ಸಂಘಟನೆಗಳು ನೌಕರರ ನೋವು-ನಲಿವುಗಳಿಗೆ ಸ್ಪಂದಿಸಬೇಕು. ಶಿಕ್ಷಕರಿಗೆ ಬೋಧನೆಗಿಂತ ಬೋಧಕೇತರ ಕೆಲಸಗಳ ಹೊರೆ ಹೆಚ್ಚಾಗುತ್ತಿರುವುದರಿಂದ ಮಾನಸಿಕ ಒತ್ತಡ ಉಂಟಾಗುತ್ತಿದೆ. ಆದ್ದರಿಂದ ಶಿಕ್ಷಕರನ್ನು ಬೋಧಕೇತರ ಕಾರ್ಯಗಳಿಂದ ಮುಕ್ತಗೊಳಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಡಾ. ರವಿ ಎಲ್. ಗುಂಜಿಕರ ತಿಳಿಸಿದರು.
ನಗರದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.10ರಲ್ಲಿ ಜರುಗಿದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗದಗ ಶಹರ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಗುರುಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ಶಿಕ್ಷಕರ ನೋವು-ನಲಿವು, ಕುಂದು-ಕೊರತೆ ಹಾಗೂ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುವ ವ್ಯವಸ್ಥೆ ರೂಪಿಸಿರುವುದು ಶ್ಲಾಘನೀಯ. ನೂತನ ಪದಾಧಿಕಾರಿಗಳು ಶಿಕ್ಷಕರ ಹಿತಕ್ಕಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ.ಎಂ. ಹಿರೇಮಠ ಮಾತನಾಡಿ, ಗದಗ ಶಹರ ಘಟಕವು ಶಿಕ್ಷಕರಿಗಾಗಿ ಹಲವು ಉತ್ತಮ ಕಾರ್ಯ ಕೈಗೊಂಡಿದ್ದು, ಮುಂದೆಯೂ ನೂತನ ಪದಾಧಿಕಾರಿಗಳು ಅದನ್ನು ಮುಂದುವರಿಸಿ ಶಿಕ್ಷಕರಿಗೆ ಉತ್ತಮ ಸೇವೆ ನೀಡಬೇಕು ಎಂದರು.
ರಾಷ್ಟ್ರಪ್ರಶಸ್ತಿ ವಿಜೇತ ಎಸ್.ಎನ್. ಬಳ್ಳಾರಿ ಮಾತನಾಡಿ, ಶಿಕ್ಷಕರ ಸಂಘಟನೆಗಳ ಕಾರ್ಯವೈಖರಿ, ನಡೆದು ಬಂದ ಹಾದಿ ಹಾಗೂ ಪದಾಧಿಕಾರಿಗಳ ಜವಾಬ್ದಾರಿಗಳ ಕುರಿತು ಮಾರ್ಗದರ್ಶನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಹರ ಘಟಕದ ತಾಲೂಕ ಅಧ್ಯಕ್ಷ ಎಸ್.ಕೆ. ಮಂಗಳಗುಡ್ಡ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಶೆಟ್ಟಪ್ಪನವರ್, ಡಿ.ಎಸ್. ತಳವಾರ, ಪ್ರಭಯ್ಯನಮಠ, ಪ್ರಶಾಂತ ಕನಾಜೆ, ಐ.ಎ. ಗಾಡಗೋಳಿ, ಡಿ.ವೈ. ಕಂಬಳಿ, ಹೊಸಮನಿ, ಶೋಭಾ ಅಣ್ಣಿಗೇರಿ, ಕುಮಾರ್ ತಳವಾರ, ಶೋಭಾ ಕರ್ಲವಾಡ, ರಶೀದ್ ಸೇರಿದಂತೆ ಕಾರ್ಯಕಾರಿ ಸಮಿತಿ ಹಾಗೂ ಸಲಹಾ ಮಂಡಳಿ ಸದಸ್ಯರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.