ಶ್ರೀ ಗವಿಸಿದ್ಧೇಶ್ವರ ಉಚಿತ ಪ್ರಸಾದ ಹಾಗೂ ವಸತಿ ನಿಲಯದ 5 ಸಾವಿರ ವಿದ್ಯಾರ್ಥಿಗಳು ತಂಗುಬಹುದಾದ ಕಟ್ಟಡ ಲೋಕಾರ್ಪಣೆಯಾಗಿದೆ.
ಕೊಪ್ಪಳ : ಶ್ರೀ ಗವಿಸಿದ್ಧೇಶ್ವರ ಉಚಿತ ಪ್ರಸಾದ ಹಾಗೂ ವಸತಿ ನಿಲಯದ 5 ಸಾವಿರ ವಿದ್ಯಾರ್ಥಿಗಳು ತಂಗುಬಹುದಾದ ಕಟ್ಟಡ ಲೋಕಾರ್ಪಣೆಯಾಗಿದೆ. ಅಕ್ಷರ ಸಂತ ಎಂದೇ ಖ್ಯಾತಿಯಾಗಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಕನ್ನಡಪ್ರಭ "ವರ್ಷದ ವ್ಯಕ್ತಿ " ಹರೇಕಳ ಹಾಜಬ್ಬ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ದಾನಚಿಂತಾಮಣಿ ಹುಚ್ಚಮ್ಮ ಜಂಟಿಯಾಗಿ ಉದ್ಘಾಟನೆ ಮಾಡಿದ್ದಾರೆ.
ಮುಂಡರಗಿಯ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದಾರೆ.
25 ಕೋಟಿ ಅನುದಾನಕ್ಕೆ ಆಗ್ರಹ:
ಶ್ರೀ ಗವಿಸಿದ್ಧೇಶ್ವರ ಉಚಿತ ಪ್ರಸಾದ ಹಾಗೂ ವಸತಿ ನಿಲಯದಲ್ಲಿ ಈಗಾಗಲೇ ನಾಲ್ಕುವರೆ ಸಾವಿರ ವಿದ್ಯಾರ್ಥಿಗಳು ಆಸರೆ ಪಡೆದಿದ್ದು, ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯ ನೀಡುವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಸಂಕಲ್ಪಕ್ಕೆ ವ್ಯಾಪಕ ಪ್ರಸಂಶೆ ವ್ಯಕ್ತವಾಗುತ್ತಿದ್ದು, ಹಲವರು ಬೆಂಬಲಿಸಿ ಅಭಿಯಾನವನ್ನೇ ಪ್ರಾರಂಭಿಸಿದ್ದಾರೆ.
ಈ ನಡುವೆ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಸೇರಿದಂತೆ ಎಲ್ಲ ಸಂಪುಟ ದರ್ಜೆ ಸಚಿವರಿಗೆ ಪತ್ರ ಬರೆದು, ಶ್ರೀ ಗವಿಮಠದ ಮಹಾನ್ ಕಾರ್ಯಕ್ಕೆ ₹25 ಕೋಟಿ ರುಪಾಯಿ ನೀಡುವಂತೆ ಮನವಿ ಮಾಡಿದ್ದಾರೆ.
ಕಳೆದೆರಡು ವರ್ಷಗಳ ಹಿಂದೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ. ಈ ವರ್ಷ ಮೂರುವರೆ ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇನ್ನು ಪ್ರವೇಶ ಬಯಸಿ ಬಂದವರ ಸಂಖ್ಯೆ ವಿಪರೀತ ಇದೆ. ಅವರಿಗೆಲ್ಲ ಪ್ರವೇಶ ನೀಡಲು ಕಟ್ಟಡ ಸೇರಿದಂತೆ ಮೂಲಭೂತ ಸೌಕರ್ಯ ಸಾಕಾಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದರು. ಇದಕ್ಕೆ ರಾಜ್ಯಾದ್ಯಂತ ಭಾರಿ ಸ್ಪಂದನೆ ವ್ಯಕ್ತವಾಯಿತು ಮತ್ತು ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ₹ 10 ಕೋಟಿ ವಿಶೇಷ ಅನುದಾನ ಘೋಷಣೆ ಮಾಡಿದ್ದರು. ಆದರೆ, ಕೊಟ್ಟಿದ್ದು ಕೇವಲ ₹2 ಕೋಟಿ ರುಪಾಯಿ. ನಂತರ ಸರ್ಕಾರ ಬದಲಾಗಿದ್ದರಿಂದ ಉಳಿದ ಅನುದಾನ ಬರಲೇ ಇಲ್ಲ.
