ಕಾರವಾರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಜಿಲ್ಲೆಯ ಗ್ರಾಪಂ ಅರಿವು ಕೇಂದ್ರದಲ್ಲಿ ಗ್ರಾಪಂ ನೇತೃತ್ವದಲ್ಲಿ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ.15 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಗ್ರಾಮಾಂತರ ಪ್ರದೇಶದಲ್ಲಿರುವ ಮಕ್ಕಳ ಓದುವ, ಬರೆಯುವ, ಕಲಾತ್ಮಕ ಚಟುವಟಿಕೆಗಳಿಗೆ ಮತ್ತು ಆಟಗಳಿಗೆ ಒತ್ತು ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳು ತಮ್ಮ ಬೇಸಿಗೆ ರಜೆಯನ್ನು ಮನರಂಜನೀಯವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಈ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದ್ದು, ಶಿಬಿರದಲ್ಲಿ ಓದುವ, ಬರೆಯುವ, ಅಂಕಿ ಸಂಖ್ಯೆ ವಿಜ್ಞಾನ ವಿಷಯಗಳು, ನಾಯಕತ್ವ ಮತ್ತು ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಲಾಗಿದೆ. ಪರಿಸರ ಕಾಳಜಿ, ಸಾಮಾಜಿಕ ಕಾಳಜಿ ಬೆಳೆಸುವುದು ಮತ್ತು ಸ್ಥಳೀಯ ಸಂಸ್ಕೃತಿ, ಜೀವನ ಶೈಲಿ, ಇತಿಹಾಸ ಅಂಶಗಳನ್ನು ತಿಳಿಯುವಂತೆ ಮಾಡುವುದು ಹಾಗೂ ಮಕ್ಕಳಲ್ಲಿರುವ ಸೃಜನಾತ್ಮಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು ಸಹ ಈ ಬೇಸಿಗೆ ಶಿಬಿರದ ಆಶಯವಾಗಿರುತ್ತದೆ.
ಬೇಸಿಗೆ ಶಿಬಿರದ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸ, ಅಂಕಿ-ಸಂಖ್ಯೆ ಮತ್ತು ವಿಜ್ಞಾನ ವಿಷಯಗಳು, ನೈತಿಕತೆ ಮತ್ತು ನಾಯಕತ್ವ ವಿಷಯಗಳು ಮತ್ತು ಕಾರ್ಯ ಯೋಜನೆಗಳನ್ನು ರೂಪಿಸುವ ಕೌಶಲ್ಯವನ್ನು ಅಭಿವೃದ್ಧಿಪಡಿಸಿ, ಗ್ರಾಮೀಣ ಪ್ರದೇಶದ ಮಕ್ಕಳನ್ನು ಸಮಾಜದ ಪ್ರಜ್ಞಾವಂತ ಪ್ರಜೆಗಳನ್ನಾಗಿ ಮಾಡುವ ಸದುದ್ದೇಶವನ್ನು ಹೊಂದಲಾಗಿದೆ.