ಶಿಗ್ಗಾವಿ: ಉಚಿತ ಬೇಸಿಗೆ ಶಿಬಿರಗಳು ಹುಬ್ಬಳ್ಳಿ, ಧಾರವಾಡ, ದಾವಣಗೆರೆ ನಗರಗಳಲ್ಲಿ ಆಯೋಜನೆ ಮಾಡಲಾಗುತ್ತಿತ್ತು. ಆದರೆ, ಇಂದು ಶಿಗ್ಗಾವಿ ಪಟ್ಟಣದಲ್ಲಿ ಭರತ ಸಂಸ್ಥೆಯಿಂದ ಆಗುತ್ತಿರುವುದು ವಿಶೇಷವಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಶಕುಂತಲಾ ದುಂಡಿಗೌಡ್ರ ಹೇಳಿದರು.
ಮುಖ್ಯ ಅತಿಥಿ, ಬಾಲಗಾಯಕಿ ಮಹನ್ಯಾ ಪಾಟೀಲ ಅನೇಕ ಚಲನಚಿತ್ರ ಗೀತೆಗಳನ್ನು ತಮ್ಮ ಮಧುರ ಕಂಠದಿಂದ ಹಾಡಿದರು.
ಪ್ರಾಸ್ತಾವಿಕವಾಗಿ ಪ್ರೊ. ಶಶಿಕಾಂತ ರಾಠೋಡ ಮಾತನಾಡಿ, ತಮ್ಮ ನ್ಯಾಯಸಮ್ಮತ ದುಡಿಮೆಯಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿರುವ ಶ್ರೀಕಾಂತ ದುಂಡಿಗೌಡ್ರ ಕಾರ್ಯ ಶ್ಲಾಘನೀಯ. ಉಚಿತ ಬೇಸಿಗೆ ಶಿಬಿರವನ್ನು ಕಳೆದ ೨ ವರ್ಷಗಳಿಂದ ಮಾಡಬೇಕು ಅಲ್ಲದೇ ೨೧ ದಿನಗಳ ಬೇಸಿಗೆ ಶಿಬಿರವನ್ನು ಮಾಡಬೇಕು ಎಂದು ಶ್ರೀಕಾಂತ ದುಂಡಿಗೌಡ್ರ ಸಂಕಲ್ಪವಾಗಿತ್ತು ಹಾಗೂ ಶಿಬಿರವು ರಚನಾತ್ಮಕತೆಯ ಜೊತೆಗೆ ಸಾಂಸ್ಕೃತಿಕ ಮತ್ತು ಎಲ್ಲ ಆಯಾಮಗಳು ಇರಲಿ ಹಾಗೂ ಶಿಬಿರಾರ್ಥಿಗಳ ಜೊತೆಗೆ ಪಾಲಕ, ಪೋಷಕರ ಮನೋಭಾವ ಬದಲಾವಣೆಗೆ ವಿಶೇಷ ವೇದಿಕೆಯಾಗಿತ್ತು ಎಂದರು.ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಉಚಿತ ಬೇಸಿಗೆ ಶಿಬಿರ ಮಾಡಬೇಕು ಎಂದು ಕನಸ್ಸು ಕಂಡೆವು. ಅದನ್ನು ಸಾಕಾರಗೊಳಿಸಿದವರು ಶಿಕ್ಷಕರು, ಶಿಬಿರಾರ್ಥಿಗಳು ಮತ್ತು ಪಾಲಕರು ಎಂದರು.
ಶಿಬಿರಾರ್ಥಿಗಳಿಂದ ವಿಶೇಷ ನೃತ್ಯಗಳು ಮತ್ತು ನಾಟಕದ ರೂಪಕಗಳು ನಡೆದವು. ಶಿಕ್ಷಕ ಸೇತ ಸನದಿ ಸ್ವಾಗತಿಸಿದರು. ನವೀನ ಸಾಸನೂರ ಕಾರ್ಯಕ್ರಮ ನಿರೂಪಿಸಿದರು.