ಇದನ್ನೇ ಪ್ರಸ್ತಾಪ ಮಾಡಿರುವ ಗುರುಮಿಠಕಲ್ ಶಾಸಕ ಶರಣಗೌಡ, ವಿಧಾನಸಭೆಯಲ್ಲಿಯೂ ಪ್ರಸ್ತಾಪ ಮಾಡಿ ಮಾತನಾಡಿದ್ದರು. ಈಗ 5 ಸಾವಿರ ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡ ಪೂರ್ಣಗೊಂಡು ಲೋಕಾರ್ಪಣೆ ಆಗುತ್ತಿರುವುದರಿಂದ ಮತ್ತೆ ಸಿಎಂ ಮತ್ತು ಡಿಸಿಎಂ ಹಾಗೂ ಸಚಿವರಿಗೆ ಪತ್ರ ಬರೆದು, ಹಿಂದೆ ಘೋಷಣೆ ಮಾಡಿದ್ದ ವಿಶೇಷ ಅನುದಾನವನ್ನು ಒಳಗೊಂಡು ₹25 ಕೋಟಿ ರುಪಾಯಿ ನೀಡುವಂತೆ ಮನವಿ ಮಾಡಿದ್ದಾರೆ.
ಗವಿಮಠದ ಉಚಿತ ಶಿಕ್ಷಣ ಯೋಜನೆಗಳಿಗೆ ಅನುದಾನಕ್ಕೆ ಸಿವಿಸಿ ಆಗ್ರಹ:
ಅನ್ನ, ಅಕ್ಷರ ಹಾಗೂ ಆಧ್ಯಾತ್ಮದ ತ್ರಿವಳಿ ಸಂಗಮವಾದ ಶ್ರೀ ಗವಿಮಠಕ್ಕೆ ಈ ಹಿಂದೆ ಸರ್ಕಾರ ಆಶ್ವಾಸನೆ ನೀಡಿದಂತೆ ₹10 ಕೋಟಿ ಅನುದಾನವನ್ನು ವಿದ್ಯಾರ್ಥಿಗಳ ಉಚಿತ ಪ್ರಸಾದ ವಸತಿ ನಿಲಯಕ್ಕೆ ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, 5000 ಮಕ್ಕಳ ಉಚಿತ ಪ್ರಸಾದ ನಿಲಯವು ಜು. 1ರಂದು ಲೋಕಾರ್ಪಣೆಗೊಳ್ಳುತ್ತಿದೆ. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿದ್ಯಾರ್ಥಿಗಳ ಉಚಿತ ಪ್ರಸಾದ ನಿಲಯಕ್ಕೆ ₹10 ಕೋಟಿ ಅನುದಾನ ಒದಗಿಸುವ ಕುರಿತು ಶ್ರೀಮಠಕ್ಕೆ ಭೇಟಿ ನೀಡಿದ ಸಂದರ್ಭ ಪ್ರಸ್ತಾಪಿಸಿದ್ದರು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡತನದ ಹಿನ್ನೆಲೆಯಿಂದ ಬಂದವರು. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆದು ಕಷ್ಟಪಟ್ಟು ಉನ್ನತ ಹುದ್ದೆಗೆ ಏರಿದ್ದಾರೆ. ಬಡವರ ಬಗೆಗಿನ ಅವರ ಕಾಳಜಿ ಅನನ್ಯ ಹಾಗೂ ಪ್ರಶ್ನಾತೀತ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಕೊಪ್ಪಳದ ಸಂಬಂಧ ನಾಲ್ಕು ದಶಕಗಳಷ್ಟು ಹಳೆಯದು. ಹೀಗಾಗಿ ಮುಖ್ಯಮಂತ್ರಿ ಈ ಕೂಡಲೇ ಶ್ರೀ ಮಠದ ಬಡವರ ಬಗೆಗಿನ ಕಾಳಜಿ ಹಾಗೂ ದುರ್ಬಲರ ಬದುಕಿಗೆ ಆಶಾಕಿರಣವಾಗಬಲ್ಲ ಶೈಕ್ಷಣಿಕ ಯೋಜನೆಗೆ ಸರ್ಕಾರ ವಾಗ್ದಾನ ಮಾಡಿದಂತೆ ₹10 ಕೋಟಿಯನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.