ತ್ಯಾಗ, ಬಲಿದಾನಗಳ ಫಲವಾಗಿ ಸ್ವಾತಂತ್ರ್ಯ ಲಭ್ಯ: ಶಾಸಕ ಡಿ.ಜಿ.ಶಾಂತನಗೌಡ

KannadaprabhaNewsNetwork | Published : Aug 16, 2024 12:48 AM

ಸಾರಾಂಶ

ಹೊನ್ನಾಳಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತ್ಯಾಗ, ಬಲಿದಾನ, ಮತ್ತು ತತ್ವಾದರ್ಶಗಳ ಫಲವಾಗಿ ಈ ಮಹತ್ವ ಪೂರ್ಣ ಸ್ವಾತಂತ್ರ್ಯ ನಮ್ಮದಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ತಾಲೂಕು ಆಡಳಿತದಿಂದ ಗುರುವಾರ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೌಲ್ಯ ಮತ್ತು ತತ್ವಾದರ್ಶಗಳು ಪ್ರತಿಯೊಬ್ಬ ಭಾರತೀಯನ ಉಸಿರಾಗುವ ಅಗತ್ಯವಿದೆ. ನಮ್ಮ ಪೂರ್ವಜರು ಸ್ವಾತಂತ್ರ್ಯ ಚಳವಳಿಗಳ ಮೂಲಕ ನಮಗೆ ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಿದ್ದಾರೆ. ಇದನ್ನು ಕಾಪಾಡುವ ಜವಾಬ್ದಾರಿ ಭವಿಷ್ಯದ ಪ್ರಜೆಗಳಾದ ಯುವ ಪೀಳಿಗೆಯ ಮೇಲಿದೆ ಎಂದು ಹೇಳಿದರು.

ದೇಶಕ್ಕಾಗಿ ಹೋರಾಡುವ ಮತ್ತು ದೇಶಕ್ಕಾಗಿಯೇ ನಾನು ಎಂಬ ಪರಿಕಲ್ಪನೆ ಆಧಾರದಲ್ಲಿ ನಾವೆಲ್ಲರೂ ಬದುಕಬೇಕಾಗಿದೆ. ಇತ್ತೀಚೆಗೆ ಪ್ರಕೃತಿವಿಕೋಪ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದೇವೆ. ಪಕ್ಕದ ಕೇರಳ ರಾಜ್ಯದ ವಯನಾಡಿಲ್ಲಿ ಜನರ ಬದುಕೆ ಮುಳುಗಡೆಯಾಗಿದೆ, ಅತಿವೃಷ್ಟಿ, ಮತ್ತು ಅನಾವೃಷ್ಟಿಗಳೆರಡು ನಮ್ಮ ಅನ್ನದಾತನನ್ನು ಹಲವಾರು ವರ್ಷಗಳಿಂದ ಕಾಡುತ್ತಾ ಬರುತ್ತಿದೆ. ಇದಕ್ಕೆ ಕಾರಣ ಅತಿಯಾದ ಪ್ರಕೃತಿ ವಿರುದ್ಧದ ಮಾನವ ಚಟುವಟಿಕೆಗಳು.

ಬಲಿಷ್ಠ ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಂಕಣಬದ್ಧವಾಗಿದೆ. ಒಂದು ಜವಾಬ್ದಾರಿಯುತ ಸರ್ಕಾರದಲ್ಲಿ ಶಾಸಕನಾಗಿ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಅಭಿವೃದ್ಧಿಗೆ ತಾನು ಸದಾ ಸಿದ್ಧನಿದ್ದೇನೆ ಎಂದು ಹೇಳಿದರು.

ನಾಡಿನ ಜನಜೀವನ ಮಟ್ಟವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಮ್ಮಸರ್ಕಾರ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಗ್ಯಾರಂಟಿ ಅನುಷ್ಟಾನಕ್ಕೆ ತರುವ ಮೂಲಕ ಮಾತಿಗೆ ತಪ್ಪದ ವಚನಬದ್ಧ ಸರ್ಕಾರವಾಗಿದೆ ಎಂದರು. ಈ ಬಾರಿ ವಿಶೇಷವಾಗಿ ಪುರಸಭೆವತಿಯಿಂದ ಪೌರ ಕಾರ್ಮಿಕರಿಗೆ ಸಮವಸ್ತ್ರ ನೀಡಿ ಅವರೂ ಕೂಡ ಸ್ವಾತಂತ್ರ್ಯ ದಿನಾಚರಣೆಯ ಪಥ ಸಂಚಲನದಲ್ಲಿ ಭಾಗವಹಿಸುವಂತೆ ವ್ಯವಸ್ಥೆ ಮಾಡಿದ ಪುರಸಭೆ ಅಧಿಕಾರಿಗಳ ಕ್ರಮಗಳನ್ನು ಶ್ಲಾಘಿಸಿದರು.

ಉಪವಿಭಾಗಾಧಿಕಾರಿ ವಿ. ಅಭಿಷೇಕ್ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸಂದೇಶ ಭಾಷಣ ಮಾಡಿ ವಿಶ್ವದಲ್ಲೇ ವಿವಿಧತೆಯಲ್ಲಿ ಏಕತೆ ಸಾಧಿಸಿ ಪವಿತ್ರ ಸಂವಿಧಾನದ ಮೂಲಕ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ನೀಡುವಲ್ಲಿ ದೇಶ ಯಶಸ್ವಿಯಾಗಿದೆ. ಅನೇಕ ಸವಾಲುಗಳ ನಡುವೆಯೂ ಕೂಡ ಅಭಿವೃದ್ಧಿ ಪಥದಲ್ಲಿ ದಾಪುಗಾಲು ಇಡುತ್ತಿರುವ ಭಾರತವನ್ನು ಮತ್ತಷ್ಟು ಅಭಿವೃದ್ಧಿಯತ್ತ ಸಾಗಿಸಲು ಎಲ್ಲರೂ ಕೂಡ ಶ್ರಮಿಸಬೇಕು ಎಂದು ಹೇಳಿದರು.

ಧ್ವಜವಂದನೆ, ಪಟ್ಟಣದ ಅನೇಕ ಶಾಲಾ ಮಕ್ಕಳಿಂದ, ಪೊಲೀಸ್, ಗೃಹರಕ್ಷಕ ದಳ, ಮಾಜಿ ಸೈನಿಕರಿಂದ ಪಥಸಂಚಲನ, ಶಾಲಾ ಮಕ್ಕಳಿಂದ ವಿವಿಧ ರೀತಿಯ ಕವಾಯತು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ತಹಸೀಲ್ದಾರ್ ಪಟ್ಟರಾಜ ಗೌಡ, ತಾಪಂ ಇಒ ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ, ಪಿಐ ಸುನಿಲ್ ಕುಮಾರ್, ಪಶುವೈದ್ಯಾಧಿಕಾರಿ ಡಾ.ವಿಶ್ವನಟೇಶ್, ಗ್ರೇಡ್ -2 ತಹಸೀಲ್ದಾರ್ ಸುರೇಶ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರನಿಧಿಗಳು, ಶಿಕ್ಷಕರುಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು, ಉಪಸ್ಥಿತರಿದ್ದರು.

Share this article