ಹುಬ್ಬಳ್ಳಿ: ಮಾಧ್ಯಮದ ಸ್ವಾತಂತ್ರ‍್ಯ ಎಲ್ಲಿ ಹೋಗಿದೆ, ಎಲ್ಲಿ ಮಾಯವಾಗಿದೆ ಎಂಬುದನ್ನು ಪತ್ರಕರ್ತರು ಪ್ರಶ್ನೆ ಮಾಡಿಕೊಳ್ಳಬೇಕು. ಉದ್ಯಮಿಗಳ ಕೈಗೆ ಮಾಧ್ಯಮ ಸಿಕ್ಕಾಗಿನಿಂದ ಮಾಧ್ಯಮ ಸ್ವಾತಂತ್ರ‍್ಯ ಯಾತ್ರೆಗೆ ಹೊರಟಿದೆ ಎಂದು ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ಹೇಳಿದರು.
ಮಾಧ್ಯಮಕ್ಕೆ ಯಾವತ್ತೂ ಸವಾಲು ಇರಬಾರದು. ಆದರೆ, ಮಾಧ್ಯಮದ ಕಾರ್ಯಕರ್ತರಿಗೆ ಸವಾಲುಗಳು ಕಾಡಬೇಕು. ಜನ ಓದುವ ಸುಖ ಬಯಸಬೇಕೇ ಹೊರತು ಮನರಂಜನೆಗಾಗಿ ಮಾಧ್ಯಮ ಬಳಸಬಾರದು. ಮಾಧ್ಯಮ ಉದ್ಯಮವಾದ ನಂತರ ಬೆಳಕು ಕತ್ತಲಾಗುತ್ತಿದ್ದು, ಕತ್ತಲಿಗೆ ಬಣ್ಣ ಬಳಿಯುವ ಕಾರ್ಯವಾಗುತ್ತಿದೆ. ಜವಾಬ್ದಾರಿ ಇಲ್ಲದ ಸಮಾಜದಲ್ಲಿ ಬೇಜವಾಬ್ದಾರಿ ರಾರಾಜಿಸುತ್ತದೆ ಎಂದು ವಿಷಾಧಿಸಿದರು.
ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ ಮಾತನಾಡಿ, ದೃಶ್ಯ ಮತ್ತು ಸಾಮಾಜಿಕ ಮಾಧ್ಯಮಗಳ ಆರ್ಭಟದ ಮಧ್ಯೆಯೂ ಮುದ್ರಣ ಮಾಧ್ಯಮ ತನ್ನ ಮಹತ್ವ ಉಳಿಸಿಕೊಂಡಿದೆ. ಹಿಂದಿನ ಪತ್ರಿಕೋದ್ಯಮಕ್ಕೂ ಪ್ರಸ್ತುತ ಇರುವ ಪತ್ರಿಕೋದ್ಯಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಂದಿನ ಪತ್ರಕರ್ತರು ಅಯೋಗ್ಯರನ್ನು ಬೆಳೆಸುತ್ತಿರುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು.ಪ್ರಸ್ತುತ ದಿನಗಳಲ್ಲಿ ಪತ್ರಿಕೆಗಳ ಓದು ಕ್ಷೀಣಿಸುತ್ತಿದ್ದು, ಅದಕ್ಕೆ ಕಾರಣ ಕಂಡುಕೊಳ್ಳುವ ಪ್ರಯತ್ನವಾಗಬೇಕು. ಸಾಮಾಜಿಕ ಮಾಧ್ಯಮಗಳ ಕೆಲ ನಕಲಿ ಪತ್ರಕರ್ತರಿಂದ ಮಾಧ್ಯಮದ ಮೇಲೆ ವಿಶ್ವಾಸಾರ್ಹತೆ ಕ್ಷೀಣಿಸುತ್ತಿದ್ದು, ಮುಖ್ಯ ವಾಹಿನಿಗಳ ಪತ್ರಕರ್ತರು ಈ ಕುರಿತು ಗಮನಹರಿಸಬೇಕು ಎಂದರು.
ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿ ಹಿರಿಯ ಪತ್ರಕರ್ತ ಸನತ್‌ಕುಮಾರ ಬೆಳಗಲಿ ಮಾತನಾಡಿ, ಹಲವು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಕ್ಕಾಗಿ ನನ್ನನ್ನು ಪ್ರಶಸ್ತಿಗೆ ಗುರುತಿಸಲಾಗಿದೆ ಎಂದರು. ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.