪಾಜಿ ಕೋಲೆಯಂಡ ಮಾತನಾಡಿ ನಿರಂತರ ಸ್ವಚ್ಛತಾ ಕಾರ್ಯದ ಮೂಲಕ ಸಮಾಜದ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆಯೂ ಎಚ್ಚರ ವಹಿಸಬೇಕು. ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ನ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಮಾತನಾಡಿ ಪೌರ ಕಾರ್ಮಿಕರು ಕೊರೆಯುವ ಚಳಿ, ಮಳೆಯನ್ನೂ ಲೆಕ್ಕಿಸದೆ ಪ್ರತಿ ದಿನ ಬೆಳಿಗ್ಗೆ ಮಡಿಕೇರಿ ನಗರದ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇವರಿಗಾಗಿ ಆರೋಗ್ಯ ಶಿಬಿರವನ್ನು ಆಯೋಜಿಸುವ ಮೂಲಕ ಅಳಿಲು ಸೇವೆ ಮಾಡುವ ಭಾಗ್ಯ ನಮಗೆ ದೊರೆತ್ತಿದೆ ಎಂದು ತಿಳಿಸಿದರು.

ನ್ಯಾಷನಲ್ ಮೆಡಿಕೋಸ್ ಸಂಸ್ಥೆಯ ಸಹಯೋಗದೊಂದಿಗೆ ಸಿರಿ ಬಳಗ ಟ್ರಸ್ಟ್ ಈಗಾಗಲೇ ಹಲವು ಶಿಬಿರಗಳನ್ನು ಆಯೋಜಿಸಿ ಯಶಸ್ವಿಯಾಗಿದೆ. ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರುಗಳು ಕೂಡ ಶಿಬಿರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವೆಂದರು.

ಟ್ರಸ್ಟಿ ಹಾಗೂ ಸಮಾಜ ಸೇವಕ ಕೆ.ಎಂ.ಬಿ.ಗಣೇಶ್, ನ್ಯಾಷನಲ್ ಮೆಡಿಕೋಸ್ ಸಂಸ್ಥೆಯ ವೈದ್ಯ ವಿದ್ಯಾರ್ಥಿ ಡಾ.ವಿಕ್ರಂ ಶೆಟ್ಟಿ ಮಾತನಾಡಿದರು.

ಪೌರಾಯುಕ್ತರು ಸೇರಿದಂತೆ 35ಕ್ಕೂ ಹೆಚ್ಚು ಪೌರಕಾರ್ಮಿಕರು ಆರೋಗ್ಯ ಶಿಬಿರದ ಲಾಭ ಪಡೆದರು. ಕೊಡಗು ಮೆಡಿಕಲ್ ಕಾಲೇಜ್ ನ ವೈದ್ಯರಾದ ಡಾ.ಬಸವರಾಜು, ಡಾ.ಭರತ್, ಡಾ.ಮಹೇಶ್ವರ, ಡಾ.ಶಾಹಿಲ್, ವೈದ್ಯ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಶ್ರುಶೂಷಕರು ಆರೋಗ್ಯ ತಪಾಸಣೆ ನಡೆಸಿದರು. ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ನ ಉಪಾಧ್ಯಕ್ಷರಾದ ನಿಶಾ ಮೋಹನ್, ಪ್ರಮುಖರಾದ ಈರಮಂಡ ವಿಜಯ್ ಉತ್ತಯ್ಯ, ಸದಸ್ಯರಾದ ಮಂಜುಳಾ ಶಿವಕುಮಾರ್, ಸರಿತಾ ಅಯ್ಯಪ್ಪ, ಸಿಂಧೂರ್ ಅನಿಲ್, ನಗರಸಭೆಯ ಸಿಬ್ಬಂದಿಗಳಾದ ರಂಗಪ್ಪ, ಅಕ್ರಂ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